ಅಚ್ಚರಿಯ ವಿದ್ಯಮಾನವೊಂದರಲ್ಲಿ ಬಿಹಾರ ಸಚಿವ ನಿತಿನ್‌ ನಬೀನ್‌ (45) ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ಭಾನುವಾರ ನೇಮಕ ಮಾಡಲಾಗಿದೆ. ಬಿಜೆಪಿ ಸಂಸದೀಯ ಮಂಡಳಿ ಈ ಘೋಷಣೆ ಮಾಡಿದೆ.

- ಬಿಜೆಪಿಯಿಂದ ಮತ್ತೊಂದು ಅಚ್ಚರಿ । ಹೊಸತಲೆಮಾರಿಗೆ ಪಟ್ಟ । ಮೋದಿ ಅಭಿನಂದನೆ- ಯುವ ಸಾರಥಿಗೆ ಮುಂದೆ ಅಧ್ಯಕ್ಷ ಸ್ಥಾನ? । ಹುದ್ದೆ ಸಿಕ್ಕಿದರೆ ಕಿರಿಯ, ಮೊದಲ ಬಿಹಾರಿ

---

ಪರಿಶ್ರಮಿ ಕಾರ್ಯಕರ್ತನಿತಿನ್‌ ನಬೀನ್‌ ಅವರು ಪರಿಶ್ರಮಿ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದಾರೆ. ಸಂಘಟನಾ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇವರು, ಜನರ ಆಕಾಂಕ್ಷೆಗಳನ್ನು ಈಡೇರಿಸಲು ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಅವರ ಶಕ್ತಿ ಮತ್ತು ಸಮರ್ಪಣೆ ಮುಂಬರುವ ದಿನಗಳಲ್ಲಿ ಪಕ್ಷವನ್ನು ಬಲಪಡಿಸುತ್ತದೆ ಎಂಬ ವಿಶ್ವಾಸವಿದೆ.ನರೇಂದ್ರ ಮೋದಿ ಪ್ರಧಾನ ಮಂತ್ರಿ--ತಳಮಟ್ಟದ ಯುವನಾಯಕಗೆ ಮನ್ನಣೆವಿದ್ಯಾರ್ಥಿಯಾಗಿದ್ದಾಗ ಎಬಿವಿಪಿ ಮೂಲಕ ಬಿಜೆಪಿ ಸಂಪರ್ಕಕ್ಕೆ ಬಂದ ನಿತಿನ್‌ ನಬೀನ್‌, 2000ದಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಬಿಹಾರ ಬಿಜೆಪಿಯ ಯುವನಾಯಕನಾಗಿ ಗುರುತಿಸಿಕೊಂಡರು. 26ನೇ ವಯಸ್ಸಿನಲ್ಲೇ ಮೊದಲ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಹಿರಿಮೆ ನಿತಿನ್‌ರದ್ದು. ಪಟನಾದ ಬಂಕಿಪುರದಿಂದ 5 ಬಾರಿ (ಸತತ 4 ಸಲ) ಶಾಸಕರಾಗಿದ್ದಾರೆ. ಸುದೀರ್ಘ ರಾಜಕೀಯ ಇತಿಹಾಸ ಹೊಂದಿರುವ ಇವರು, ಕಾಯಸ್ಥ ಸಮುದಾಯಕ್ಕೆ ಸೇರಿದ ಹಿರಿಯ ಬಿಜೆಪಿ ನಾಯಕ ದಿ. ನಬಿನ್‌ ಕಿಶೋರ್‌ ಸಿನ್ಹಾ ಅವರ ಪುತ್ರ. ಇವರು ನಗರ ಮತ್ತು ಮೂಲಸೌಕರ್ಯ-ಕೇಂದ್ರಿತ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

==

ನವದೆಹಲಿ: ಅಚ್ಚರಿಯ ವಿದ್ಯಮಾನವೊಂದರಲ್ಲಿ ಬಿಹಾರ ಸಚಿವ ನಿತಿನ್‌ ನಬೀನ್‌ (45) ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ಭಾನುವಾರ ನೇಮಕ ಮಾಡಲಾಗಿದೆ. ಬಿಜೆಪಿ ಸಂಸದೀಯ ಮಂಡಳಿ ಈ ಘೋಷಣೆ ಮಾಡಿದೆ.

ಹಾಲಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅವಧಿ ಈಗಾಗಲೇ ಮುಗಿದಿದ್ದು, ಅವರ ಉತ್ತರಾಧಿಕಾರಿಯನ್ನು ನೇಮಿಸಲಾಗುವುದು ಎಂದು ಭಾವಿಸಲಾಗಿತ್ತು. ಆದರೆ ನಡ್ಡಾ ಅವರ ಅಧೀನದಲ್ಲಿ ಈಗ ಕಾರ್ಯಾಧ್ಯಕ್ಷರನ್ನು ಬಿಜೆಪಿ ನೇಮಿಸಿರುವುದು ಅಚ್ಚರಿ ಮೂಡಿಸಿದೆ. ಆದರೆ ಮುಂದೆ ಇವರನ್ನೇ ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ. ಇವರು ಅಧ್ಯಕ್ಷರಾದರೆ ಬಿಜೆಪಿಯ ಅತಿ ಕಿರಿಯ ಅಧ್ಯಕ್ಷ ಮತ್ತು ಅಧ್ಯಕ್ಷ ಪದವಿಗೆ ಏರಿದ ಮೊದಲ ಬಿಹಾರಿ ಎನ್ನಿಸಿಕೊಳ್ಳಲಿದ್ದಾರೆ.

ನಡ್ಡಾ ಅವರು 2019ರ ಜೂ.17ರಂದು ಕಾರ್ಯಾಧ್ಯಕ್ಷ ಹುದ್ದೆಗೆ ನೇಮಕವಾಗಿದ್ದರು. ಈ ಮೂಲಕ ಮೊದಲ ಬಾರಿ ಬಿಜೆಪಿಗೆ ಕಾರ್ಯಾಧ್ಯಕ್ಷರು ಬಂದಿದ್ದರು. ಬಳಿಕ ಅವರು ಅಧ್ಯಕ್ಷರಾಗಿ 2020ರಲ್ಲಿ ಪದೋನ್ನತಿ ಪಡೆದರು. ಹೀಗಾಗಿ ನಬೀನ್‌ ಕೂಡ ಮುಂದೆ ಪದೋನ್ನತಿ ಪಡೆಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ನಡ್ಡಾ ಅಧ್ಯಕ್ಷರಾದ ಬಳಿಕ ಯಾರೂ ಕಾರ್ಯಾಧ್ಯಕ್ಷ ಇರಲಿಲ್ಲ.