ಸಾರಾಂಶ
ಬಿಹಾರದಲ್ಲಿ ಚುನಾವಣೆಗೆ ಕೆಲವೇ ದಿನಗಳಿವೆ ಎನ್ನುವಾಗ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ್‌ಸುರಾಜ್ ಪಕ್ಷದ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಜೆಡಿಯು ಅಭ್ಯರ್ಥಿ ಮಾಜಿ ಗ್ಯಾಂಗ್‌ಸ್ಟರ್ ಹಾಗೂ ಮಾಜಿ ಶಾಸಕ ಅನಂತ್ ಸಿಂಗ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪಟನಾ : ಬಿಹಾರದಲ್ಲಿ ಅಸೆಂಬ್ಲಿ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿವೆ ಎನ್ನುವಾಗ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ್‌ಸುರಾಜ್ ಪಕ್ಷದ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಮೊಕಾಮ ಕ್ಷೇತ್ರದ ಜೆಡಿಯು ಅಭ್ಯರ್ಥಿಯೂ ಆದ ಮಾಜಿ ಗ್ಯಾಂಗ್‌ಸ್ಟರ್ ಹಾಗೂ ಮಾಜಿ ಶಾಸಕ ಅನಂತ್ ಸಿಂಗ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಗುರುವಾರ ಮೊಕಾಮದಲ್ಲಿ ನಡೆದಿದ್ದ ಜನ್ ಸುರಾಜ್ ಕಾರ್ಯಕರ್ತ ದುಲಾರ್ ಚಂದ್ ಯಾದವ್ (76) ತಮ್ಮ ಪಕ್ಷದ ಅಭ್ಯರ್ಥಿ ಪಿಯೂಶ್ ಪ್ರಿಯದರ್ಶಿನಿ ಅವರ ಪರ ಪ್ರಚಾರ ನಡೆಸುತ್ತಿದ್ದಾಗ ಕೊಲೆಗೀಡಾಗಿದ್ದರು. ಈ ಸಂಬಂಧ ಅವರ ಮೊಮ್ಮಗ ನೀಡಿದ್ದ ದೂರಿನಂತೆ ಎಫ್‌ಐಆರ್ ದಾಖಲಾಗಿತ್ತು. ಹತ್ಯೆ ಬಳಿಕ ಪೊಲೀಸರು ಸಿಂಗ್ ಮೇಲೆ ಕಣ್ಣಿಟ್ಟಿದ್ದರು. ಶನಿವಾರ ತಡರಾತ್ರಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ. ಅನಂತ್‌ರನ್ನು ಕೋರ್ಟು 14 ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
ಗುಂಡು ಹಾರಿಸಿದ್ದೇ ಅನಂತ್:
ಅನಂತ್ ಸಿಂಗ್ ಮತ್ತು ದುಲಾರ್ ಚಂದ್ ಯಾದವ್, ಇತರರ ನಡುವೆ ಪ್ರಚಾರದ ವೇಳೆ ಅ.30ರಂದು ಘರ್ಷಣೆ ನಡೆದಿತ್ತು. ಬಳಿಕ ಅನಂತ್ ಸಿಂಗ್ ಬೆಂಬಲಿಗರು ಯಾದವ್ ಮೇಲೆ ಹಲ್ಲೆ ನಡೆಸಿದರೆ, ಕೊನೆಗೆ ಖುದ್ದು ಅನಂತ್ ಸಿಂಗ್ ಅವರೇ ಗುಂಡು ಹಾರಿಸಿ ಯಾದವ್‌ರನ್ನು ಹತ್ಯೆ ಮಾಡಿದರು. ಆ ಬಳಿಕ ಇತರರು ಆತನ ಮೇಲೆ ಎಸ್‌ಯುವಿ ವಾಹನ ಹರಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಬಾಹುಬಲಿ ಎಂದೇ ಕುಖ್ಯಾತಿ:
ಹತ್ಯೆಗೀಡಾದ ಯಾದವ್ ಹಾಗೂ ಬಂಧಿತ ಅನಂತ್ ಸಿಂಗ್ 1990ರ ಅವಧಿಯಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್ ಆಗಿದ್ದವರು. ಹಿಂದಿನಿಂದಲೂ ಇಬ್ಬರ ನಡುವೆ ವೈಮನಸ್ಯ ಇತ್ತು. ಇದು ಕೊಲೆಗೆ ಕಾರಣ ಎನ್ನಲಾಗಿದೆ.
ಬಿಹಾರದಲ್ಲಿ ಬಾಹುಬಲಿ ಎಂದೇ ಕುಖ್ಯಾತಿ ಪಡೆದ ಅನಂತ್ ಸಿಂಗ್ ಮೇಲೆ 28 ಕ್ರಿಮಿನಲ್ ಪ್ರಕರಣಗಳಿದ್ದು, ಕೊಲೆ, ಕ್ರಿಮಿನಲ್ ಪಿತೂರಿ, ಚಿತ್ರಹಿಂಸೆ, ಅಪಹರಣ ಮತ್ತು ಹಲ್ಲೆ ಕೇಸುಗಳು ಇದರಲ್ಲಿ ಸೇರಿವೆ. ಈ ಮುಂಚೆ ಜೆಡಿಯು ಹಾಗೂ ಆರ್‌ಜೆಡಿ ಎರಡನ್ನೂ ಪ್ರತಿನಧಿಸಿ ಶಾಸಕರಾಗಿದ್ದ ಅನಂತ್ ಸಿಂಗ್ ಈಗ ಜೆಡಿಯುನಲ್ಲಿದ್ದಾರೆ. 2022ರಲ್ಲಿ ಒಂದು ಪ್ರಕರಣದಲ್ಲಿ ಇವರು ದೋಷಿ ಎಂದು ಸಾಬೀತಾದ ಕಾರಣ ಮೊಕಾಮ ಕ್ಷೇತ್ರದ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಆ ಕ್ಷೇತ್ರವನ್ನು ಅನಂತ್ ಸಿಂಗ್ ಪತ್ನಿ ನೀಲಂ ದೇವಿ ಪ್ರತಿನಿಧಿಸುತ್ತಿದ್ದಾರೆ.
ಬ್ರಹ್ಮಣಭೋಜನ ನಡೆಸಲ್ಲ- ಮೃತನ ಮೊಮ್ಮಗ ಶಪಥ:
ಹತ್ಯೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಐದೂ ಮಂದಿ ಆರೋಪಿಗಳನ್ನು ಬಂಧಿಸಿ, ಶಿಕ್ಷೆಗೆ ಗುರಿಪಡಿಸುವವರೆಗೂ ಅಜ್ಜನ ಸಾವಿನ ಬ್ರಹ್ಮಭೋಜ್ ಅನ್ನು (ಬ್ರಾಹ್ಮಣ ಭೋಜನ ಅಥವಾ ವೈಕುಂಠ ಸಮಾರಾಧನೆ) ನಡೆಸಲ್ಲ ಎಂದು ದುಲಾರ್ ಚಂದ್ ಯಾದವ್ ಮೊಮ್ಮಗ ಶಪಥ ಮಾಡಿದ್ದಾರೆ.
)
)

;Resize=(128,128))
;Resize=(128,128))