ದೇಹ ಮತ್ತು ಮನಸ್ಸು ಎರಡಕ್ಕೂ ಕೆಲಸ ಕೊಡಬೇಕು

| Published : Dec 22 2023, 01:30 AM IST

ಸಾರಾಂಶ

ದೇಹ ಮತ್ತು ಮನಸ್ಸು ಎರಡಕ್ಕೂ ಕೆಲಸ ಕೊಡಬೇಕು, ಮೈಸೂರು- ಸಂಗೀತ ನಿರ್ದೇಶಕ ಹಂಸಲೇಖ ಅಭಿಮತಲಕ್ಷ್ಮೀಪುರಂನ ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಆರಂಭಿಸಿರುವ ಸಮರ ಕಲೆಗಳ ಸರ್ಟಿಫಿಕೇಟ್‌ಮತ್ತು ಡಿಪ್ಲೊಮಾ ಕೋರ್ಸ್‌ ಗಳಿಗೆ ಗುರುವಾರ ಚಾಲನೆ

- ಸಂಗೀತ ನಿರ್ದೇಶಕ ಹಂಸಲೇಖ ಅಭಿಮತ

- ಸಮರ ಕಲೆಗಳ ಸರ್ಟಿಫಿಕೇಟ್‌ ಮತ್ತು ಡಿಪ್ಲೊಮಾ ಕೋರ್ಸ್‌ ಗಳಿಗೆ ಚಾಲನೆ---

ಕನ್ನಡಪ್ರಭ ವಾರ್ತೆ ಮೈಸೂರು

ದೇಹ ಹಾಗೂ ಮನಸ್ಸು ಎರಡಕ್ಕೂ ಕೆಲಸ ಕೊಡಬೇಕು. ಆಗ ಮಾತ್ರ ಮನುಷ್ಯ ಪರಿಪೂರ್ಣನಾಗುತ್ತಾನೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದರು.

ಲಕ್ಷ್ಮೀಪುರಂನ ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಆರಂಭಿಸಿರುವ ಸಮರ ಕಲೆಗಳ ಸರ್ಟಿಫಿಕೇಟ್‌ಮತ್ತು ಡಿಪ್ಲೊಮಾ ಕೋರ್ಸ್‌ ಗಳಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಜೀವನೋತ್ಸಾಹ ಇರಬೇಕಾದರೆ ಸಮರಕಲೆಗಳ ಜೊತೆ ಒಡನಾಟ ಇರಬೇಕು. ಅದನ್ನು ಕಲಿಯಬೇಕು. ನಿರಾಶೆಯಲ್ಲಿದ್ದಾಗ ಭಾಗವಹಿಸುವುದರಿಂದ ಸದಾ ಚಟುವಟಿಕೆಯಿಂದ ಇರಲು ಸಾಧ್ಯ. 50 ವರ್ಷದವರೆಗೂ ಸಣ್ಣಪುಟ್ಟ ಕಾಯಿಲೆಗಳಿಂದ ದೂರವಿರಬಹುದು. ಆರೋಗ್ಯ ಗಟ್ಟಿಯಾಗಿರುವುದರಲ್ಲದೆ ಬೊಜ್ಜಿಗೆ ಹೆಚ್ಚು ವ್ಯಾಯಾಮ ಸಿಕ್ಕಾಗ ಮಿದುಳಿಗೆ ರಕ್ತ ಸಂಚಾರ ಉತ್ತಮವಾಗಿ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮರಕಲೆಯನ್ನು ವಿಶ್ವವಿದ್ಯಾಲಯ ಮಟ್ಟದವರೆಗೆ ಸಾಗಿ ಬರಲು ರಾಜ್ಯದಲ್ಲಿ ಸಾಹಸ ಕಲಾವಿದ ಹಾಸನ ರಘು ಅವರ ಪರಿಶ್ರಮವಿದೆ. ಮುಖ್ಯವಾಹಿನಿಗೆ ತರುವುದು ಅವರ ಅಭಿಲಾಷೆಯಾಗಿತ್ತು. ಅದಕ್ಕೆ ವಿಶ್ವವಿದ್ಯಾಲಯ ಬೆಂಬಲಿಸಿರುವುದ ಸ್ವಾಗತಾರ್ಹ ಎಂದರು.

ವಿಶ್ವವಿದ್ಯಾಲಯವು ಸಮರಕಲೆಗಳ ಡಿಪ್ಲೊಮಾ ಕೋರ್ಸ್ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಇಲ್ಲಿ ಕಲಿತವರಿಗೆ ಗೌರವ, ಮನ್ನಣೆಯ ಜೊತೆಗೆ ಶಾಲಾ ಕಾಲೇಜುಗಳಲ್ಲಿಯೂ ಉದ್ಯೋಗಾವಕಾಶ ಸಿಗುತ್ತದೆ ಎಂದು ಅವರು ಹೇಳಿದರು.

ಸಮರಕಲೆ ಕಲಿತವರು ಶಿಕ್ಷಣದತ್ತಲೂ ಆಸಕ್ತಿವಹಿಸಬೇಕು. ಇಲ್ಲವಾದರೆ, ಮುಗ್ಧರು, ದಡ್ಡರೆಂದುಕೊಳ್ಳುತ್ತಾರೆ. ನಮ್ಮ ಓದು ತಮಿಳುನಾಡಿನ ಆಟೋ ಚಾಲಕನಂತೆ ಇರಬೇಕು. ಅಲ್ಲಿಯ ಆಟೊಚಾಲಕ ನಿತ್ಯ ದಿನಪತ್ರಿಕೆ ಕೊಂಡು ಓದಿ ಎಲ್ಲಾ ವಿಷಯವನ್ನೂ ತಿಳಿದುಕೊಳ್ಳುತ್ತಾನೆ ಎಂದರು.

ರಂಗಕರ್ಮಿ ಬಿ. ಸುರೇಶ್‌ ಮಾತನಾಡಿ, ಸಮರಕಲೆಗಳು ಮಕ್ಕಳಲ್ಲಿ ಸ್ವಾಭಿಮಾನ ಹಾಗೂ ಆತ್ಮವಿಶ್ವಾಸ ಮೂಡಿಸುತ್ತವೆ. ಅಲ್ಲದೇ, ಕಠಿಣ ಸಂದರ್ಭದಲ್ಲಿ ಸ್ವರಕ್ಷಣೆಗೂ ನೆರವಾಗುತ್ತವೆ ಎಂದರು.

ಇದಕ್ಕೂ ಮುನ್ನ ಪುಟಾಣಿ ಪೈಲ್ವಾನರು ತೊಡೆತಟ್ಟಿ ಕುಸ್ತಿಗೆ ಬಿದ್ದರೆ, ಹೆಣ್ಣು ಮಕ್ಕಳು ಮರಕ್ಕೆ ಕಟ್ಟಿದ ಹಗ್ಗದಲ್ಲಿ ವಿವಿಧ ಕಸರತ್ತು ಪ್ರದರ್ಶಿಸಿ ನೋಡುಗರನ್ನು ಅಚ್ಚರಿಗೆ ದೂಡಿದರು. ಮಲ್ಲಗಂಬ ಏರಿದ ಯುವಕರು ಅಂಗೈಯಗಲದ ಜಾಗದಲ್ಲಿ ಚಾಕಚಕ್ಯತೆ ಮೆರೆದರೆ, ಸಾಹಸ ಕಲಾವಿದ ಹಾಸನ ರಘು ದೊಣ್ಣೆವರಸೆ ಪ್ರದರ್ಶಿಸಿ, ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು. ಬಸವರಾಜ್ ಕುದುರಿ ಮತ್ತು ತಂಡ ಮಲ್ಲಗಂಬ ಪ್ರದರ್ಶಿಸಿದರು.

ಕರ್ನಾಟಕ ಸ್ಪೋರ್ಟ್ಸ್‌ ಸಿಲಂಬಮ್ ಅಸೋಸಿಯೇಷನ್ ತಂಡದವರು ದೊಣ್ಣೆ ವರಸೆ ಮಾಡಿದರು. ಕ್ಯಾತಮಾರನಹಳ್ಳಿ ದೊಡ್ಡ ಗರಡಿಯ ಪೈಲ್ವಾನರು ಕುಸ್ತಿಯನ್ನು ಅನಾವರಣಗೊಳಿಸಿದರು. ಓಶೊಕಾಯ್ ಮಾರ್ಷಲ್ ಆರ್ಟ್‌ಸ್ ಕಾಲೇಜು ತಂಡದವರು ಕೃಷ್ಣಮೂರ್ತಿ ನೇತೃತ್ವದಲ್ಲಿ ಸಮರಕಲೆ ತೋರಿದರು.

ಲೇಖಕ ಪ್ರೊ.ಕೆ.ವೈ. ನಾರಾಯಣಸ್ವಾಮಿ, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ, ಕುಲಸಚಿವ ಎಂ.ಆರ್. ರಾಜೇಶ್, ಪರೀಕ್ಷಾಂಗ ಕುಲಸಚಿವ ಪ್ರೊ. ಮಹದೇವನ್, ಭಾರತೀಯ ಶೈಲಿ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಕೆ.ಎನ್. ವಿಜಯಕುಮಾರ್, ಪೈಲ್ವಾನ್ ಚಿನ್ನ, ಕರ್ನಾಟಕ ಸಾಹಸ ಕಲಾ ಅಕಾಡೆಮಿ ಎಂ. ಅಲ್ಪ್‌ ಪಾಷಾ, ಶಿವಮೊಗ್ಗ ವಿನೋದ್ ಇದ್ದರು.