ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ತೆಲಂಗಾಣದ ಫೈರ್‌ಬ್ರಾಂಡ್‌ ನಾಯಕ, ಶಾಸಕ ಟಿ.ರಾಜಾ ಸಿಂಗ್ ಅವರು ಸೋಮವಾರ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಹೈದರಾಬಾದ್‌: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ತೆಲಂಗಾಣದ ಫೈರ್‌ಬ್ರಾಂಡ್‌ ನಾಯಕ, ಶಾಸಕ ಟಿ.ರಾಜಾ ಸಿಂಗ್ ಅವರು ಸೋಮವಾರ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ರಾಮಚಂದ್ರರಾವ್‌ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಗುತ್ತದೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಈ ಕುರಿತು ಪಕ್ಷದ ಹಾಲಿ ರಾಜ್ಯಾಧ್ಯಕ್ಷ ಜಿ.ಕಿಶನ್‌ ರೆಡ್ಡಿ ಅವರಿಗೆ ಪತ್ರ ಬರೆದಿರುವ ಅವರು, ರಾಮಚಂದ್ರ ರಾವ್‌ ಅವರ ಆಯ್ಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ, ಪಕ್ಷಕ್ಕೆ ರಾಜೀನಾಮೆ ನೀಡಿದರೂ ಹಿಂದೂಗಳು ಮತ್ತು ಹಿಂದೂ ಧರ್ಮದ ಕುರಿತ ಧ್ವನಿ ಎತ್ತುವುದನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರಿಗೆ ರಾಮಚಂದ್ರ ರಾವ್‌ ಅವರ ಆಯ್ಕೆ ಮರುಪರಿಶೀಲಿಸುವಂತೆಯೂ ಆಗ್ರಹಿಸಿದ್ದಾರೆ. ತೆಲಂಗಾಣವು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಿದ್ಧವಾಗಿದೆ. ಆದರೆ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸರಿಯಾದ ನಾಯಕತ್ವ ನಮ್ಮಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್‌ ವಕೀಲ, ಮಾಜಿ ಎಂಎಲ್ಸಿಯೂ ಆಗಿರುವ ರಾಮಚಂದ್ರ ರಾವ್‌ ಅವರು ಈ ಹಿಂದೆ ಎಬಿವಿಪಿ, ಬಿಜೆಪಿ ಯುವ ಮೋರ್ಚಾ ಮತ್ತು ಬಿಜೆಪಿಯ ಕಾನೂನು ವಿಭಾಗದಲ್ಲಿ ಕೆಲಸ ಮಾಡಿದ್ದರು. ಮಾಧ್ಯಮ ವರದಿಗಳ ಪ್ರಕಾರ, ತೆಲಂಗಾಣ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ರಾವ್‌ ಅವರ ಹೆಸರನ್ನು ಕೇಂದ್ರ ನಾಯಕತ್ವವು ಅಂತಿಮಗೊಳಿಸಿದೆ.