ವೈದ್ಯೆ ಅತ್ಯಾಚಾರ ಮತ್ತು ಕೊಲೆ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಬಂದ್‌ ವೇಳೆ ಹಿಂಸೆ, ಗುಂಡಿನ ದಾಳಿ

| Published : Aug 29 2024, 12:57 AM IST / Updated: Aug 29 2024, 04:49 AM IST

ವೈದ್ಯೆ ಅತ್ಯಾಚಾರ ಮತ್ತು ಕೊಲೆ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಬಂದ್‌ ವೇಳೆ ಹಿಂಸೆ, ಗುಂಡಿನ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಬಿಜೆಪಿ ಕರೆ ನೀಡಿದ್ದ ಪಶ್ಚಿಮ ಬಂಗಾಳ ಬಂದ್‌ ಭಾಗಶಃ ಯಶಸ್ವಿಯಾಗಿದೆ. ಬಂದ್‌ ವೇಳೆ ಹಿಂಸಾಚಾರ ನಡೆದಿದ್ದು, ಗುಂಡಿನ ದಾಳಿಗಳು ಕೂಡ ನಡೆದಿವೆ.

 ಕೋಲ್ಕತಾ :  ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಬಿಜೆಪಿ ಕರೆ ನೀಡಿದ್ದ ಪಶ್ಚಿಮ ಬಂಗಾಳ ಬಂದ್‌ ಭಾಗಶಃ ಯಶಸ್ವಿಯಾಗಿದೆ. ಬಂದ್‌ ವೇಳೆ ಹಿಂಸಾಚಾರ ನಡೆದಿದ್ದು, ಗುಂಡಿನ ದಾಳಿಗಳು ಕೂಡ ನಡೆದಿವೆ.

ಬಿಜೆಪಿಗರು ಬುಧವಾರ ಕರೆ ನೀಡಿದ್ದ 12 ತಾಸುಗಳ ಬಂದ್‌ ಬೆಳಿಗ್ಗೆ 6 ಗಂಟೆಗೆ ಆರಂಭವಾಯಿತು. ಮಾಜಿ ಸಂಸದರಾದ ರೂಪಾ ಗಂಗೂಲಿ, ಲಾಕೆಟ್‌ ಚಟರ್ಜಿ, ರಾಜ್ಯಸಭಾ ಸಂಸದರಾದ ಸಮಿಕ್‌ ಭಟ್ಟಾಚಾರ್ಯ, ಶಾಸಕಿ ಅಗ್ನಿಮಿತ್ರಾ ಪೌಲ್‌, ಸಂಸದ ಮನೋಜ್‌ ಟಿಗ್ಗಾ ಮುಂತಾದವರು ರಾಜ್ಯದ ವಿವಿಧೆಡೆ ರಸ್ತೆ ತಡೆ, ಅಂಗಡಿಗಳನ್ನು ಬಂದ್‌ ಮಾಡಿಸುವಾಗ ಪೊಲೀಸರು ವಶಕ್ಕೆ ಪಡೆದರು. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಬಿಜೆಪಿ ಮುಖಂಡರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದು, ಹಿಂಸಾಚಾರಕ್ಕೆ ಕಾರಣವಾಯಿತು.

ಬಿಜೆಪಿಗರ ಮೇಲೆ ಗುಂಡಿನ ದಾಳಿ: ಉತ್ತರ 24 ಪರಗಣ ಜಿಲ್ಲೆಯ ಭಟ್ಪಾರಾ ಎಂಬಲ್ಲಿ ತನ್ನ ಸ್ಥಳೀಯ ನಾಯಕರಾದ ಪ್ರಿಯಾಂಗು ಪಾಂಡೆ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಪಾಂಡೆ ಪಾರಾಗಿದ್ದರೂ, ಕಾರಿನ ಚಾಲಕನಿಗೆ ಗುಂಡೇಟು ತಗುಲಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಪೊಲೀಸರು ಅವರಿಬ್ಬರೂ ಕೆಲ ಜನರಿಂದ ಹಲ್ಲೆಗೊಳಗಾಗಿದ್ದಾರೆ ಅಷ್ಟೆ ಎಂದು ಹೇಳಿದ್ದಾರೆ. ಗುಂಡಿನ ದಾಳಿ ಆರೋಪದಿಂದ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಟಿಎಂಸಿಯ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಮಾಜಿ ಸಂಸದ ಅರ್ಜುನ್‌ ಸಿಂಗ್‌ ಆರೋಪಿಸಿದ್ದಾರೆ.

ಮನೆಯಲ್ಲೇ ಉಳಿದ ಜನರು: ಬಂದ್‌ ಕಾರಣ ರಾಜ್ಯದ ಬಹುತೇಕ ನಗರಗಳಲ್ಲಿ ಹೆಚ್ಚಿನ ಜನರು ಮನೆಗಳಲ್ಲೇ ಉಳಿದರು. ಹೀಗಾಗಿ ನಗರ, ಪಟ್ಟಣ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟುಗಳು ಮಂಕಾಗಿದ್ದವು. ಕೋಲ್ಕತಾದ ಬೀದಿಗಳು ಎಂದಿನಂತೆ ಗಿಜಿಗುಡುತ್ತಿರಲಿಲ್ಲ. ವಾಹನ ಸಂಚಾರ ವಿರಳವಾಗಿದ್ದವು. ಶಾಲೆ-ಕಾಲೇಜುಗಳು ತೆರೆದಿದ್ದರೂ ವಿದ್ಯಾರ್ಥಿಗಳು ಕೆಲವೇ ಸಂಖ್ಯೆಯಲ್ಲಿದ್ದರು. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ನೌಕರರ ಹಾಜರಿ ವಿರಳವಾಗಿತ್ತು. ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದ ಅನೇಕ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. 49 ಕಡೆ ರೈಲುಗಳನ್ನು ತಡೆಯಲಾಗಿತ್ತು. ಕೆಲವೆಡೆ ಬಿಜೆಪಿ ಕಾರ್ಯಕರ್ತರು ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಗಳು ವರದಿಯಾಗಿವೆ. ಇನ್ನು ಕೆಲವೆಡೆ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ರಸ್ತೆ ತಡೆ ವಿಚಾರಕ್ಕೆ ಘರ್ಷಣೆಗಳು ನಡೆದಿವೆ.