ದೇಶೀಯ ಉತ್ಪಾದನಾ ಕ್ಷೇತ್ರಕ್ಕೆ ಒತ್ತು ನೀಡಲು 10 ರಾಜ್ಯಗಳಲ್ಲಿ 12 ಕೈಗಾರಿಕಾ ನಗರ ನಿರ್ಮಾಣ : ಕೇಂದ್ರ ಸರ್ಕಾರ

| Published : Aug 29 2024, 12:54 AM IST / Updated: Aug 29 2024, 04:55 AM IST

ಸಾರಾಂಶ

ದೇಶೀಯ ಉತ್ಪಾದನಾ ಕ್ಷೇತ್ರಕ್ಕೆ ಇನ್ನಷ್ಟು ಒತ್ತು ನೀಡಲು 10 ರಾಜ್ಯಗಳಲ್ಲಿ 12 ಕೈಗಾರಿಕಾ ನಗರಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕೆ 28,602 ಕೋಟಿ ರು. ಖರ್ಚು ಮಾಡುವುದಕ್ಕೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.

 ನವದೆಹಲಿ : ದೇಶೀಯ ಉತ್ಪಾದನಾ ಕ್ಷೇತ್ರಕ್ಕೆ ಇನ್ನಷ್ಟು ಒತ್ತು ನೀಡಲು 10 ರಾಜ್ಯಗಳಲ್ಲಿ 12 ಕೈಗಾರಿಕಾ ನಗರಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕೆ 28,602 ಕೋಟಿ ರು. ಖರ್ಚು ಮಾಡುವುದಕ್ಕೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ. ಉತ್ತರಪ್ರದೇಶದ ನೋಯ್ಡಾ, ಗುಜರಾತ್‌ನ ಧೊಲೇರಾ ಮಾದರಿಯಲ್ಲಿ ಈ ನಗರ ಅಭಿವೃದ್ಧಿಪಡಿಸಲಾಗುವುದು ಎಂದು ಸರ್ಕಾರ ಹೇಳಿದೆ. 

ಉತ್ತರಾಖಂಡ, ಪಂಜಾಬ್‌, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ (ಎರಡು), ಬಿಹಾರ, ತೆಲಂಗಾಣ, ಆಂಧ್ರಪ್ರದೇಶ (ಎರಡು) ಹಾಗೂ ರಾಜಸ್ಥಾನದಲ್ಲಿ ಒಟ್ಟು 12 ಕೈಗಾರಿಕಾ ನಗರಗಳನ್ನು ನಿರ್ಮಿಸಲಾಗುತ್ತದೆ. ನ್ಯಾಷನಲ್‌ ಇಂಡಸ್ಟ್ರಿಯಲ್‌ ಕಾರಿಡಾರ್‌ ಡೆವಲಪ್‌ಮೆಂಟ್‌ ಪ್ರೋಗ್ರಾಂ ಅಡಿಯಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. 

ಆದರೆ ಕರ್ನಾಟಕಕ್ಕೆ ಒಂದೂ ಇಂಡಸ್ಟ್ರಿಯಲ್‌ ಕಾರಿಡಾರ್‌ ಲಭಿಸಿಲ್ಲ.ವಿಶೇಷವೆಂದರೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಜೆಡಿಯು ನೆಲೆಯಾದ ಬಿಹಾರ ಮತ್ತು ಟಿಡಿಪಿ ನೆಲೆಯಾದ ಆಂಧ್ರಪ್ರದೇಶ ರಾಜ್ಯಗಳಿಗೆ ತಲಾ ಒಂದೊಂದು ಕೈಗಾರಿಕಾ ಸಿಟಿ ಲಭ್ಯವಾಗಿದೆ.ಸಚಿವ ಸಂಪುಟ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ‘ಇಂಡಸ್ಟ್ರಿಯಲ್‌ ಸಿಟಿಗಳು ದೇಶದ ಔದ್ಯೋಗಿಕ ಚಹರೆಯನ್ನೇ ರೂಪಾಂತರಗೊಳಿಸಲಿವೆ.

 ಇವುಗಳ ಮೂಲಕ ದೇಶದ ಉತ್ಪಾದನಾ ವಲಯಕ್ಕೆ ಬಹುದೊಡ್ಡ ಪ್ರೋತ್ಸಾಹ ಸಿಗಲಿದೆ. ಆರ್ಥಿಕಾಭಿವೃದ್ಧಿ ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕತೆಗೂ ಇವು ಕೊಡುಗೆ ನೀಡಲಿವೆ’ ಎಂದು ಹೇಳಿದರು.ಜಾಗತಿಕ ಗುಣಮಟ್ಟದ ಸ್ಮಾರ್ಟ್‌ ಸಿಟಿಗಳ ರೂಪದಲ್ಲಿ ಔದ್ಯೋಗಿಕ ನಗರಗಳನ್ನು ನಿರ್ಮಿಸಲಾಗುತ್ತದೆ. 

ಈ ನಗರಗಳಲ್ಲಿ ಎಲ್ಲಾ ರೀತಿಯ ಅತ್ಯಾಧುನಿಕ ಮೂಲಸೌಕರ್ಯಗಳು, ಸುಸ್ಥಿರ ಹಾಗೂ ದಕ್ಷವಾದ ಔದ್ಯೋಗಿಕ ಚಟುವಟಿಕೆಗಳಿಗೆ ಒತ್ತು ನೀಡಲಾಗುತ್ತದೆ. ಒಟ್ಟಾರೆ ಈ ಯೋಜನೆಗಳು ದೇಶದಲ್ಲಿ ಸುಮಾರು 1.52 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಯಾಗುವಂತೆ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ತಿಳಿಸಿದರು.ನ್ಯಾಷನಲ್‌ ಇಂಡಸ್ಟ್ರಿಯಲ್‌ ಕಾರಿಡಾರ್‌ ಡೆವಲಪ್‌ಮೆಂಟ್‌ ಪ್ರೋಗ್ರಾಂ ಅಡಿಯಲ್ಲಿ ಔದ್ಯೋಗೀಕರಣದ ಮೂಲಕ 10 ಲಕ್ಷ ನೇರ ಮತ್ತು 30 ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.