ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವ ವೇಳೆ ಬಿಜೆಪಿ ಸಂಸದ ಸದಾನಂದನ್‌ ಮಾಸ್ಟರ್‌ ಅವರು ತಮ್ಮ ಕೃತಕ ಕಾಲು ಮೇಜಿನ ಮೇಲೆ ಇರಿಸಿ ಭಾಷಣ ಮಾಡಿದ ಪ್ರಸಂಗ ಸೋಮವಾರ ನಡೆದಿದೆ.

ಸಿಪಿಎಂ ದಾಳಿಗೆ 2 ಕಾಲು ಕಳೆದುಕೊಂಡಿದ್ದ ಸಂಸದ ಮಾಸ್ಟರ್‌

ನವದೆಹಲಿ: ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವ ವೇಳೆ ಬಿಜೆಪಿ ಸಂಸದ ಸದಾನಂದನ್‌ ಮಾಸ್ಟರ್‌ ಅವರು ತಮ್ಮ ಕೃತಕ ಕಾಲು ಮೇಜಿನ ಮೇಲೆ ಇರಿಸಿ ಭಾಷಣ ಮಾಡಿದ ಪ್ರಸಂಗ ಸೋಮವಾರ ನಡೆದಿದೆ.

ರಾಜ್ಯಸಭೆಯಲ್ಲಿ ತಮ್ಮ ಮೊದಲ ಭಾಷಣ ಮಾಡುವ ವೇಳೆ ಮಾಸ್ಟರ್‌ ಅವರು ತಮ್ಮ ಕೃತಕ ಕಾಲುಗಳನ್ನು ಮೇಜಿನ ಮೇಲೆ ಇರಿಸಿ, ‘ಪ್ರಜಾಪ್ರಭುತ್ವ ಎಂದು ಗರ್ಜಿಸುತ್ತಿರುವವರು 31 ವರ್ಷಗಳ ಹಿಂದೆ ನನ್ನ ಮೇಲೊಂದು ದಾಳಿ ಮಾಡಿದ್ದರು. ನಾನು ಮನೆಗೆ ಮರಳುವ ವೇಳೆ ಕೊಲೆಗಡುಕರು ಹಿಂದಿನಿಂದ ಬಂದು ನನ್ನನ್ನು ಹಿಡಿದು, ರಸ್ತೆಯಲ್ಲಿ ಮಲಗಿಸಿ,‘ಇನ್ಕಿಲಾಬ್‌ ಜಿಂದಾಬಾದ್‌’ ಎನ್ನುತ್ತಾ ನನ್ನ ಕಾಲುಗಳನ್ನೇ ಕಡಿದರು’ ಎಂದು ಹೇಳಿದರು.

ಈ ವೇಳೆ ಸಿಪಿಎಂನ ಜಾನ್‌ ಬ್ರಿಟಾಸ್‌ ಎದ್ದುನಿಂತು ‘ಇದು ಸದನದ ಶಿಸ್ತಿನ ಉಲ್ಲಂಘನೆ’ ಎಂದು ಆಕ್ಷೇಪವೆತ್ತಿದರು.

ಜಾನ್‌ ಅವರಿಗೆ ತಿರುಗೇಟು ನೀಡಿದ ಸದಾನಂದನ್‌ ಮಾಸ್ಟರ್‌, ‘ನಾನು ದೇಶ ಮತ್ತು ಜನರ ಎದುರು ಪ್ರಜಾಪ್ರಭುತ್ವ ಎಂದರೇನು ಎಂಬುದನ್ನು ತೋರಿಸಬಯಸುತ್ತೇನೆ. ಮಾನವೀಯತೆ, ಸಹನೆ ಮತ್ತು ಪ್ರಜಾಸತ್ತಾತ್ಮಕತೆ ಬಗ್ಗೆ ನೀವೆಲ್ಲಾ ಮಾತನಾಡುತ್ತೀರಿ, ಆದರೆ ನಿಮ್ಮ ನಡೆಯು ರಾಜಕೀಯ ಹಿಂಸೆಯ ಹಿಂದಿದೆ. ಇದು ಸಮಾಜಕ್ಕೆ ಒಳ್ಳೆಯದಲ್ಲ’ ಎಂದು ಉತ್ತರಿಸಿದರು. ಬಳಿಕ ಮೇಜಿನ ಮೇಲಿರಿಸಿದ್ದ ತಮ್ಮ ಕಾಲುಗಳನ್ನು ಹಿಂತೆಗೆದುಕೊಂಡರು.