ಆರೋಗ್ಯ ವಿಮೆಗೆ ಇನ್ನು ವಯಸ್ಸಿನ ಮಿತಿ ಇಲ್ಲ!

| Published : Apr 24 2024, 02:17 AM IST

ಸಾರಾಂಶ

ಆರೋಗ್ಯ ವಿಮೆ ಪಡೆಯಲು ಇದ್ದ 65 ವರ್ಷಗಳ ವಯೋಮಿತಿಯನ್ನು ರದ್ದು ಮಾಡಿ ಭಾರತೀಯ ವಿಮಾ ನಿಯಂತ್ರಣಾ ಪ್ರಾಧಿಕಾರ ಆದೇಶ ಹೊರಡಿಸಿದೆ. ಹೀಗಾಗಿ ಇನ್ನು ಮುಂದೆ 65 ವರ್ಷ ಮೇಲ್ಪಟ್ಟವರು ಕೂಡ ಸುಲಭವಾಗಿ ಆರೋಗ್ಯ ವಿಮೆ ಪಡೆಯಬಹುದಾಗಿದೆ.

ನವದೆಹಲಿ: ಆರೋಗ್ಯ ವಿಮೆ ಪಡೆಯಲು ಇದ್ದ 65 ವರ್ಷಗಳ ವಯೋಮಿತಿಯನ್ನು ರದ್ದು ಮಾಡಿ ಭಾರತೀಯ ವಿಮಾ ನಿಯಂತ್ರಣಾ ಪ್ರಾಧಿಕಾರ ಆದೇಶ ಹೊರಡಿಸಿದೆ. ಹೀಗಾಗಿ ಇನ್ನು ಮುಂದೆ 65 ವರ್ಷ ಮೇಲ್ಪಟ್ಟವರು ಕೂಡ ಸುಲಭವಾಗಿ ಆರೋಗ್ಯ ವಿಮೆ ಪಡೆಯಬಹುದಾಗಿದೆ.

ವಯೋಮಿತಿ ರದ್ದುಪಡಿಸುವುದರ ಜೊತೆಗೆ ಗ್ರಾಹಕರಿಗೆ ಲಾಭ ತರುವಂಥ ಇತರೆ ಹಲವು ಸೂಚನೆಗಳನ್ನೂ ಪ್ರಾಧಿಕಾರ ನೀಡಿದೆ.ಆದೇಶದಲ್ಲಿ ಏನಿದೆ?:

ಆರೋಗ್ಯ ವಿಮೆಗೆ ಇದ್ದ ವಯೋಮಿತಿ ರದ್ದು. ಇನ್ನು ಎಲ್ಲಾ ವಯೋಮಾನದವರಿಗೂ ಅವರಿಗೆ ಹೊಂದುವಂಥ ಆರೋಗ್ಯ ವಿಮೆ ಸೇವೆಯನ್ನು ವಿಮಾ ಕಂಪನಿಗಳು ನೀಡಬೇಕು.

ಕೆಲವೊಂದು ಪೂರ್ವ ಆರೋಗ್ಯ ಸಮಸ್ಯೆಗಳಿಗೆ ವಿಮೆ ಪಡೆದ ಬಳಿಕ ಇರುತ್ತಿದ್ದ ಕಾಯುವಿಕೆ ಅವಧಿ (ವೇಟಿಂಗ್‌ ಪಿರಿಯಡ್‌)ಯನ್ನು 48 ತಿಂಗಳಿಂದ 36 ತಿಂಗಳಿಗೆ ಇಳಿಸಲಾಗಿದೆ.

ವಿಮಾ ಕಂಪನಿಗಳು ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಮಕ್ಕಳು, ಹೆರಿಗೆ ಅಥವಾ ಇನ್ಯಾವುದೇ ವಿಭಾಗಗಳಿಗೆ ಪ್ರತ್ಯೇಕ ವಿಮಾ ಉತ್ಪನ್ನಗಳನ್ನು ಬಿಡುಗಡೆ ಮಾಡಬಹುದು.

ಯಾವುದೇ ರೀತಿಯ ಪೂರ್ವ ಆರೋಗ್ಯ ಸಮಸ್ಯೆ ಹೊಂದಿದ್ದರೂ ಅಂಥವರಿಗೆ ವಿಮಾ ಕಂಪನಿಗಳು ವಿಮಾ ಸೇವೆ ನಿರಾಕರಿಸುವಂತಿಲ್ಲ. ಅಂದರೆ ಕ್ಯಾನ್ಸರ್‌, ಹೃದಯ, ಏಡ್ಸ್‌ ಮೊದಲಾದ ಆರೋಗ್ಯ ಸಮಸ್ಯೆ ಹೊಂದಿದ್ದವರು ಕೂಡಾ ಆರೋಗ್ಯ ವಿಮೆ ಪಡೆಯಬಹುದು.

ವಿಮೆ ನೀಡುವಾಗ ಕಂಪನಿಗಳು ವಿಮೆ ವ್ಯಾಪ್ತಿಗೆ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಸೇರ್ಪಡೆ ಮಾಡಬೇಕು. ಪೂರ್ವ ಆರೋಗ್ಯ ಸಮಸ್ಯೆಗಳನ್ನು ವಿಮೆ ವ್ಯಾಪ್ತಿಯಿಂದ ಹೊರಗೆ ಇಡುವಂತಿಲ್ಲ.