ಏರ್ ಇಂಡಿಯಾ ವಿಮಾನ ಅಪಹರಣ ಆಧರಿಸಿದ ಐಸಿ 814 : ಉಗ್ರರ ಹೆಸರು ಬದಲಾವಣೆ, ನೆಟ್‌ಫ್ಲಿಕ್ಸ್‌ ಚಿತ್ರ ವಿವಾದ

| Published : Sep 02 2024, 02:12 AM IST / Updated: Sep 02 2024, 05:05 AM IST

ಸಾರಾಂಶ

ನಿಜ ಜೀವನದ ಏರ್ ಇಂಡಿಯಾ ವಿಮಾನ ಅಪಹರಣವನ್ನು ಆಧರಿಸಿದ ನೆಟ್‌ಫ್ಲಿಕ್ಸ್‌ನ 'ಐಸಿ 814' ಚಿತ್ರವು ಉಗ್ರರ ಹೆಸರುಗಳನ್ನು ಬದಲಾಯಿಸಿರುವುದಕ್ಕೆ ಟೀಕೆಗೆ ಗುರಿಯಾಗಿದೆ.  

ನವದೆಹಲಿ: 1999ರಲ್ಲಿ ತಾಲಿಬಾನ್‌ ಉಗ್ರರು ನಡೆಸಿದ್ದ ಏರಿಂಡಿಯಾ ವಿಮಾನ ಅಪಹರಣದ ಕಥಾಹಂದರ ಹೊಂದಿ ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ‘ಐಸಿ 814’ ಚಿತ್ರ ಭಾರೀ ವಿವಾದಕ್ಕೆ ಕಾರಣವಾಗಿದೆ. ವಿಮಾನ ಅಪಹರಣದಲ್ಲಿ ಭಾಗಿಯಾಗಿದ್ದ ಮುಸ್ಲಿಂ ಉಗ್ರರ ಹೆಸರನ್ನು ಚಿತ್ರದಲ್ಲಿ ಹಿಂದೂಗಳ ಹೆಸರಿಗೆ ಬದಲಾಯಿಸಿರುವುದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಚಿತ್ರವನ್ನು ಬಹಿಷ್ಕರಿಸಿ ಎಂದು ಜಾಲತಾಣದಲ್ಲಿ ಅಭಿಯಾನ ಆರಂಭಿಸಲಾಗಿದೆ.

ಏನಿದು ವಿವಾದ?: ಭಾರತದಲ್ಲಿ ಜೈಲಿನ ಬಂಧಿತ ತಮ್ಮ ಸಹಚರರ ಬಿಡುಗಡೆಯಾಗಿ ತಾಲಿಬಾನ್‌ ಉಗ್ರರು ಕಾಠ್ಮಂಡುವಿನಿಂದ ನವದೆಹಲಿಗೆ ಬರುತ್ತಿದ್ದ 154 ಜನರಿದ್ದ ‘ಐಸಿ 814’ ವಿಮಾನವನ್ನು ಆಫ್ಘಾನಿಸ್ತಾನದ ಕಂದಹಾರ್‌ಗೆ ಅಪಹರಿಸಿ ಒತ್ತೆ ಇಟ್ಟುಕೊಂಡಿದ್ದರು. ಈ ಕೃತ್ಯದಲ್ಲಿ ಇಬ್ರಾಹಿಂ ಅಖ್ತರ್‌, ಶಾಹಿದ್‌ ಅಖ್ತರ್ ಸೈದ್‌, ಸನ್ನಿ ಅಹ್ಮದ್‌ ಖಾಜಿ, ಜಹೂರ್‌ ಮಿಸ್ತ್ರೀ, ಮತ್ತು ಶಾಖೀರ್‌ ಭಾಗಿಯಾಗಿದ್ದರು. ಬಳಿಕ ಜೈಲಿನಲ್ಲಿದ್ದ ಉಗ್ರರನ್ನು ಬಿಡುಗಡೆ ಮಾಡಿ, ಅಪಹೃತರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲಾಗಿತ್ತು.

ಇದೇ ಕಥೆ ಆಧರಿಸಿ ಅನುಭವ್ ಸಿನ್ಹಾ ‘ಐಸಿ 814’ ಎಂಬ ಚಿತ್ರ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಉಗ್ರರ ಹೆಸರನ್ನು ಭೋಲಾ, ಶಂಕರ್‌, ಡಾಕ್ಟರ್‌, ಬರ್ಗರ್‌, ಚೀಫ್‌ ಎಂದು ಹೆಸರಿಸಲಾಗಿದೆ. ಇದು ಮುಸ್ಲಿಂ ಉಗ್ರರಿಗೆ ಕ್ಲೀನ್‌ಚಿಟ್‌ ನೀಡುವ ಯತ್ನ. ಹೀಗಾಗಿ ಚಿತ್ರ ಬಹಿಷ್ಕರಿಸಿ ಎಂದು ಜಾಲತಾಣದಲ್ಲಿ ಅಭಿಯಾನ ಆರಂಭಿಸಲಾಗಿದೆ.

ಆದರೆ ಚಿತ್ರತಂಡ ಮಾತ್ರ. ಇದರ ಹಿಂದೆ ಯಾವುದೇ ದುರುದ್ದೇಶ ಇಲ್ಲ. ಉಗ್ರರು ತಮ್ಮ ತಮ್ಮ ನಡುವೆ ಸಂಭಾಷಣೆಗಾಗಿ ಈ ಹಿಂದೂ ಹೆಸರುಗಳನ್ನು ಕೋಡ್‌ ನೇಮ್‌ ಆಗಿ ಬಳಸುತ್ತಿದ್ದರು ಎಂದು ಸ್ಪಷ್ಟನೆ ನೀಡಿದೆ. ಆದರೆ ನೆಟ್ಟಿಗರು ಮಾತ್ರ ಇದಕ್ಕೆ ಕಿವಿಗೊಟ್ಟಿಲ್ಲ. ಚಿತ್ರದ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ.