ಸಾರಾಂಶ
ಲೋಕಸಭೆ ಚುನಾವಣೆ ರಂಗು ತಾರಕಕ್ಕೇರುತ್ತಿದ್ದಂತೆಯೇ ಆದಿವಾಸಿಗಳೇ ಹೆಚ್ಚಿರುವ ಮಧ್ಯ ಭಾರತದಲ್ಲಿರುವ ರಾಜ್ಯ ಛತ್ತೀಸ್‌ಗಢ ಕೂಡ ದೇಶದ ಗಮನ ಸೆಳೆದಿದೆ.
ರಾಯಪುರ: ಲೋಕಸಭೆ ಚುನಾವಣೆ ರಂಗು ತಾರಕಕ್ಕೇರುತ್ತಿದ್ದಂತೆಯೇ ಆದಿವಾಸಿಗಳೇ ಹೆಚ್ಚಿರುವ ಮಧ್ಯ ಭಾರತದಲ್ಲಿರುವ ರಾಜ್ಯ ಛತ್ತೀಸ್‌ಗಢ ಕೂಡ ದೇಶದ ಗಮನ ಸೆಳೆದಿದೆ. ಏಕೆಂದರೆ ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಪುನಃ ಗೆಲ್ಲುವ ಆಶಾವಾದದಲ್ಲಿದ್ದ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸೋತಿತ್ತು. ಬಿಜೆಪಿ ಭರ್ಜರಿಯಾಗಿ ಗೆದ್ದಿತ್ತು ಹಾಗೂ ಮೊದಲ ಸಲ ಆದಿವಾಸಿ ನಾಯಕರೊಬ್ಬರಿಗೆ (ವಿಷ್ಣುದೇವ ಸಾಯಿ) ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿತ್ತು.
ಈಗ ಬಿಜೆಪಿ ಗೆದ್ದು ಇನ್ನೂ 6 ತಿಂಗಳಾಗಿಲ್ಲ. ಆಗಲೇ ಮತ್ತೆ ಲೋಕಸಭೆ ಚುನಾವಣೆ ಬಂದಿದೆ. ಏ.19ರಿಂದ 3 ಹಂತದಲ್ಲಿ ಚುನಾವಣೆ ನಡೆಯಲಿದೆ. ಕಳೆದ ಸಲ ರಾಜ್ಯದ 11 ಸ್ಥಾನಗಳ ಪೈಕಿ ಬಿಜೆಪಿ 9 ಹಾಗೂ ಕಾಂಗ್ರೆಸ್ 2 ಸ್ಥಾನ ಹೊಂದಿದ್ದವು. ಈ ಸಲ ಬಿಜೆಪಿ ಎಲ್ಲವನ್ನೂ ಕ್ಲೀನ್‌ಸ್ವೀಪ್ ಮಾಡುವ ಉದ್ದೇಶ ಹೊಂದಿದ್ದರೆ ಕಾಂಗ್ರೆಸ್, ಅದನ್ನು ತಲೆಕೆಳಗು ಮಾಡುವ ಇರಾದೆಯಲ್ಲಿದೆ.
ಬಿಜೆಪಿಯಲ್ಲಿ 7 ಹಾಲಿಗಳಿಗಿಲ್ಲ ಟಿಕೆಟ್:
ಬಿಜೆಪಿ 9 ಹಾಲಿ ಸಂಸದರ ಪೈಕಿ ಇಬ್ಬರಿಗೆ ಮಾತ್ರ ಈ ಸಲ ಟಿಕೆಟ್ ನೀಡಿದೆ. ಉಳಿದ ಸ್ಥಾನಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಕೊರ್ಬಾ ಕ್ಷೇತ್ರದಿಂದ ಪಕ್ಷದ ಹಿರಿಯ ನಾಯಕಿ ಸರೋಜ್ ಪಾಂಡೆ ಅವರನ್ನು ಮತ್ತೆ ಟಿಕೆಟ್ ನೀಡಿ ಕಣಕ್ಕಿಳಿಸಿದೆ. 7 ಹಾಲಿ ಸಂಸದರು ಸರಿಯಾಗಿ ಕೆಲಸ ಮಾಡಿಲ್ಲವೋ ಏನೋ ಅವರನ್ನು ಬದಲಿಸಲಾಗಿದ್ದು, ಹೊಸ ಮುಖಗಳೊಂದಿಗೆ ಎಲ್ಲ 11 ಸ್ಥಾನ ಗೆಲ್ಲುತ್ತೇವೆ ಎಂದು ಬಿಜೆಪಿ ಹೇಳಿಕೊಂಡಿದೆ.
ರಾಜ್ಯ ಸ್ಥಾಪನೆ ಬಳಿಕ 6ರಲ್ಲಿ ಒಮ್ಮೆಯೂ ಗೆಲ್ಲದ ಕಾಂಗ್ರೆಸ್:
ಛತ್ತೀಸ್‌ಗಢದ 11 ಲೋಕಸಭಾ ಸ್ಥಾನಗಳಲ್ಲಿ 6 ಬಿಜೆಪಿ ಭದ್ರಕೋಟೆಗಳಾಗಿವೆ, ಅಲ್ಲಿ 2000ರಲ್ಲಿ ರಾಜ್ಯ ರಚನೆಯಾದ ನಂತರ ಅದು ಎಂದಿಗೂ ಚುನಾವಣೆಯಲ್ಲಿ ಸೋತಿಲ್ಲ. ಈ ಬಾರಿ ಕೇಸರಿ ಕೋಟೆಯನ್ನು ಮುರಿಯುವ ವಿಶ್ವಾಸವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ.
ಈ ಆರು ಸ್ಥಾನಗಳೆಂದರೆ ಕಂಕೇರ್, ಸುರ್ಗುಜಾ ಮತ್ತು ರಾಜಗಢ (ಪರಿಶಿಷ್ಟ ಪಂಗಡ), ಜಾಂಜ್‌ಗೀರ್-ಚಂಪಾ (ಪರಿಶಿಷ್ಟ ಜಾತಿ), ರಾಯ್‌ಪುರ ಮತ್ತು ಬಿಲಾಸ್‌ಪುರ್.
ರಾಜನಂದಗಾಂವ್ ಲೋಕಸಭಾ ಕ್ಷೇತ್ರದಲ್ಲಿ 2000ನೇ ಇಸವಿಯ ನಂತರ ಬಿಜೆಪಿ ಸೋಲಿನ ರುಚಿ ಕಂಡಿರಲಿಲ್ಲ ಆದರೆ 2007ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತು. ಈ ಬಾರಿ ರಾಜನಂದಗಾಂವ್‌ನಿಂದ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಕಣಕ್ಕಿಳಿಸಿದೆ.
ಬಿಜೆಪಿ ಉತ್ತಮ ಸಾಧನೆ:
ಛತ್ತೀಸ್‌ಗಢವನ್ನು ಮಧ್ಯಪ್ರದೇಶದಿಂದ ಬೇರ್ಪಡಿಸಿದ ನಂತರ, ರಾಜ್ಯದಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿತು.
2004, 2009, 2014ರಲ್ಲಿ ಬಿಜೆಪಿ 10 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತ್ತು.2018ರ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಸೋಲು ಕಂಡರೂ, 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಬಿಜೆಪಿ 9 ಸ್ಥಾನಗಳನ್ನು ಗೆದ್ದಿತ್ತು.
ಕೇಸರಿ ಪಕ್ಷವು 2003 ರಿಂದ 2018 ರವರೆಗೆ 15 ವರ್ಷಗಳ ಕಾಲ ಅಡೆತಡೆಯಿಲ್ಲದೆ ರಾಜ್ಯವನ್ನು ಆಳಿತು ಮತ್ತು 2023 ರ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕನೇ ಅವಧಿಗೆ ಅಧಿಕಾರಕ್ಕೆಬಂದಿದೆ.
3 ಹಂತದ ಚುನಾವಣೆ:
ಏಪ್ರಿಲ್ 19, ಏಪ್ರಿಲ್ 26 ಮತ್ತು ಮೇ 7 ರಂದು ಮೂರು ಹಂತಗಳಲ್ಲಿ ಚುನಾವಣೆ ನಡಯಲಿಲಿದೆ.
2019ರಲ್ಲಿ ಏನಾಗಿತ್ತು?
2019 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಶೇ.50.7 ಮತಗಳೊಂದಿಗೆ 9 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 2 ಸ್ಥಾನಗಳಲ್ಲಿ ವಿಜಯವನ್ನು ದಾಖಲಿಸಿತ್ತು ಹಾಗೂ ಶೇ.40.9 ರಷ್ಟು ಮತಗಳನ್ನು ಪಡೆದಿತ್ತು.
ಇನ್ನು ಕೇಸರಿ ಪಕ್ಷವು 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡಾ 48.7 ರಷ್ಟು ಮತಗಳೊಂದಿಗೆ 10 ಸ್ಥಾನಗಳನ್ನು ಗಳಿಸಿತ್ತು.
--
ರಾಜ್ಯ: ಛತ್ತೀಸ್‌ಗಢ
ಒಟ್ಟು ಕ್ಷೇತ್ರ: 11
ಚುನಾವಣಾ ಹಂತ: 3
--
2019ರಲ್ಲಿ ಏನಾಗಿತ್ತು? (ಒಟ್ಟು ಸ್ಥಾನ 11)
ಪಕ್ಷ ಸ್ಥಾನ ಮತ
ಬಿಜೆಪಿ 09 ಶೇ.50
ಕಾಂಗ್ರೆಸ್ 02 ಶೇ.41
ಇತರರು 00 ಶೇ.9
--
ಪ್ರಮುಖ ಕ್ಷೇತ್ರಗಳು
ರಾಜನಂದಗಾಂವ್, ಕಾಂಕೇರ್, ರಾಯ್‌ಪುರ, ಬಿಲಾಸ್‌ಪುರ, ರಾಜಗಢ, ಕೋರ್ಬಾ, ಮಹಾಸಮುಂದ್
--
ಪ್ರಮುಖ ಅಭ್ಯರ್ಥಿಗಳು
- ಭೂಪೇಶ್ ಬಘೇಲ್ (ರಾಜನಂದಗಾಂವ್, ಕಾಂಗ್ರೆಸ್), ತಾಮ್ರಧ್ವಜ ಸಾಹು (ಮಹಾಸಮುಂದ್, ಕಾಂಗ್ರೆಸ್), ಸರೋಜ್ ಪಾಂಡೇಯ (ಕೋರ್ಬಾ, ಬಿಜೆಪಿ), ವಿಕಾಸ್ ಉಪಾಧ್ಯಾಯ (ರಾಯಪುರ, ಕಾಂಗ್ರೆಸ್), ಸಂತೋಷ್ ಪಾಂಡೇಯ (ರಾಜನಂದಗಾಂವ್, ಬಿಜೆಪಿ)
---
ಚುನಾವಣಾ ವಿಷಯವೇನು?
- ಛತ್ತೀಸ್‌ಗಢದಲ್ಲಿ ನಕ್ಸಲ್ ನಿಗ್ರಹ ಆಗದೇ ಇರುವುದು ಪ್ರಮುಖ ಚುನಾವಣಾ ವಿಷಯ
- ರಾಜ್ಯದಲ್ಲಿ ಆದಿವಾಸಿಗಳು ಹೆಚ್ಚಿದ್ದು, ಅವರಿಗೆ ಕೊಡುಗೆ ನೀಡಲು ಬಿಜೆಪಿ-ಕಾಂಗ್ರೆಸ್ ಪೈಪೋಟಿ
- 10 ವರ್ಷದಲ್ಲಿ ಮೋದಿ ಸರ್ಕಾರ ರಾಜ್ಯಕ್ಕೆ ಏನೂ ನೀಡಿಲ್ಲ ಎಂದು ಕಾಂಗ್ರೆಸ್ ಆರೋಪ
- ಮೋದಿ ಕೊಡುಗೆ ರಾಜ್ಯಕ್ಕೆ ಅಪಾರ ಎಂದು ಅವರ ಹೆಸರಿನಲ್ಲೇ ಬಿಜೆಪಿ ಚುನಾವಣೆ ಅಖಾಡಕ್ಕೆ
--
ಸ್ಪರ್ಧೆ ಹೇಗೆ?
ಛತ್ತೀಸ್‌ಗಢದಲ್ಲಿ 11 ಸ್ಥಾನಗಳಿದ್ದು, ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಇಲ್ಲಿ ನರೇಂದ್ರ ಮೋದಿ ಅವರ ಅಲೆ ಹಾಗೂ ಇತ್ತೀಚೆಗೆ ರಾಜ್ಯದಲ್ಲಿ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಜಯಿಸಿದ ಬಳಿಕ ಮುಖ್ಯಮಂತ್ರಿ ಆಗಿರುವ ಆದಿವಾಸಿ ನಾಯಕ ವಿಷ್ಣುದೇವ ಸಾಯಿ ಅವರನ್ನು ನೆಚ್ಚಿಕೊಂಡಿದೆ. ಆದರೆ ಕಾಂಗ್ರೆಸ್ ಪಕ್ಷವು ಮೋದಿ ವಿರೋಧಿ ಅಲೆ, ರಾಜ್ಯದಲ್ಲಿನ ಹಿಂದಿನ ಭೂಪೇಶ್ ಬಘೇಲ್ ಸರ್ಕಾರದ ಸಾಧನೆಗಳನ್ನು ನೆಚ್ಚಿಕೊಂಡು ಹೋರಾಟ ನಡೆಸುತ್ತಿದೆ. ನಕ್ಸಲ್ ನಿಗ್ರಹ, ಆದಿವಾಸಿಗಳಿಗೆ ಕೊಡುಗೆ ಸೇರಿ ಅನೇಕವು ಪ್ರಮುಖ ಚುನಾವಣಾ ವಿಷಯಗಳಾಗಿವೆ.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))