ಸಾರಾಂಶ
ಲೋಕಸಭೆ ಚುನಾವಣೆಗೂ ಮುನ್ನ ಬಿಎಸ್ಪಿಗೆ ದೊಡ್ಡ ಹೊಡೆತ ಉಂಟಾಗಿದ್ದು, ಪ್ರಧಾನಿ ಮೋದಿ ಜೊತೆಗೆ ಲೋಕಸಭೆಯಲ್ಲಿ ಭೋಜನ ಸವಿದಿದ್ದ ಬಿಎಸ್‌ಪಿ ಸಂಸದ ರಿತೇಶ್ ಪಾಂಡೆ ಬಿಜೆಪಿ ಸೇರಿದ್ದಾರೆ.
ಲಖನೌ: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಉತ್ತರಪ್ರದೇಶದಲ್ಲಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷಕ್ಕೆ (ಬಿಎಸ್ಪಿ) ಬಹುದೊಡ್ಡ ಹೊಡೆತ ಬಿದ್ದಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಜತೆ ಲೋಕಸಭೆ ಬಜೆಟ್ ಅಧಿವೇಶನದ ವೇಳೆ ಊಟ ಮಾಡಿದ್ದ ಅಂಬೇಡ್ಕರ್ ನಗರ ಕ್ಷೇತ್ರದ ಬಿಎಸ್ಪಿ ಸಂಸದ ರಿತೇಶ್ ಪಾಂಡೆ ಭಾನುವಾರ ಬಿಜೆಪಿ ಸೇರಿದ್ದಾರೆ.
ರಿತೇಶ್ ಅವರನ್ನು ಹಾಲಿ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರದಿಂದಲೇ ಕಣಕ್ಕೆ ಇಳಿಸಲು ಬಿಜೆಪಿ ಕೂಡಾ ಸಮ್ಮತಿಸಿದೆ ಎನ್ನಲಾಗಿದೆ. ರಿತೇಶ್ ಅವರ ತಂದೆ ರಾಕೇಶ್ ಪಾಂಡೆ ಹಾಲಿ ಬಿಎಸ್ಪಿ ಶಾಸಕರಾಗಿದ್ದಾರೆ.ಮೋದಿ ಇತ್ತೀಚೆಗೆ ಅಧಿವೇಶನದ ಅಂತ್ಯದ ವೇಳೆಗೆ ಅಚ್ಚರಿ ಎಂಬಂತೆ ಕೆಲವು ವಿಪಕ್ಷಗಳ ಸಂಸದರನ್ನು ತಮ್ಮ ಜತೆ ಕೂರಿಸಿಕೊಂಡು ಸಂಸತ್ ಕ್ಯಾಂಟೀನ್‌ನಲ್ಲೇ ಊಟ ಮಾಡಿದ್ದರು. ಆಗಲೇ ಮೋದಿ ಅವರು ಈ ಸಂಸದರಿಗೆ ಗಾಳ ಹಾಕಿದ್ದಾರೆ ಎಂಬ ಸುದ್ದಿ ಹರಡಿದ್ದವು.
ಈ ನಡುವೆ ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ರಿತೇಶ್, ಅಭಿವೃದ್ಧಿ ಹೊಂದಿದ ಭಾರತ ಕುರಿತಾದ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಿಂದ ಪ್ರೇರಿತರಾಗಿ ಬಿಜೆಪಿ ಸೇರಿದ್ದಾಗಿ ಹೇಳಿದ್ದಾರೆ. ಇದಕ್ಕೂ ಮುನ್ನ ಪಕ್ಷದಲ್ಲಿ ತಮ್ಮನ್ನು ಹಲವು ಸಮಯಗಳಿಂದ ಕಡೆಗಣಿಸಿದ್ದರ ಬಗ್ಗೆಯೂ ನೋವು ತೋಡಿಕೊಂಡ ರಿತೇಶ್, ಬಿಎಸ್ಪಿಗೆ ಇನ್ನು ತಮ್ಮ ಅವಶ್ಯಕತೆ ಇಲ್ಲ ಎಂಬ ಭಾವನೆ ತಮ್ಮಲ್ಲೂ ಮೂಡಿದೆ. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪ್ರಕಟಿಸಿದರು.