ಸಾರಾಂಶ
ವಾಷಿಂಗ್ಟನ್: ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎನಿಸಿಕೊಂಡಿದ್ದ ಜೋ ಬೈಡೆನ್ (82) ಅವರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ನೀಡುವ ಯತ್ನಗಳು ನಡೆದಿವೆ ಎಂದು ಶ್ವೇತಭವನ ತಿಳಿಸಿದೆ.
ಬೈಡನ್‌ಗೆ ಮೂತ್ರವಿಸರ್ಜನೆ ವೇಳೆ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರು ಶುಕ್ರವಾರ ಪರೀಕ್ಷೆ ನಡೆಸಿದಾಗ, ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯ ಸಹಾಯಕ ಗ್ರಂಥಿಯಾಗಿರುವ ಪ್ರೋಸ್ಟೇಟ್‌ನಲ್ಲಿ ಗಂಟುಗಳಿರುವುದು ಪತ್ತೆಯಾಗಿದೆ. ಇದು ಈಗಾಗಲೇ ಮೂಳೆಗಳಿಗೂ ಹರಡಿದೆ.
ಈ ಕ್ಯಾನ್ಸರ್‌ನ ಅಪಾಯವನ್ನು ಗ್ಲೀಸನ್ ಸ್ಕೋರ್‌ನಲ್ಲಿ 6ರಿಂದ 10ರ ವರೆಗೆ ಅಂಕ ನೀಡುವ ಮೂಲಕ ಅಳೆಯಬಹುದು. ಈ ಬಗ್ಗೆ ಮಾಹಿತಿ ನೀಡಿರುವ ವೈಟ್ ಹೌಸ್, ‘ಈ ಕ್ಯಾನ್ಸರ್ ಅಪಾಯಕಾರಿಯಾದರೂ, ಪ್ರೊಜೆಸ್ಟಿರೋನ್‌ನಂತಹ ಹಾರ್ಮೋನ್‌ಗಳೊಂದಿಗೆ ಸ್ಪಂದಿಸುವ ಕಾರಣ, ಅದನ್ನು ಸುಲಭವಾಗಿ ನಿರ್ವಹಿಸಬಹುದು. ಗ್ಲೀಸನ್ ಸ್ಕೋರ್‌ನಲ್ಲಿ ಬೈಡನ್‌ರಿಗಿರುವ ಕ್ಯಾನ್ಸರ್ 9 ಅಂಕ ಪಡೆದಿದ್ದು, ಅಪಾಯಕಾರಿ ಎಂದು ಪರಿಗಣಿಸಲಾಗಿದೆ’ ಎಂದು ಹೇಳಿದೆ.ಈ ಮೊದಲು ಬೈಡೆನ್ ಚರ್ಮದ ಕ್ಯಾನ್ಸರ್‌ನಿಂದಲೂ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆದಿದ್ದರು. 2015ರಲ್ಲಿ ಇವರ ಪುತ್ರ ಬ್ಯೂ ಬೈಡೆನ್ ಕೂಡ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು.
ನಾಯಕರ ಪ್ರತಿಕ್ರಿಯೆ : ಬೈಡೆನ್‌ರ ರಾಜಕೀಯ ವಿರೋಧಿಯಾಗಿರುವ ಡೊನಾಲ್ಡ್ ಟ್ರಂಪ್, ‘ಜೋ ಬೇಗ ಮತ್ತು ಯಶಸ್ವಿಯಾಗಿ ಚೇತರಿಸಿಕೊಳ್ಳಲಿ’ ಎಂದು ಹಾರೈಸಿದ್ದಾರೆ. ಬೈಡೆನ್‌ರನ್ನು ಹೋರಾಟಗಾರ ಎಂದು ಕರೆದಿರುವ ಕಮಲಾ ಹ್ಯಾರಿಸ್, ಮತ್ತು ಮಾಜಿ ಅಧ್ಯಕ್ಷ ಒಬಾಮಾ ಅವರಿಗಾಗಿ ಪ್ರಾರ್ಥಿಸಿದ್ದಾರೆ.
ಬೇಗ ಗುಣಮುಖರಾಗಿ-ಮೋದಿ : ಬೈಡೆನ್‌ರಲ್ಲಿ ಪ್ರೋಸ್ಟೇಟ್ ಕ್ಯಾನ್ಸರ್ ಪತ್ತೆಯಾಗಿರುವುದರ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಬೈಡೆನ್ ಆರೋಗ್ಯದ ಬಗ್ಗೆ ಕಳವಳವಿದೆ. ಅವರು ಬೇಗ ಸಂಪೂರ್ಣ ಗುಣಮುಖರಾಗಲಿ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಪ್ರಾರ್ಥಿಸಿದ್ದಾರೆ.