ಮಿತ್ರರ ಬೇಡಿಕೆ ಪಟ್ಟಿಗೆ ಬಿಜೆಪಿ ಲಕ್ಷ್ಮಣ ರೇಖೆ!

| Published : Jun 07 2024, 12:32 AM IST / Updated: Jun 07 2024, 08:46 AM IST

ಸಾರಾಂಶ

ಸರಳ ಬಹುಮತಕ್ಕೆ ಅಗತ್ಯವಾದ 272 ಸ್ಥಾನಕ್ಕೆ 30 ಸ್ಥಾನಗಳ ಕೊರತೆ ಎದುರಿಸುತ್ತಿರುವ ಬಿಜೆಪಿ, ನೂತನ ಸರ್ಕಾರ ರಚನೆ ವೇಳೆ ತನ್ನ ಬಿಗಿಪಟ್ಟು ಮುಂದುವರೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ನವದೆಹಲಿ: ಸರಳ ಬಹುಮತಕ್ಕೆ ಅಗತ್ಯವಾದ 272 ಸ್ಥಾನಕ್ಕೆ 30 ಸ್ಥಾನಗಳ ಕೊರತೆ ಎದುರಿಸುತ್ತಿರುವ ಬಿಜೆಪಿ, ನೂತನ ಸರ್ಕಾರ ರಚನೆ ವೇಳೆ ತನ್ನ ಬಿಗಿಪಟ್ಟು ಮುಂದುವರೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

 ಕೆಲ ಆಯಕಟ್ಟಿನ ಖಾತೆ ಮತ್ತು ಲೋಕಸಭೆಯ ಸ್ಪೀಕರ್‌ ಹುದ್ದೆ ಮೇಲೆ ಟಿಡಿಪಿ ಮತ್ತು ಜೆಡಿಯು ಕಣ್ಣಿಟ್ಟಿದ್ದರೂ ಅವುಗಳನ್ನು ಪಕ್ಷ ಬಿಟ್ಟುಕೊಡುವ ಸಾಧ್ಯತೆ ಕಡಿಮೆ. ಈ ವಿಷಯದಲ್ಲಿ ಮಿತ್ರರ ಬೇಡಿಕೆಗೆ ಲಕ್ಷ್ಮಣರೇಖೆ ಎಳೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಟಿಡಿಪಿ ಮತ್ತು ಜೆಡಿಯು ನಾಯಕರು, ಹಣಕಾಸು, ಕೃಷಿ, ಐಟಿ, ಗ್ರಾಮೀಣಾಭಿವೃದ್ಧಿ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ.

 ಜೊತೆಗೆ ವಿಶ್ವಾಸಮತ, ಬಹುಮತ ಸಾಬೀತಿನ ವೇಳೆ ನಿರ್ಣಾಯಕ ಪಾತ್ರ ವಹಿಸುವ ಲೋಕಸಭೆಯ ಸ್ಪೀಕರ್‌ ಹುದ್ದೆಯೂ ತಮಗೆ ನೀಡಿ ಎಂದು ಚಂದ್ರಬಾಬು ನಾಯ್ಡು ಮತ್ತು ನಿತೀಶ್‌ ಕುಮಾರ್‌ ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.ಆದರೆ ಗೃಹ, ಹಣಕಾಸು, ರೈಲ್ವೆ, ಕೃಷಿ, ಗ್ರಾಮೀಣಾಭಿವೃದ್ಧಿ, ರಕ್ಷಣೆ, ವಿದೇಶಾಂಗ ಖಾತೆಗಳು ಬಿಜೆಪಿ ಮತ್ತು ಸರ್ಕಾರದ ಪಾಲಿಗೆ ಅತ್ಯಂತ ಮಹತ್ವದ್ದು. ಹೀಗಾಗಿ ಇವುಗಳನ್ನು ಬಿಜೆಪಿ ಬಿಟ್ಟುಕೊಡುವ ಸಾಧ್ಯತೆ ತೀರಾ ಕಡಿಮೆ. 

ಅದರ ಬದಲು ಇತರೆ ಮಹತ್ವದ ಖಾತೆಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸ್ವತಂತ್ರ ರಾಜ್ಯ ಖಾತೆಯನ್ನು ನೀಡುವ ಆಫರ್‌ ಅನ್ನು ಬಿಜೆಪಿ ಮುಂದಿಡುವ ಸಾಧ್ಯತೆ ಇದೆ.ಇದರ ಜೊತೆಗೆ ತನಗೆ ಬಹುಮತ ಇಲ್ಲದ ವೇಳೆ ಟಿಡಿಪಿ ಮತ್ತು ಜೆಡಿಯು ಕೈಗೆ ಸ್ಪೀಕರ್‌ ಹುದ್ದೆ ಕೊಟ್ಟರೆ ತನ್ನ ಜುಟ್ಟನ್ನು ಅವರ ಹಿಡಿತಕ್ಕೆ ನೀಡಿದಂತೆ ಎಂಬುದರ ಅರಿವು ಹೊಂದಿರುವ ಬಿಜೆಪಿ ಈ ವಿಷಯದಲ್ಲೂ ತನ್ನ ಪಟ್ಟು ಬಿಗಿಯಾಗೇ ಹಾಕುವ ಸಾಧ್ಯತೆ ಇದೆ. ಬೇಡಿಕೆ ವಿಷಯದಲ್ಲಿ ಟಿಡಿಪಿ ಮತ್ತು ಜೆಡಿಯುಗೆ ಲಕ್ಷ್ಮಣರೇಖೆ ಹಾಕುವ ಸಾಧ್ಯತೆ ಹೆಚ್ಚು ಎಂದು ಮೂಲಗಳು ತಿಳಿಸಿವೆ.