ಹಾಥ್ರಸ್‌ ಕಾಲ್ತುಳಿತ: 6 ಜನರ ಬಂಧನ

| Published : Jul 05 2024, 12:48 AM IST / Updated: Jul 05 2024, 07:18 AM IST

ಸಾರಾಂಶ

ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ 121 ಮಂದಿ ಸಾವಿಗೆ ಕಾರಣರಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಗುರುವಾರ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಹಾಥ್ರಸ್‌: ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ 121 ಮಂದಿ ಸಾವಿಗೆ ಕಾರಣರಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಗುರುವಾರ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಇದೇ ಸಂದರ್ಭದಲ್ಲಿ ಭೋಲೆ ಬಾಬಾನಿಗಾಗಿ ಪೊಲೀಸರು ಮೈನ್‌ಪುರಿಯಲ್ಲಿರುವ ಆಶ್ರಮವನ್ನು ತಪಾಸಣೆ ಮಾಡಿದ್ದಾರೆ.

 ಆದರೆ ಆತ ಎಲ್ಲಿಯೂ ಪತ್ತೆಯಾಗಿಲ್ಲ.ಸುದ್ದಿಗಾರರೊಂದಿಗೆ ಮಾತನಾಡಿದ ಇನ್ಸ್‌ಪೆಕ್ಟರ್‌ ಜನರಲ್‌ ಶಲಭ್‌ ಮಾಥುರ್‌, ಭೋಲೆ ಬಾಬಾ ಅವರ ಸತ್ಸಂಗದಲ್ಲಿ ಭೋಲೆ ಬಾಬಾ ಅವರ ಸೇವಕರಾಗಿ ಕೆಲಸ ಮಾಡುವ ಆರು ಮಂದಿಯನ್ನು ಬಂಧಿಸಲಾಗಿದೆ. ಆದರೆ ಕಾರ್ಯಕ್ರಮದ ಸಂಘಟಕ ಮತ್ತು ಸೇವಾದಾರ ದೇವಪ್ರಕಾಶ್ ಮಧುಕರ್ ತಪ್ಪಿಸಿಕೊಂಡಿದ್ದಾನೆ. ಆತನ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದ್ದು, ಆತನ ಸುಳಿವು ನೀಡಿದವರಿಗೆ 1 ಲಕ್ಷ ರು. ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.

==

121 ಶವ ಗುರುತು ಪತ್ತೆ ಕುಟುಂಬಗಳಿಗೆ ಹಸ್ತಾಂತರ

ಹಾಥ್ರಸ್‌: ಹಾಥ್ರಸ್‌ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದ 121 ಜನರ ಮೃತದೇಹಗಳನ್ನು ಗುರುತಿಸಿ ಅವರವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಇನ್ನು 3 ಶವಗಳ ಗುರುತು ಪತ್ತೆ ಮಾತ್ರ ಬಾಕಿ ಇದೆ. ಮೃತರ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ 2 ಲಕ್ಷ ರು. ಹಾಗೂ ಗಾಯಗೊಂಡವರಿಗೆ 50,000 ರು. ಪರಿಹಾರ ಘೋಷಿಸಿದೆ ಎಂದು ಜಿಲ್ಲಾಧಿಕಾರಿ ಆಶಿಶ್ ಕುಮಾರ್ ಗುರುವಾರ ಮಾಹಿತಿ ನೀಡಿದ್ದಾರೆ.