ಕಾಂಗ್ರೆಸ್‌ನಲ್ಲಿ ಸೆಕ್ಸ್ ದಂಧೆ ಆರೋಪ : ಸಿಮಿ ರೋಸ್‌ಬೆಲ್‌ ವಜಾ ವಿರುದ್ಧ ಬಿಜೆಪಿ ಕಿಡಿ

| Published : Sep 03 2024, 01:30 AM IST / Updated: Sep 03 2024, 04:42 AM IST

ಸಾರಾಂಶ

ಕಾಂಗ್ರೆಸ್‌ನಲ್ಲಿ ಸೆಕ್ಸ್ ದಂಧೆ ಇದೆ ಎಂದು ಆರೋಪಿಸಿದ್ದ ಹಿರಿಯ ನಾಯಕಿ ಸಿಮಿ ರೋಸ್‌ಬೆಲ್‌ ಜಾನ್‌ರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಈ ಕ್ರಮವನ್ನು ಬಿಜೆಪಿ ಖಂಡಿಸಿದ್ದು, ಕಾಂಗ್ರೆಸ್ ಮಹಿಳಾ ಸುರಕ್ಷತೆಯ ಬಗ್ಗೆ ಮೌನ ವಹಿಸಿದೆ ಎಂದು ಆರೋಪಿಸಿದೆ.

ನವದೆಹಲಿ : ಕೇರಳ ಕಾಂಗ್ರೆಸ್‌ನಲ್ಲಿಯೂ ಮಲಯಾಳಂ ಸಿನಿಮಾ ರಂಗದ ರೀತಿಯಲ್ಲಿಯೇ ಸೆಕ್ಸ್ ದಂಧೆ ಇದೆ ಎಂದು ಆರೋಪಿಸಿದ್ದ ಕಾಂಗ್ರೆಸ್‌ ಹಿರಿಯ ನಾಯಕಿ ಸಿಮಿ ರೋಸ್‌ಬೆಲ್‌ ಜಾನ್‌ರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದಕ್ಕೆ ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್‌ನ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಹಿಳಾ ಸುರಕ್ಷತೆಯ ಬಗ್ಗೆ ಆಗಾಗ ಮಾತನಾಡುತ್ತಾರೆ. ಆದರೆ ಕೋಲ್ಕತಾ, ಕನೌಜ್ , ಕೇರಳದಲ್ಲಿನ ಮಹಿಳಾ ದೌರ್ಜನ್ಯದ ಬಗ್ಗೆ ಮೌನ ವಹಿಸಿದ್ದಾರೆ. ಕಾಂಗ್ರೆಸ್‌ ನಾಯಕಿ ಸಿಮಿ ರೋಸ್‌ಬೆಲ್‌ ಜಾನ್‌ ಕಾಂಗ್ರೆಸ್‌ನಲ್ಲಿನ ಕಾಸ್ಟಿಂಗ್ ಕೌಚ್‌ ಬಗ್ಗೆ ಆರೋಪಿಸಿದ್ದಕ್ಕೆ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ’ ಎಂದು ಬಿಜೆಪಿ ಹಿರಿಯ ನಾಯಕ ರಾಜೀವ್ ಚಂದ್ರಶೇಖರ್‌ ಆರೋಪಿಸಿದ್ದಾರೆ.

ಕಂದಹಾರ್‌ ಸಿನಿಮಾ ವಿವಾದ: ನೆಟ್‌ಫ್ಲಿಕ್ಸ್‌ಗೆ ಕೇಂದ್ರದ ಸಮನ್ಸ್

ನವದೆಹಲಿ: ಕಳೆದ ವಾರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿರುವ ಕಂದಹಾರ್‌ ವಿಮಾನ ಹೈಜಾಕ್ ಘಟನೆ ಆಧಾರಿತ ‘ಐಸಿ 814’ ಸಿನಿಮಾದಲ್ಲಿ ಹಿಂದೂ ಕೋಡ್‌ನೇಮ್ ವಿವಾದಕ್ಕೆ ಸಂಬಂಧಿಸಿದಂತೆ ವಿವರಣೆ ಕೇಳಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಒಟಿಟಿ ಫ್ಲ್ಯಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ಗೆ ಸಮನ್ಸ್‌ ಜಾರಿಗೊಳಿಸಿದೆ.ವಿಮಾನ ಅಪಹರಣದಲ್ಲಿ ಭಾಗಿಯಾಗಿದ್ದ ಮುಸ್ಲಿಂ ಉಗ್ರರ ಹೆಸರನ್ನು ಚಿತ್ರದಲ್ಲಿ ಹಿಂದೂಗಳ ಹೆಸರಿಗೆ ಬದಲಾಯಿಸಿರುವುದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಚಿತ್ರವನ್ನು ಬಹಿಷ್ಕರಿಸಿ ಎಂದು ಜಾಲತಾಣದಲ್ಲಿ ಅಭಿಯಾನ ಆರಂಭಿಸಲಾಗಿತ್ತು. ಇನ್ನು ಸಿನಿಮಾ ತಂಡದ ಕುರಿತು ಬಿಜೆಪಿ ಕೂಡ ಕಿಡಿಕಾರಿದೆ. ‘ನಿರ್ದೇಶಕ ಅನುಭವ್ ಸಿನ್ಹಾ, ಮುಸ್ಲಿಮೇತರ ಹೆಸರುಗಳನ್ನು ಹೆಚ್ಚಿಸುವ ಮೂಲಕ ಕ್ರಿಮಿನಲ್ ಉದ್ದೇಶವನ್ನು ಕಾನೂನುಬದ್ಧಗೊಳಿಸಿದ್ದಾರೆ’ ಎಂದು ಬಿಜೆಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥ, ಅಮಿತ್ ಮಾಳವೀಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಕೇಸ್‌: ಆಪ್‌ ಶಾಸಕ ಅಮಾನತ್ತುಲ್ಲಾ ಬಂಧನ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣ ಸಂಬಂಧ ಆಪ್‌ ಶಾಸಕ ಅಮಾನತ್ತುಲ್ಲಾ ಖಾನ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ದೆಹಲಿಯ ಓಕ್ಲಾದಲ್ಲಿರುವ ಖಾನ್‌ರ ನಿವಾಸದಲ್ಲಿ ಶೋಧ ನಡೆಸಿದ ಬಳಿಕ ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ ಕಾಯ್ದೆಯಡಿ ಅವರನ್ನು ಬಂಧಿಸಲಾಗಿದೆ.

ಖಾನ್‌ ವಿರುದ್ಧ ವಕ್ಫ್ ಬೋರ್ಡ್‌ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ದೂರು ದಾಖಲಿಸಿತ್ತು ಹಾಗೂ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ದೆಹಲಿಯ ಭ್ರಷ್ಟಾಚಾರ ವಿರೋಧಿ ಶಾಖೆ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೀಡಿದ್ದ 10 ಸಮನ್ಸ್‌ಗಳನ್ನು ಖಾನ್‌ ಉಲ್ಲಂಘಿಸಿದ್ದರು. ಅದರ ಬೆನ್ನಲ್ಲೇ ಅವರನ್ನು ಸೋಮವಾರ ಬಂಧಿಸಲಾಗಿದೆ.

ದೆಹಲಿ ವಕ್ಫ್‌ ಮಂಡಳಿಯಲ್ಲಿ ಅಕ್ರಮ ನೇಮಕಾತಿ ಮತ್ತು ಹಣಕಾಸು ಅವ್ಯವಹಾರ ಸಂಬಂಧ ಈ ಹಿಂದೆ ಕೂಡಾ ಖಾನ್‌ ಬಂಧನಕ್ಕೆ ಒಳಗಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.ಖಾನ್‌ ಬಂಧನ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿರುವ ಆಪ್‌ ನಾಯಕ ಮನೀಶ್‌ ಸಿಸೋಡಿಯಾ, ‘ಬಿಜೆಪಿ ವಿರುದ್ಧ ದನಿ ಎತ್ತುವವರನ್ನು ನಿಗ್ರಹಿಸುವುದೇ ಇಡಿಯ ಪಾಲಿಗೆ ಉಳಿದಿರುವ ಕೆಲಸ’ ಎಂದು ವ್ಯಂಗ್ಯವಾಡಿದ್ದಾರೆ.