ಸಾರಾಂಶ
ಕಲ್ಲಿಕೋಟೆ : ಕೇರಳದ ವಯನಾಡ್‌ನಲ್ಲಿರುವ ಪ್ರಸಿದ್ಧ ಪ್ರವಾಸಿ ಸ್ಥಳವಾದ ಸುಲ್ತಾನ್ ಬತೇರಿಯ ಹೆಸರನ್ನು ಗಣಪತಿವಟ್ಟಮ್ ಎಂದು ಬದಲಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದರಾಗಿರುವ ಮತ್ತು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಪುನಃ ಸ್ಪರ್ಧಿಸಿರುವ ಕ್ಷೇತ್ರ ವಯನಾಡ್ ಆಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹಾಗೂ ಸಿಪಿಐನಿಂದ ಆ್ಯನ್ನಿ ರಾಜಾ ಕೂಡ ಸ್ಪರ್ಧಿಸಿದ್ದಾರೆ.
ಗುರುವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸುರೇಂದ್ರನ್, ‘ಎರಡು ಶತಮಾನಗಳ ಹಿಂದಿನವರೆಗೆ ಸುಲ್ತಾನ್ ಬತೇರಿಯ ಹೆಸರು ಗಣಪತಿವಟ್ಟಂ ಎಂದಾಗಿತ್ತು. ಆದರೆ ಮೈಸೂರಿನ ರಾಜನಾಗಿದ್ದ ಟಿಪ್ಪು ಸುಲ್ತಾನ್ ಕೇರಳದ ಮಲಬಾರ್ ಪ್ರದೇಶದ ಮೇಲೆ ದಾಳಿ ನಡೆಸಿ ಈ ಪಟ್ಟಣವನ್ನು ವಶಪಡಿಸಿಕೊಂಡ ನಂತರ ಹೆಸರನ್ನು ಸುಲ್ತಾನ್ ಬತೇರಿ ಎಂದು ಬದಲಾಯಿಸಿದ್ದ. ಈಗ ಮತ್ತೆ ಅದರ ಹೆಸರನ್ನು ಹಳೆಯ ಹೆಸರಿಗೆ ಬದಲಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
‘ದಾಳಿಕೋರ ಇರಿಸಿದ ಹೆಸರನ್ನು ಏಕೆ ಉಳಿಸಿಕೊಳ್ಳಬೇಕು? ಸುಲ್ತಾನ್ ಯಾರು? ವಯನಾಡ್‌ಗೆ ಟಿಪ್ಪು ಸುಲ್ತಾನ್‌ನ ಕೊಡುಗೆ ಏನು? ಈ ಪ್ರದೇಶದ ಹೆಸರು ಅನಾದಿ ಕಾಲದಿಂದ ಗಣಪತಿವಟ್ಟಂ ಆಗಿತ್ತು. ಅದು ಜನರಿಗೂ ಗೊತ್ತಿದೆ. ಆದರೆ ಕಾಂಗ್ರೆಸ್ ಮತ್ತು ಎಲ್‌ಡಿಎಫ್‌ನವರು ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿದ ಟಿಪ್ಪು ಸುಲ್ತಾನ್‌ನ ಆರಾಧಕರಾಗಿರುವುದರಿಂದ ಅವರು ಮಾತ್ರ ಇದರ ಹೆಸರು ಸುಲ್ತಾನ್ ಬತೇರಿ ಎಂದೇ ಇರಲಿ ಎಂದು ಕೇಳುತ್ತಾರೆ’ ಎಂದು ಸುರೇಂದ್ರನ್ ವಾಗ್ದಾಳಿ ನಡೆಸಿದರು.
1984ರಲ್ಲಿ ಬಿಜೆಪಿಯ ಪ್ರಮೋದ್ ಮಹಾಜನ್ ಕೂಡ ಈ ವಿಷಯ ಪ್ರಸ್ತಾಪಿಸಿದ್ದರು. ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯೂ ಸುಲ್ತಾನ್ ಬತೇರಿಯ ಹಳೆಯ ಹೆಸರು ಗಣಪತಿವಟ್ಟಮ್ ಎಂದು ದಾಖಲಿಸಿದೆ.