ಪತ್ನಿಗೆ ಭೂತ, ಪಿಶಾಚಿ ಎಂಬ ಬೈಗುಳ ಕ್ರೌರ್ಯವಲ್ಲ: ಕೋರ್ಟ್‌

| Published : Mar 31 2024, 02:02 AM IST

ಸಾರಾಂಶ

ಹಳಸಿದ ಸಂಬಂಧದಲ್ಲಿ ಈ ಆದೇಶ ಅನ್ವಯ ಆಗಲಿದೆ ಎಂದು ಪಟನಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪಟನಾ: ಸತಿ-ಪತಿಗಳ ನಡುವೆ ಸಂಬಂಧ ಹದಗೆಟ್ಟಿರುವ ಸಮಯದಲ್ಲಿ ಗಂಡ ತನ್ನ ಪತ್ನಿಯನ್ನು ಭೂತ-ಪಿಶಾಚಿ ಎಂದು ಸಂಬೋಧಿಸುವುದು ಕ್ರೌರ್ಯ ಎನಿಸಿಕೊಳ್ಳುವುದಿಲ್ಲ ಎಂಬುದಾಗಿ ಪಟನಾ ಹೈಕೋರ್ಟ್ಮ ತೀರ್ಪು ನೀಡಿದೆ.

ಈ ಕುರಿತು ಆದೇಶ ನೀಡಿದ ನ್ಯಾ.ವಿವೇಕ್‌ ಚೌಧರಿ, ‘ಪ್ರಕರಣದಲ್ಲಿ ಗಂಡ ಹೆಂಡತಿಯ ನಡುವೆ ಸಂಬಂಧ ಸರಿಯಿರಲಿಲ್ಲ ಎನ್ನುವುದು ಸಾಬೀತಾಗಿದೆ. ಈ ಸಮಯದಲ್ಲಿ ಇಬ್ಬರ ನಡುವೆ ಭೂತ-ಪಿಶಾಚಿ ಎಂದು ಸಂಬೋಧನೆ ನಡೆಯುವುದು ಸಾಮಾನ್ಯ. ಹಾಗಾಗಿ ಇದು ಕ್ರೌರ್ಯ ಎನಿಸಿಕೊಳ್ಳುವುದಿಲ್ಲ’ ಎಂದು ತೀರ್ಪು ನೀಡಿದರು.

ಏನಿದು ಪ್ರಕರಣ?

ಬಿಹಾರದಲ್ಲಿ ನರೇಶ್‌ ಕುಮಾರ್‌ ಮತ್ತು ಜ್ಯೋತಿ ಎಂಬುವವರು 1993ರಲ್ಲಿ ವಿವಾಹವಾಗಿದ್ದರು. ಬಳಿಕ ಪತಿ ಮತ್ತು ಆತನ ತಂದೆ ಹೆಂಡತಿಯ ಮನೆಯವರಿಗೆ ಕಾರನ್ನು ವರದಕ್ಷಿಣೆಯಾಗಿ ನೀಡುವಂತೆ ಪೀಡಿಸುತ್ತಿದ್ದರು ಎಂಬುದಾಗಿ ಪತ್ನಿಯ ಮನೆಯವರು ಪ್ರಕರಣ ದಾಖಲಿಸಿದ್ದರು. ಅದರಲ್ಲಿ ಪತಿ ತನ್ನನ್ನು ಭೂತ ಪಿಶಾಚಿ ಎಂದೆಲ್ಲಾ ಸಂಬೋಧಿಸುತ್ತಿರುವುದಾಗಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ನಳಂದಾ ನ್ಯಾಯಾಲಯ ಪತ್ನಿಯ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಗಂಡನ ಮನೆಯವರು ಪಟನಾ ಹೈಕೊರ್ಟ್‌ ಮೆಟ್ಟಿಲೇರಿದ್ದರು. ಆಗ ಪತಿಯು ವರದಕ್ಷಿಣೆ ಕೇಳಿರುವುದಕ್ಕೆ ಮತ್ತು ಶೋಷಣೆ ಮಾಡಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರ ಇಲ್ಲ ಎಂದು ತಿಳಿಸಿ ವಿಚ್ಛೇದನ ನೀಡಿದೆ.