2 ದಿನಗಳು ಯಾಕೆ? ಈಗಲೇ ರಾಜೀನಾಮೆ ಕೊಡಿ: ಅರವಿಂದ ಕೇಜ್ರಿವಾಲ್‌ ನಡೆ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಲೇವಡಿ

| Published : Sep 16 2024, 01:50 AM IST / Updated: Sep 16 2024, 04:51 AM IST

ಸಾರಾಂಶ

ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಎರಡು ದಿನದಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನಡೆ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಲೇವಡಿ ಮಾಡಿ, ತರಾಟೆಗೆ ತೆಗೆದುಕೊಂಡಿವೆ.

ನವದೆಹಲಿ: ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಎರಡು ದಿನದಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನಡೆ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಲೇವಡಿ ಮಾಡಿ, ತರಾಟೆಗೆ ತೆಗೆದುಕೊಂಡಿವೆ.

ಎರಡು ದಿನ ಅಥವಾ 48 ಗಂಟೆಗಳು ಏಕೆ? ಈಗಲೇ ರಾಜೀನಾಮೆ ನೀಡಲಿ. ಹಿಂದೆಯೂ ಕೇಜ್ರಿವಾಲ್‌ ಇದೇ ರೀತಿ ನಾಟಕ ಮಾಡಿದ್ದರು ಎಂದು ಬಿಜೆಪಿ ಮೂದಲಿಸಿದ್ದರೆ, ಕೇಜ್ರಿವಾಲ್‌ದು ಬರೀ ಗಿಮಿಕ್‌ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಕೇಜ್ರಿಯದ್ದು ಡ್ರಾಮಾ- ಬಿಜೆಪಿ:  ‘ಸಚಿವಾಲಯಕ್ಕೆ ಹೋಗಲು ಆಗುವುದಿಲ್ಲ, ಸಹಿ ಮಾಡಲು ಆಗುವುದಿಲ್ಲ. ಹೀಗಾಗಿ ಮುಖ್ಯಮಂತ್ರಿಯಾಗಿರುವುದರಲ್ಲಿ ಏನಿದೆ ಎಂದು ಜನರು ಕೇಳುತ್ತಿದ್ದಾರೆ. 48 ತಾಸು ಏಕೆ? ಈಗಲೇ ಕೇಜ್ರಿವಾಲ್‌ ರಾಜೀನಾಮೆ ನೀಡಲಿ. ಚುನಾವಣೆಗೆ ಬಿಜೆಪಿ ಸಿದ್ಧವಾಗಿದೆ. 25 ವರ್ಷಗಳ ಬಳಿಕ ಅಧಿಕಾರಕ್ಕೆ ಬರುತ್ತೇವೆ’ ಎಂದು ಬಿಜೆಪಿ ನಾಯಕ ಹರೀಶ್‌ ಖುರಾನಾ ಹೇಳಿದ್ದಾರೆ. ಪತ್ನಿಯನ್ನು ಮುಖ್ಯಮಂತ್ರಿ ಮಾಡುವ ಯೋಜನೆಯ ಭಾಗವಾಗಿ ಕೇಜ್ರಿ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಪೂನಾವಾಲಾ ಹೇಳಿದ್ದಾರೆ.

ಮತ್ತೊಂದೆಡೆ, ‘ಕೇಜ್ರಿ ಹಿಂದೆಯೇ ರಾಜೀನಾಮೆ ಕೊಡಬೇಕಿತ್ತು. ಅವರು ಮತ್ತೊಮ್ಮೆ ಸಿಎಂ ಆಗಲ್ಲ. ಇದೆಲ್ಲಾ ಗಿಮಿಕ್‌ ’ಎಂದು ಕಾಂಗ್ರೆಸ್‌ ನಾಯಕ ಸಂದೀಪ್‌ ದೀಕ್ಷಿತ್‌ ಕುಟುಕಿದ್ದಾರೆ.

==

ಕೇಜ್ರಿ ನನ್ನ ಮಾತು ಕೇಳಲಿಲ್ಲ: ಅಣ್ಣಾ ಕಿಡಿ

ರಾಳೇಗಣ ಸಿದ್ಧಿ (ಪುಣೆ): ರಾಜಕೀಯಕ್ಕೆ ಹೋಗಬೇಡ ಎಂದು ಅರವಿಂದ ಕೇಜ್ರಿವಾಲ್‌ಗೆ ಹೇಳಿದ್ದೆ. ಈಗ ಅದರ ಫಲ ಉಣ್ಣುತ್ತಿದ್ದಾನೆ ಎಂದು ಕೇಜ್ರಿ ಅವರ ಮಾಜಿ ಗುರು ಹಾಗೂ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕಿಡಿಕಾರಿದ್ದಾರೆ.ಕೇಜ್ರಿ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಜಕೀಯಕ್ಕೆ ಸೇರದೇ ಜನಸೇವೆ ಮಾಡೋಣ ಅಂತ ಮೊದಲಿನಿಂದಲೂ ಹೇಳಿದ್ದೆ. ಹಲವು ವರ್ಷಗಳಿಂದ ಜೊತೆಯಾಗಿ ದುಡಿದಿದ್ದವು. ಇದನ್ನೇ ಮುಂದುವರಿಸೋಣ ಎಂದಿದ್ದೆ. ಆದರೆ ನನ್ನ ಮಾತು ಕೇಳದ ಆತ ರಾಜಕೀಯಕ್ಕೆ ಹೋದ. ಇಂದು ಏನಾಗಬೇಕೋ ಅದು ಆಗಿದೆ’ ಎಂದರು.