ವಿಪಕ್ಷಗಳ ವಿರುದ್ಧ ಬಿಜೆಪಿ ರಾಯಲ್‌ ಚಾಲೆಂಜ್‌

| Published : Apr 07 2024, 01:46 AM IST / Updated: Apr 07 2024, 05:29 AM IST

ಸಾರಾಂಶ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳಲ್ಲಿ ಬಿಜೆಪಿ ರಾಜಮನೆತನದ 10ಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಪೈಕಿ ಕೆಲವರು ಹಳಬರಾದರೆ ಮತ್ತೆ ಕೆಲವರು ಮೊದಲ ಬಾರಿಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳಲ್ಲಿ ಬಿಜೆಪಿ ರಾಜಮನೆತನದ 10ಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಪೈಕಿ ಕೆಲವರು ಹಳಬರಾದರೆ ಮತ್ತೆ ಕೆಲವರು ಮೊದಲ ಬಾರಿಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಮೂಲಕ ವಿಪಕ್ಷಗಳ ಅಭ್ಯರ್ಥಿಗಳ ವಿರುದ್ಧ ರಾಯಲ್‌ ಚಾಲೆಂಜ್‌ ಅನ್ನು ಬಿಜೆಪಿ (ಆರ್‌ಸಿಬಿ) ಮುಂದೊಡ್ಡಿದೆ.

ಇದರಲ್ಲಿ ಕರ್ನಾಟಕದ ಹೆಸರಾಂತ ರಾಜಮನೆತನವಾದ ಮೈಸೂರು ಸಂಸ್ಥಾನದ ದೊರೆ ಯುದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಒಡೆಯರ್‌ ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸುತ್ತಿದ್ದಾರೆ.

ಅದೇ ರೀತಿ ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ‘ರಾಜಮಾತಾ’ ಅಮೃತಾ ರಾಯ್ ಸ್ಪರ್ಧೆಗಿಳಿಸಿದ್ದರೆ, ಪೂರ್ವ ತ್ರಿಪುರ ಕ್ಷೇತ್ರದಿಂದ ಇಲ್ಲಿನ ಮಾಣಿಕ್ಯ ವಂಶಸ್ಥರಾದ ಮಹಾರಾಣಿ ಕೃತಿ ಸಿಂಗ್‌ ದೆಬ್ಬಾರ್ಮಾ ಅವರಿಗೆ ಬಿಜೆಪಿ ಮಣೆ ಹಾಕಿದೆ.

ಒಡಿಶಾದಿಂದ ರಾಜಮನೆತನಕ್ಕೆ ಸೇರಿದ ಮಾಳವಿಕಾ ಕೇಶರಿ ದೇವ್ ಮತ್ತು ಸಂಗೀತಾ ಕುಮಾರಿ ಸಿಂಗ್ ದೇವ್ ಕಣಕ್ಕೆ ಇಳಿದಿದ್ದಾರೆ. ಇನ್ನು ರಾಜಸ್ಥಾನದ ರಾಜಸಮಂದ್‌ ಲೋಕಸಭಾ ಕ್ಷೇತ್ರದಿಂದ ಮೆವಾರ್‌ ರಾಜವಂಶಸ್ಥರನ್ನು ಮದುವೆಯಾದ ಮಹಿಮಾ ಸಿಂಗ್‌ ಅವರನ್ನು ಕಣಕ್ಕಿಳಿಸಿದೆ.

ಸಿಂಧಿಯಾ ರಾಜಮನೆತನದ ಮಸುಂಧರಾ ರಾಜೆ ಅವರ ಮಗ ದುಶ್ಯಂತ್‌ ಸಿಂಗ್‌ ಅವರನ್ನು ಜಲಾವರ್‌-ಬರಾನ್‌ನಿಂದ ಸ್ಪರ್ಧೆಗೆ ಇಳಿಸಿದ್ದರೆ, ಇದೇ ವಂಶಸ್ಥಕ್ಕೆ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯಪ್ರದೇಶದ ಗುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

ಪಟಿಯಾಲಾ ರಾಜಮನೆತನದಿಂದ ಮಾಜಿ ಸಿಎಂ ಅಮರಿಂದರ್‌ ಸಿಂಗ್‌ ಅವರ ಪತ್ನಿ ಪ್ರಣೀತ್ ಕೌರ್ ಪಟಿಯಾಲ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.