ಮುಂಬೈ: ರಾತ್ರಿ ಊಟಕ್ಕೆ ಬಿರಿಯಾನಿ ಸೇವಿಸಿ ಆ ಬಳಿಕ ಕಲ್ಲಂಗಡಿ ತಿಂದು ಫುಡ್‌ ಪಾಯಿಸನ್‌ನಿಂದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಆಘಾತಕಾರಿ ಘಟನೆ ಮುಂಬೈನ ಪೈಧೋನಿ ಪ್ರದೇಶದಲ್ಲಿ ನಡೆದಿದೆ. ಅಬ್ದುಲ್ಲಾ ದೊಕಾಡಿಯೊ, ನಸ್ರೀನ್‌ ದೊಕಾಡಿಯೊ ಮತ್ತು ಅವರ ಪುತ್ರಿಯರಾದ ಆಯಿಷಾ ಮತ್ತು ಜೈನಾಬ್‌ ಮೃತ ದುರ್ದೈವಿಗಳು. ಇವರು ತಮ್ಮ ಮನೆಯಲ್ಲಿ ರಾತ್ರಿ ಔತಣ ಕೂಟ ಆಯೋಜಿಸಿದ್ದರು. ಸಂಬಂಧಿಕರ ಜತೆ ಬಿರಿಯಾನಿ ಸೇವಿಸಿದ ಬಳಿಕ ಒಂದು ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದಾರೆ. ಆ ಬಳಿಕ ಕೆಲವೇ ಗಂಟೆಗಳಲ್ಲಿ ನಾಲ್ವರು ವಾಂತಿ, ಹೊಟ್ಟೆ ನೋವಿನಿಂದ ಬಳಲಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ದುರಾದೃಷ್ಟವಶಾತ್‌ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಆದರೆ ಘಟನೆಗೆ ರಾತ್ರಿ ವೇಳೆ ಕಲ್ಲಂಗಡಿ ಸೇವಿಸಿರುವುದೇ ಅಪಘಾತಕ್ಕೆ ಕಾರಣವೇ ಎನ್ನುವುದರ ಬಗ್ಗೆ ಇನ್ನು ಸ್ಪಷ್ಟತೆ ಲಭ್ಯವಾಗಿಲ್ಲ.