ಸಾರಾಂಶ
60 ವರ್ಷಗಳ ಹಳೆಯದಾದ ಆದಾಯ ತೆರಿಗೆ ಕಾಯ್ದೆಯನ್ನು ಬದಲಾಯಿಸುವ ಉದ್ದೇಶ ಹೊಂದಿರುವ ನೂತನ ತೆರಿಗೆ ಕಾಯ್ದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಈ ಕರಡು ಮಸೂದೆಯನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ಮಂಡನೆಯ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.
ನವದೆಹಲಿ: 60 ವರ್ಷಗಳ ಹಳೆಯದಾದ ಆದಾಯ ತೆರಿಗೆ ಕಾಯ್ದೆಯನ್ನು ಬದಲಾಯಿಸುವ ಉದ್ದೇಶ ಹೊಂದಿರುವ ನೂತನ ತೆರಿಗೆ ಕಾಯ್ದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಈ ಕರಡು ಮಸೂದೆಯನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ಮಂಡನೆಯ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.
ಹಾಲಿ ಇರುವ ತೆರಿಗೆ ಪದ್ಧತಿ ಅತ್ಯಂತ ಕ್ಷಿಷ್ಟವಾಗಿದ್ದು, ಅದನ್ನು ಅತ್ಯಂತ ಸರಳ, ಸುಲಲಿತ ಮಾಡುವ, ಜನಸಾಮಾನ್ಯರೂ ಕೂಡಾ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಇದೀಗ ಬದಲಾಯಿಸಲಾಗಿದೆ ಎನ್ನಲಾಗಿದೆ. ಜೊತೆಗೆ ಕೆಲವೊಂದು ತಿದ್ದುಪಡಿಗಳನ್ನೂ ಹೊಸ ಕಾಯ್ದೆ ಒಳಗೊಂಡಿದೆ. ಆದರೆ ಹೊಸ ಕಾಯ್ದೆ ಯಾವುದೇ ಹೊಸ ತೆರಿಗೆಯನ್ನು ಹೊಂದಿಲ್ಲ ಎನ್ನಲಾಗಿದೆ.
ಏನೇನು ಬದಲಾವಣೆ?:
ಹೊಸ ಕಾಯ್ದೆ ಅನ್ವ, ಕೆಲ ತೆರಿಗೆ ವಿನಾಯ್ತಿ ಅಥವಾ ಆದಾಯ ತೆರಿಗೆ ಕಾಯ್ದೆ ತಿದ್ದುಪಡಿಗೆ ಸರ್ಕಾರವು ಬಜೆಟ್‌ವರೆಗೆ ಕಾಯುವ ಬದಲು ಕಾರ್ಯಾದೇಶದ ಮೂಲಕ ಬದಲಾವಣೆಗೆ ಅವಕಾಶ ಮಾಡಿಕೊಡಲಿದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತರಲುದ್ದೇಶಿಸಿರುವ ಆದಾಯ ತೆರಿಗೆ ಕಾಯ್ದೆಯು ಹಾಲಿ ಇರುವ ತೆರಿಗೆ ವ್ಯವಸ್ಥೆಗೆ ಹೊಸರೂಪ ನೀಡುವುದಲ್ಲದೆ ಅನಗತ್ಯ ಎಂದು ಕಂಡು ಬಂದ ಅಂಶಗಳನ್ನು ತೆಗೆದು ಹಾಕಲಿದೆ.
ಹಳೆಯ ಕಾಯ್ದೆಯನ್ನು ಯುವ ಭಾರತದ ಪರಿಸ್ಥಿತಿಗೆ ಅನುಗುಣವಾಗಿ ರೂಪಿಸಲಾಗಿತ್ತು. ಆ ಬಳಿಕ 60 ವರ್ಷಗಳಲ್ಲಿ ದೇಶ, ಉದ್ಯಮ, ವ್ಯವಹಾರಗಳು, ತೆರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ತೆರಿಗೆ ಪಾವತಿಸುವ ರೀತಿಯಲ್ಲೂ ತಾಂತ್ರಿಕವಾಗಿ ಸಾಕಷ್ಟು ಬದಲಾವಣೆಗಳು ಆಗಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಹೊಸ ಆದಾಯ ತೆರಿಗೆಯನ್ನು ಜಾರಿಗೆ ತರಲಾಗುತ್ತಿದೆ.
ಓದುಗ ಸ್ನೇಹಿ: ಹೊಸ ಆದಾಯ ತೆರಿಗೆ ಕಾಯ್ದೆಯು ಓದುಗ ಸ್ನೇಹಿಯಾಗಿರಲಿದೆ. ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಇರಲಿದೆ. ಹಾಲಿ ಕಾಯ್ದೆಯಲ್ಲಿರುವ ಗೊಂದಲಗಳನ್ನು ನಿವಾರಿಸಿ ವಿವಾದಗಳನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿದೆ.
1961ರ ತೆರಿಗೆ ನೀತಿಯು ನೇರ ತೆರಿಗೆ, ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೆಟ್ ಟ್ಯಾಕ್ಸ್, ಸೆಕ್ಯುರಿಟಿ ಮತ್ತು ಟ್ರಾನ್ಸಾಕ್ಷನ್ ಟ್ಯಾಕ್ಸ್, ಗಿಫ್ಟ್ ಮತ್ತು ಸಂಪತ್ತಿನ ತೆರಿಗೆಯ ಕುರಿತು ವಿವರಿಸುತ್ತದೆ. ಸದ್ಯ ಈ ಕಾಯ್ದೆಯು 298 ಸೆಕ್ಷನ್‌ಗಳು ಮತ್ತು 23 ಅಧ್ಯಾಯಗಳನ್ನು ಒಳಗೊಂಡಿದೆ. ಕಾಲಾನುಕಾಲದಲ್ಲಿ ಸರ್ಕಾರವು ಸಂಪತ್ತಿನ ಮೇಲಿನ, ಗಿಫ್ಟ್ ಮೇಲಿನ ತೆರಿಗೆ ಸೇರಿ ಹಲವು ತೆರಿಗೆಗಳನ್ನು ತೆಗೆದುಹಾಕಿದೆ. ಅಲ್ಲದೆ, 2022ರಲ್ಲಿ ಹೊಸ ಆದಾಯ ತೆರಿಗೆ ವ್ಯವಸ್ಥೆ ಜಾರಿಗೆ ಬಂದಿದೆ. ಈ ರೀತಿ ಕಳೆದ ಆರು ದಶಕಗಳಲ್ಲಿ ತೆರಿಗೆ ನೀತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹೀಗಾಗಿ ಉದ್ದೇಶಿತ ಹೊಸ ಕಾಯ್ದೆಯಲ್ಲಿ ಅನಗತ್ಯವೆನಿಸಿದ ಅಧ್ಯಾಯನ, ಕಲಂಗಳನ್ನು ತೆಗೆದುಹಾಕಲಾಗಿದ್ದು, ಗೊಂದಲಗಳಿಲ್ಲದಂತೆ ನೋಡಿಕೊಳ್ಳಲಾಗಿದೆ.
ಈ ಹೊಸ ಆದಾಯ ತೆರಿಗೆ ಮಸೂದೆಯು ಈ ಬಜೆಟ್ ಅಧಿವೇಶನದಲ್ಲೇ ಮಂಡನೆಯಾಗುವ ನಿರೀಕ್ಷೆ ಇದ್ದು, ಬಳಿಕ ಮತ್ತಷ್ಟು ಕೂಲಂಕಷ ಪರಿಶೀಲನೆಗಾಗಿ ಹಣಕಾಸಿಗೆ ಸಂಬಂಧಿಸಿದ ಸ್ಥಾಯಿ ಸಮಿತಿ ಮುಂದೆ ಹೋಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))