ರೆಬೆಲ್‌ ಈಶ್ವರಪ್ಪ ಬಿಜೆಪಿಯಿಂದ ಉಚ್ಚಾಟನೆ

| Published : Apr 23 2024, 12:51 AM IST / Updated: Apr 23 2024, 07:04 AM IST

KS Eshwarappa

ಸಾರಾಂಶ

ಬಂಡಾಯ ಸಾರಿದ್ದ ಹಿರಿಯ ನಾಯಕ ಈಶ್ವರಪ್ಪ ಮೇಲೆ ಕೊನೆಗೂ ಬಿಜೆಪಿ ಪಕ್ಷದ ಕ್ರಮವಾಗಿದ್ದು, ಉಚ್ಛಾಟನೆ ಮಾಡಲಾಗಿದೆ. ಈ ನಡುವೆ ಈಶ್ವರಪ್ಪ ಶಿವಮೊಗ್ಗ ಕಣದಲ್ಲುಳಿದ ನಾಯಕ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ.

 ಬೆಂಗಳೂರು :  ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಫೈರ್ ಬ್ರ್ಯಾಂಡ್‌ ಎಂದೇ ಗುರುತಿಸಿಕೊಂಡಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. 

ಎರಡನೇ ಹಂತದ ಲೋಕಸಭಾ ಚುನಾವಣೆಯ ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. ಈಶ್ವರಪ್ಪ ಅವರು ನಾಮಪತ್ರ ವಾಪಸ್ ತೆಗೆದುಕೊಳ್ಳದೇ ಕಣದಲ್ಲಿ ಉಳಿದ ಬೆನ್ನಲ್ಲೇ ಸಂಜೆ ಅವರ ಉಚ್ಚಾಟನೆಯ ಆದೇಶ ಬಿಜೆಪಿಯಿಂದ ಹೊರಬಿದ್ದಿದೆ.‘ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ’ ಎಂದು ಬಿಜೆಪಿಯ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಅವರು ಉಚ್ಚಾಟನಾ ಆದೇಶದಲ್ಲಿ ತಿಳಿಸಿದ್ದಾರೆ.

4 ದಶಕ ಬಿಜೆಪಿಯಲ್ಲಿದ್ದರು:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಬಳಿಕ ಬಿಜೆಪಿಯ ಕಾರ್ಯಕರ್ತರಾಗಿ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪಕ್ಷದಲ್ಲಿ ಹಂತ ಹಂತವಾಗಿ ಮೇಲೇರಿದ್ದ ಈಶ್ವರಪ್ಪ ಅವರು ಇದೇ ಮೊದಲ ಬಾರಿಗೆ ಪಕ್ಷದ ವಿರುದ್ಧ ಹೋಗಿದ್ದಾರೆ. 

ಬಿಜೆಪಿ ಬೇರೆಯಲ್ಲ, ಈ ಈಶ್ವರಪ್ಪ ಬೇರೆಯಲ್ಲ ಎಂದು ಹೇಳುತ್ತಿದ್ದಂಥ ಈಶ್ವರಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಕಾಂತೇಶ್ ಅವರಿಗೆ ಹಾವೇರಿ ಕ್ಷೇತ್ರದ ಟಿಕೆಟ್ ಬಯಸಿದ್ದರು.ಆ ಕ್ಷೇತ್ರದಿಂದ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ತಯಾರಿಯನ್ನೂ ನಡೆಸಿದ್ದರು. ಆದರೆ, ಕೊನೆಯ ಹಂತದಲ್ಲಿ ಬಿಜೆಪಿ ಕಾಂತೇಶ್‌ಗೆ ಟಿಕೆಟ್ ನಿರಾಕರಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಘೋಷಿಸುತ್ತಿದ್ದಂತೆಯೇ ಈಶ್ವರಪ್ಪ ಬಂಡಾಯ ಸಾರಿದರು.

 ತಮ್ಮ ಪುತ್ರನಿಗೆ ಟಿಕೆಟ್ ಕೈತಪ್ಪಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತವರ ಕುಟುಂಬದ ಕಾರಣ ಎಂದು ಹರಿಹಾಯ್ದ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಘೋಷಣೆ ಮಾಡಿ ಪ್ರಚಾರವನ್ನೂ ಆರಂಭಿಸಿದರು.ಆ ಹಂತದಲ್ಲಿ ಬಿಜೆಪಿ ವತಿಯಿಂದ ಅವರನ್ನು ಮನವೊಲಿಸುವ ಪ್ರಯತ್ನ ನಡೆದರೂ ಫಲ ನೀಡಲಿಲ್ಲ. 

ಪಕ್ಷದ ಪ್ರಭಾವಿ ನಾಯಕ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿದ ವೇಳೆ ದೂರವಾಣಿ ಮೂಲಕ ಮಾತನಾಡಿ ದೆಹಲಿಗೆ ಬರುವಂತೆ ಈಶ್ವರಪ್ಪ ಅವರಿಗೆ ಸೂಚಿಸಿದರು. ಆದರೆ, ಅಲ್ಲಿಗೆ ತೆರಳುವ ಮೊದಲೇ ಈಶ್ವರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ ವರಿಷ್ಠರನ್ನೇ ಮನವೊಲಿಸುವೆ ಹೊರತು ಸ್ಪರ್ಧೆಯ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಜತೆಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನು ಬದಲಿಸಿದರೆ ಸ್ಪರ್ಧೆಯ ನಿರ್ಣಯದಿಂದ ಹಿಂದೆ ಸರಿಯುವೆ ಎಂದು ಷರತ್ತನ್ನು ಪ್ರಸ್ತಾಪಿಸಿದರು. ಇದರಿಂದ ಅಸಮಾಧಾನಗೊಂಡ ಅಮಿತ್ ಶಾ ಅವರು ದೆಹಲಿಗೆ ಆಗಮಿಸಿದ ಈಶ್ವರಪ್ಪ ಅವರನ್ನು ಭೇಟಿ ಮಾಡಲು ನಿರಾಕರಿಸಿದರು. ಅಲ್ಲಿಂದಾಚೆಗೆ ಮನವೊಲಿಸುವ ಪ್ರಯತ್ನ ಸಣ್ಣದಾಗಿ ನಡೆದರೂ ಈಶ್ವರಪ್ಪ ಮಾತ್ರ ಜಗ್ಗಲಿಲ್ಲ. ಅಂತಿಮವಾಗಿ ಸೋಮವಾರ ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿಯುತ್ತಿದ್ದಂತೆಯೇ ಪಕ್ಷದಿಂದ ಉಚ್ಚಾಟನೆಯ ಆದೇಶ ಹೊರಬಿತ್ತು.