ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಚುನಾವಣಾ ನಿಧಿಗೆ ಬಿಲ್‌ ಗೇಟ್ಸ್‌ ₹ 415 ಕೋಟಿ

| Published : Oct 24 2024, 12:51 AM IST / Updated: Oct 24 2024, 04:36 AM IST

ಸಾರಾಂಶ

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಡೆಮಾಕ್ರೆಟ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ, ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಭರ್ಜರಿ 415 ಕೋಟಿ ರು.ದೇಣಿಗೆ ನೀಡಿದ್ದಾರೆ.

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಡೆಮಾಕ್ರೆಟ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ, ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಭರ್ಜರಿ 415 ಕೋಟಿ ರು.ದೇಣಿಗೆ ನೀಡಿದ್ದಾರೆ. ಕಮಲಾ ಪರ ದೇಣಿಗೆ ಸಂಗ್ರಹಿಸುತ್ತಿರುವ ಸರ್ಕಾರೇತರ ಸಂಸ್ಥೆಯೊಂದಕ್ಕೆ ಅವರು ಈ ಹಣ ಪಾವತಿ ಮಾಡಿದ್ದಾರೆ. ಈ ಮೂಲಕ ಕಮಲಾ ಪರ ಬಿಲ್‌ ಬ್ಯಾಟಿಂಗ್‌ ಮಾಡಿದ್ದಾರೆ. ನ.5ರಂದು ನಡೆವ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್ ವಿರುದ್ಧ ಹಾಲಿ ಉಪಾಧ್ಯಕ್ಷೆ ಕಮಲಾ ಕಣಕ್ಕೆ ಇಳಿದಿದ್ದಾರೆ.

ಬಾಸ್ಮತಿಯೇತರ ಅಕ್ಕಿ ರಫ್ತು ಮೇಲಿನ ನಿರ್ಬಂಧ ತೆರವು ಮಾಡಿದ ಕೇಂದ್ರ

ನವದೆಹಲಿ: ಬಾಸ್ಮತಿಯೇತರ ಅಕ್ಕಿ ರಫ್ತಿನ ಮೇಲೆ ಪ್ರತಿ ಟನ್‌ಗೆ ಕೇಂದ್ರ ಸರ್ಕಾರ ಹೇರಿದ್ದ 490 ಡಾಲರ್‌ (₹41,150) ಕನಿಷ್ಠ ರಫ್ತು ಬೆಲೆ ಮಿತಿಯನ್ನು ಬುಧವಾರ ತೆಗೆದುಹಾಕಿದೆ. ಈ ಮೂಲಕ ರಫ್ತು ಉತ್ತೇಜನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ), ಈ ಆದೇಶ ಹೊರಡಿಸಿದೆ. ಕಳೆದ ವರ್ಷ ಜುಲೈನಲ್ಲಿ ಕೇಂದ್ರ ಸರ್ಕಾರವು ದೇಶದಲ್ಲಿ ಅಕ್ಕಿ ಬೆಲೆ ನಿಯಂತ್ರಣದಲ್ಲಿಡಲು ರಫ್ತಿನ ಮೇಲೆ ನಿರ್ಬಂಧ ಹೇರಿತ್ತು. ಬಳಿಕ ಸೆಪ್ಟೆಂಬರ್‌ 28ರಂದು ನಿರ್ಬಂಧ ತೆರವುಗೊಳಿಸಿ, ಕನಿಷ್ಠ ರಫ್ತು ಬೆಲೆಯನ್ನು ನಿಗದಿಪಡಿಸಿತ್ತು. ಈಗ ಸರ್ಕಾರದ ಬಳಿಕ ಅಕ್ಕಿ ಹೇರಳವಾಗಿ ದಾಸ್ತಾನಿರುವ ಕಾರಣ ಮಿತಿಯನ್ನು ತೆರವುಗೊಳಿಸಿ ರೈತರಿಗೆ ಸುಗಮಗೊಳಿಸಿದೆ.

ಕೋವಿಡ್‌ ಬಳಿಕ ಡಿಜಿಟಲ್‌ ಪಾವತಿ ಏರಿಕೆ: ಆದರೂ ನಗದೇ ಕಿಂಗ್‌

ನವದೆಹಲಿ: ಭಾರತದಲ್ಲಿ ಯುಪಿಐ ಜಾರಿ ಬಳಿಕ ವಿಶೇಷವಾಗಿ ಕೋವಿಡ್‌ ನಂತರದ ದಿನಗಳಲ್ಲಿ ಡಿಜಿಟಲ್‌ ಪಾವತಿಯು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಆರ್‌ಬಿಐನ ವರದಿಯೊಂದು ಹೇಳಿದೆ. ಆದರೂ ಹಣಕಾಸು ವ್ಯವಹಾರದಲ್ಲಿ ನಗದು ಪ್ರಮಾಣವು ಶೇ.60ರಷ್ಟಿದೆ ಎಂದು ಅದು ಹೇಳಿದೆ. ವರದಿ ಅನ್ವಯ, 2021-2024 ಅವಧಿಯಲ್ಲಿ ಡಿಜಿಟಲ್‌ ಪಾವತಿ ಪಾಲು ಶೇ.14-19ರಿಂದ ಶೇ.40-48ಕ್ಕೆ ಹೆಚ್ಚಿದೆ. ನಗದು ಪ್ರಮಾಣವು ಶೇ.81-86 ರಿಂದ ಶೇ.52-60 ಕುಸಿದಿದೆ. ಪ್ರಮುಖವಾಗಿ ಕೋವಿಡ್‌ ಬಂದ ಬಳಿಕ ಯುಪಿಐ ಸರಾಸರಿ ವಹಿವಾಟು ಪ್ರಮಾಣವು 2016-17ರ ₹3,872 ನಿಂದ 2023-24ರಲ್ಲಿ ₹1,525ಕ್ಕೆ ಇಳಿಕೆಯಾಗಿದೆ ಎಂದು ವರದಿ ಹೇಳಿದೆ.

ಶೇಖ್‌ ಹಸೀನಾ ಪದಚ್ಯುತಿ ಬಳಿಕ ಇದೀಗ ಬಾಂಗ್ಲಾ ಅಧ್ಯಕ್ಷರ ಪದಚ್ಯುತಿಗೆ ಯತ್ನ

ಢಾಕಾ: ಬಾಂಗ್ಲಾ ಮೀಸಲು ಹೋರಾಟ ಮುಗಿದ ಬೆನ್ನಲ್ಲೇ ಇದೀಗ ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್‌ ಶಹಾಬುದ್ದೀನ್‌ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಾಕಾರರು ಅಧ್ಯಕ್ಷರ ಅರಮನೆ ಬಂಗಾ ಭವನಕ್ಕೆ ಮುತ್ತಿಗೆ ಹಾಕಿದ್ದಾರೆ. ಈ ಹಿಂದೆ ಶೇಖ್‌ ಹಸೀನಾ ಸರ್ಕಾರ ಉರುಳಲು ಕಾರಣವಾಗಿದ್ದ ಪ್ರತಿಭಟನಾಕಾರರ ಗುಂಪು ಮಂಗಳವಾರ ಅರಮನೆಗೆ ಮುತ್ತಿಗೆ ಹಾಕುವ ಯತ್ನ ಮಾಡಿದೆ. ಆದರೆ ಸ್ಥಳದಲ್ಲಿ ನಿಯೋಜಿತ ಸೇನೆ, ಪ್ರತಿಭಟನಾರರ ಪ್ರಯತ್ನವನ್ನು ವಿಫಲಗೊಳಿಸಿದೆ.ಶೇಖ್‌ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಕ್ಕೆ ಯಾವುದೇ ದಾಖಲೆಗಳು ಇಲ್ಲ ಎಂದು ಶಹಾಬುದ್ದೀನ್‌ ಹೇಳಿದ ಬೆನ್ನಲ್ಲೇ ಈ ಪ್ರತಿಭಟನೆ ಆರಂಭವಾಗಿದೆ.

ಪನ್ನೂನ್‌ ತನಿಖೆ ವಿಷಯದಲ್ಲಿ ಭಾರತದಿಂದ ಅರ್ಥಪೂರ್ಣ ಹೊಣೆಗಾರಿಗೆ ನಿರೀಕ್ಷೆ: ಅಮೆರಿಕ

ವಾಷಿಂಗ್ಟನ್‌: ರಷ್ಯಾದಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ದೇಶಗಳ ಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿರುವ ಹೊತ್ತಿನಲ್ಲೇ, ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್ ಪನ್ನೂ ವಿಷಯದಲ್ಲಿ ಭಾರತವನ್ನು ಕೆರಳಿಸುವ ಯತ್ನವನ್ನು ಅಮೆರಿಕದ ಮಾಡಿದೆ. ಪನ್ನೂ ಹತ್ಯೆಗೆ ಅಮೆರಿಕದಲ್ಲಿ ನಡೆದ ವಿಫಲ ಹತ್ಯೆ ಸಂಚಿನ ಬಗ್ಗೆ ಭಾರತದಿಂದ ಅರ್ಥಪೂರ್ಣ ಹೊಣೆಗಾರಿಕೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಅಮೆರಿಕ ಹೇಳಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕದ ವಿದೇಶಾಂಗ ಇಲಾಖೆಯ ಉಪವಕ್ತಾರ ವೇದಾಂತ್‌ ಪಟೇಲ್‌, ‘ಈ ತನಿಖೆಯ ಫಲಿತಾಂಶದ ಆಧಾರದ ಮೇಲೆ ಭಾರತದ ಹೊಣೆಗಾರಿಕೆಯನ್ನು ನಿರೀಕ್ಷಿಸುತ್ತೇವೆ. ತನಿಖೆಯಲ್ಲಿ ಅರ್ಥಪೂರ್ಣ ಹೊಣೆಗಾರಿಕೆ ಇರುವವರೆಗೂ ನಾವು ತೃಪ್ತರಾಗುವುದಿಲ್ಲ ಎಂದು ತಿಳಿಸಿದ್ದಾರೆ.