ಪೊಲೀಸರು ಮಸೀದಿಯನ್ನು ಧ್ವಂಸಗೊಳಿಸಲು ಮುಂದಾಗಿದ್ದಾರೆ ಎಂದು ವ್ಯಕ್ತಿಯೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ವದಂತಿ ಹಬ್ಬಿಸಿದ ಕಾರಣ ಉದ್ವಿಗ್ನಗೊಂಡ ಗುಂಪು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ ದೆಹಲಿಯ ರಾಮಲೀಲಾ ಮೈದಾನದ ಫೈಜ್-ಎ-ಇಲಾಹಿ ಮಸೀದಿ ಸಮೀಪ ಮಂಗಳವಾರ ತಡರಾತ್ರಿ ನಡೆದಿದೆ.

ನವದೆಹಲಿ: ಪೊಲೀಸರು ಮಸೀದಿಯನ್ನು ಧ್ವಂಸಗೊಳಿಸಲು ಮುಂದಾಗಿದ್ದಾರೆ ಎಂದು ವ್ಯಕ್ತಿಯೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ವದಂತಿ ಹಬ್ಬಿಸಿದ ಕಾರಣ ಉದ್ವಿಗ್ನಗೊಂಡ ಗುಂಪು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ ದೆಹಲಿಯ ರಾಮಲೀಲಾ ಮೈದಾನದ ಫೈಜ್-ಎ-ಇಲಾಹಿ ಮಸೀದಿ ಸಮೀಪ ಮಂಗಳವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ 5 ಪೊಲೀಸರು ಗಾಯಗೊಂಡಿದ್ದು, ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಏನಿದು ಪ್ರಕರಣ?:

ದೆಹಲಿ ಹೈಕೋರ್ಟ್‌ನ ಆದೇಶದನ್ವಯ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್, ಫೈಜ್-ಎ-ಇಲಾಹಿ ಮಸೀದಿ ಸಮೀಪ ಅಕ್ರಮವಾಗಿ ನಿರ್ಮಾಣವಾಗಿದ್ದ ಕೆಲವು ವಾಣಿಜ್ಯ ಮಳಿಗೆಗಳ ತೆರವಿಗೆ ಮುಂದಾಗಿತ್ತು. ಭದ್ರತೆಗಾಗಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಖಾಲಿದ್‌ ಮಲಿಕ್ ಎಂಬ ವ್ಯಕ್ತಿ, ಮಸೀದಿಯನ್ನೇ ಪೊಲೀಸರು ಬುಲ್ಡೋಜರ್‌ನಿಂದ ನೆಲಸಮ ಮಾಡುತ್ತಿದ್ದಾರೆ. ಎಲ್ಲರೂ ಗುಂಪಾಗಿ ಮನೆಯಿಂದ ಹೊರಬನ್ನಿ’ ಎಂದು ಕರೆ ನೀಡಿದ್ದ. ಇದನ್ನೇ ನಂಬಿ ಸುಮಾರು 100-150 ಜನರ ಗುಂಪು ಸ್ಥಳಕ್ಕೆ ಬಂದು ಪೊಲೀಸರ ಮೇಲೆ ಕಲ್ಲು ಮತ್ತು ಗಾಜಿನ ಬಾಟಲಿಗಳ ತೂರಾಟ ನಡೆಸಿದೆ. ಬ್ಯಾರಿಕೇಡ್‌ಗಳನ್ನು ಮುರಿದು ಗಲಭೆ ನಡೆಸಿದೆ.

ಈ ವೇಳೆ 5 ಪೊಲೀಸರು ಗಾಯಗೊಂಡಿದ್ದಾರೆ. ಅಶ್ರುವಾಯು ಸಿಡಿಸಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಅಪ್ರಾಪ್ತ ಸೇರಿ ಐವರು ಕಸ್ಟಡಿಗೆ:

ಘಟನೆ ಸಂಬಂಧ ಪೊಲೀಸರು ಒಬ್ಬ ಅಪ್ರಾಪ್ತ ಬಾಲಕ ಸೇರಿದಂತೆ 5 ಮಂದಿಯನ್ನು ಕಸ್ಟಡಿಗೆ ಪಡೆದಿದ್ದಾರೆ. ಸುಮಾರು 10-15 ಜನರನ್ನು ವಶಕ್ಕೆ ಪಡೆಯಲಾಗಿದೆ. ‘ತುರ್ಕ್‌ಮನ್‌ ಗೇಟ್‌ ಬಳಿ 30-35 ಮಂದಿ ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದಾರೆ. ಬ್ಯಾರಿಕೇಡ್‌ಗಳನ್ನು ಮುರಿದು, ಗಲಭೆಯಲ್ಲಿ ತೊಡಗಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ದಿಲ್ಲಿ ಅಕ್ರಮ ಕಟ್ಟಡ ಧ್ವಂಸಕ್ಕೂ ಕೇರಳ ಸಿಎಂ ಆಕ್ರೋಶ

ಅಲ್ಪಸಂಖ್ಯಾತರ ಶೋಷಣೆ ಎಂದು ಕಿಡಿತಿರುವನಂತಪುರ: ಕರ್ನಾಟಕದ ಯಲಹಂಕದ ಕೋಗಿಲು ಬಡಾವಣೆ ಅಕ್ರಮ ಮನೆ ನೆಲಸಮ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್‌, ಈಗ ದೆಹಲಿಯಲ್ಲಿನ ಅಕ್ರಮ ಕಟ್ಟಡ ಧ್ವಂಸ ಕುರಿತು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿ ಟರ್ಕ್‌ಮನ್‌ ಗೇಟ್‌ ಅಕ್ರಮ ಒತ್ತುವರಿ ತೆರವು ಕುರಿತು ಎಕ್ಸ್‌ನಲ್ಲಿ ‘ದೆಹಲಿಯ ಬಿಜೆಪಿ ಸರ್ಕಾರವು ಸಂಘ ಪರಿವಾರದ ವಿಭಜನೆ ನೀತಿಯನ್ನು ಜಾರಿಗೊಳಿಸುತ್ತಿದೆ. ಅಲ್ಪಸಂಖ್ಯಾತರು, ಶೋಷಿತರನ್ನು ಗುರಿ ಮಾಡುತ್ತಿರುವ ಈ ಬುಲ್‌ಡೋಸರ್‌ ರಾಜ್‌ನನ್ನು ಜಾತ್ಯಾತೀತರು, ಪ್ರಜಾಪ್ರಭುತ್ವ ಪಡೆಗಳು ತಡೆಯಬೇಕು. ದೆಹಲಿ ಘಟನೆಯು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸುತ್ತಿವೆ’ ಎಂದು ಕಿಡಿಕಾರಿದರು.