ಸಾರಾಂಶ
ನವದೆಹಲಿ: ರಾಜ್ಯಸಭೆಯ ಹಾಲಿ 225 ಸದಸ್ಯರ ಒಟ್ಟು ಆಸ್ತಿ ಭರ್ಜರಿ 19602 ಕೋಟಿ ರು.ನಷ್ಟಿದೆ. ಅಂದರೆ ಪ್ರತಿ ಸದಸ್ಯರ ಸರಾಸರಿ ಆಸ್ತಿ 87.12 ಕೋಟಿ ರು. ಎಂಬ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಇನ್ನು ಹೀಗೆ ರಾಜ್ಯಸಭೆ ಪ್ರವೇಶ ಮಾಡಿರುವ ಶ್ರೀಮಂತ ಸದಸ್ಯರ ಪೈಕಿ ಟಿಆರ್‌ಎಸ್, ವೈಎಸ್‌ಆರ್ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡಿದ್ದಾರೆ.ಚುನಾವಣಾ ಸುಧಾರಣಾ ಸಂಸ್ಥೆಯಾದ ‘ದ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್’ (ಎಡಿಆರ್) ಮತ್ತು ‘ನ್ಯಾಷನಲ್ ಎಲೆಕ್ಷನ್ ವಾಚ್’ ನಡೆಸಿದ ಜಂಟಿ ಅಧ್ಯಯನದಲ್ಲಿ ಈ ಅಂಶ ಹೊರಬಿದ್ದಿದೆ. ರಾಜ್ಯಸಭೆಯ 233 ಸದಸ್ಯರ ಪೈಕಿ 225 ಜನರ ಅಂಕಿ ಅಂಶ ಆಧರಿಸಿ ಈ ವರದಿ ತಯಾರಿಸಲಾಗಿದೆ.ಶತಕೋಟ್ಯಧೀಶರು:ಬಿಜೆಪಿಯ 90ರ ಪೈಕಿ 9, ಕಾಂಗ್ರೆಸ್‌ನ 28ರ ಪೈಕಿ 4, ವೈಎಸ್‌ಆರ್ ಕಾಂಗ್ರೆಸ್‌ನ 11ರ ಪೈಕಿ 5, ಆಪ್‌ನ 10ರ ಪೈಕಿ 2, ಟಿಆರ್‌ಎಸ್‌ನ ನಾಲ್ವರ ಪೈಕಿ 3, ಆರ್‌ಜೆಡಿಯ 6ರ ಪೈಕಿ 2 100 ಕೋಟಿ ರು.ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ.ಶ್ರೀಮಂತ ಪಕ್ಷ:ಇನ್ನು ರಾಜಕೀಯ ಪಕ್ಷಗಳ ಸದಸ್ಯರ ಸರಾಸರಿ ಆಸ್ತಿ ನೋಡುವುದಾದರೆ ಟಿಆರ್‌ಎಸ್ ಸದಸ್ಯರು 1384 ಕೋಟಿ ರು., ವೈಎಸ್‌ಆರ್ ಕಾಂಗ್ರೆಸ್ ಸದಸ್ಯರು 358 ಕೋಟಿ ರು., ಆಪ್ ಸದಸ್ಯರು 114 ಕೋಟಿ ರು., ಕಾಂಗ್ರೆಸ್ ಸದಸ್ಯರು 40.70, ಬಿಜೆಪಿಯ ಸದಸ್ಯರು 37.34 ಕೋಟಿ ರು., ಕಾಂಗ್ರೆಸ್ ಸದಸ್ಯರು 10.25 ಕೋಟಿ ರು., ಡಿಎಂಕೆ ಸದಸ್ಯರು 6.37 ಕೋಟಿ ರು. ಸರಾಸರಿ ಆಸ್ತಿ ಹೊಂದಿದ್ದಾರೆ. ಹೀಗೆ ಎಲ್ಲಾ ಸದಸ್ಯರು ಒಟ್ಟು ಆಸ್ತಿ 19602 ಕೋಟಿ ರು.ನಷ್ಟಿದೆ ಎಂದು ವರದಿ ಹೇಳಿದೆ.ಪಕ್ಷವಾರು ಸದಸ್ಯರ ಆಸ್ತಿ:ಟಿಆರ್‌ಎಸ್ ಸದಸ್ಯರ ಒಟ್ಟು ಆಸ್ತಿ 5534 ಕೋಟಿ ರು., ವೈಎಸ್‌ಆರ್ ಕಾಂಗ್ರೆಸ್ ಸದಸ್ಯರ ಆಸ್ತಿ 3934, ಬಿಜೆಪಿ ಸದಸ್ಯರ ಆಸ್ತಿ 3360 ಕೋಟಿ ರು., ಆಪ್ ಸದಸ್ಯರ ಆಸ್ತಿ 1148 ಕೋಟಿ ರು., ಕಾಂಗ್ರೆಸ್ ಸದಸ್ಯರ ಆಸ್ತಿ 1139 ಕೋಟಿ ರು. ಇದೆ ಎಂದು ವರದಿ ಹೇಳಿದೆ.ಕ್ರಿಮಿನಲ್ ಹಿನ್ನೆಲೆ:225 ಸದಸ್ಯರ ಪೈಕಿ 75 ಜನರು ತಮ್ಮ ವಿರುದ್ಧ ಕ್ರಿಮಿನಲ್ ಕೇಸಿದೆ ಎಂದು ಹೇಳಿದ್ದಾರೆ. 40 ಜನರು ಅತ್ಯಂತ ಗಂಭೀರ ಕ್ರಿಮಿನಲ್ ಕೇಸಿದೆ ಎಂದಿದ್ದಾರೆ. ಈ ಪೈಕಿ ಸಿಪಿಎಂನ ಶೇ.80, ಆರ್‌ಜೆಡಿಯ ಶೇ.67, ಕಾಂಗ್ರೆಸ್‌ನ ಶೇ.50, ಟಿಎಂಸಿಯ ಶೇ.38, ವೈಎಸ್‌ಆರ್‌ನ ಶೇ.36, ಆಪ್‌ನ ಶೇ.30, ಬಿಜೆಪಿಯ ಶೇ.23, ಡಿಎಂಕೆ ಶೇ.20ರಷ್ಟು ಸಂಸದರು ಕ್ರಿಮಿನಲ್ ಕೇಸು ದಾಖಲಾಗಿದೆ ಎಂದಿದ್ದಾರೆ.ರಾಜ್ಯವಾರು ಪಟ್ಟಿ:ಇನ್ನು ಕ್ರಿಮಿನಲ್ ಕೇಸು ದಾಖಲಾದ ಸಂಸದರ ರಾಜ್ಯವಾರು ಸರಾಸರಿ ನೋಡಿದರೆ ಕೇರಳದ ಶೇ.67, ಮಹಾರಾಷ್ಟ್ರದ ಶೇ.61, ಬಿಹಾರದ ಶೇ.50,ಪಶ್ಚಿಮ ಬಂಗಾಳದ ಶೇ.44, ತಮಿಳುನಾಡಿನ ಶೇ.33, ಉತ್ತರಪ್ರದೇಶದ ಶೇ.29 ರಷ್ಟು ಪಾಲು ಹೊಂದಿದೆ.