16 ರಾಜ್ಯಗಳ ಅಭ್ಯರ್ಥಿಗಳ ಬಗ್ಗೆ ಬಿಜೆಪಿ ಸಮಾಲೋಚನೆ

| Published : Mar 02 2024, 01:48 AM IST / Updated: Mar 02 2024, 11:11 AM IST

ಸಾರಾಂಶ

ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಳಿಸಿದೆ.

ನವದೆಹಲಿ: ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಳಿಸಿದೆ. 

ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಗುರುವಾರ ರಾತ್ರಿ 10.3ರಿಂದ ತಡರಾತ್ರಿ 3.30ರವರೆಗೂ 16 ರಾಜ್ಯಗಳ ಅಭ್ಯರ್ಥಿಗಳ ಕುರಿತು ಸಮಾಲೋಚನೆ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜ್‌ನಾಥ್‌ ಸಿಂಗ್‌ ಮೊದಲಾದವರು ಭಾಗಿಯಾಗಿದ್ದ ಸಭೆಯಲ್ಲಿ 110 ಸ್ಥಳಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. 

ಹೀಗೆ ಅಂತಿಮಗೊಂಡ ಪಟ್ಟಿಯನ್ನು ಯಾವುದೇ ಕ್ಷಣದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು ಅದರಲ್ಲಿ ಪ್ರಧಾನಿ ಮೋದಿ ಅವರ ವಾರಾಣಸಿ, ಅಮಿತ್‌ ಶಾ ಗಾಂಧೀನಗರ, ರಾಜ್‌ನಾಥ್‌ ಅವರ ಲಖನೌ ಕ್ಷೇತ್ರಗಳು, ಹಲವು ಕೇಂದ್ರ ಸಚಿವರ ಕ್ಷೇತ್ರ, ರಾಜ್ಯಸಭೆ ಬದಲು ಲೋಕಸಭೆ ಕಣಕ್ಕೆ ಇಳಿಸಲ್ಪಡುವ ಕೇಂದ್ರ ಸಚಿವರ ಕ್ಷೇತ್ರ ಸೇರಿರಲಿವೆ ಎನ್ನಲಾಗಿದೆ.

ಹಲವರಿಗೆ ಕೊಕ್‌:ಕಳೆದ 5 ವರ್ಷಗಳಲ್ಲಿ ಸಂಸದರಾಗಿ ಯಾವುದೇ ಗಮನಾರ್ಹ ಸೇವೆ ಸಲ್ಲಿಸದ ಹಲವರಿಗೆ ಪಕ್ಷ ಈ ಬಾರಿ ಕೊಕ್‌ ನೀಡಲು ನಿರ್ಧರಿಸಿದೆ. ಇದರಲ್ಲಿ ಹಲವು ನಟರು ಸೇರಿದ್ದಾರೆ ಎನ್ನಲಾಗಿದೆ.