ಸಾರಾಂಶ
ಒಟ್ಟಾವಾ/ನ್ಯೂಯಾರ್ಕ್ ; ಭಾರತ ಹಾಗೂ ಕೆನಡಾ ನಡುವಣ ರಾಜತಾಂತ್ರಿಕ ಸಂಬಂಧ ಹಳಸುವಂತೆ ಮಾಡಿದ್ದ ಖಲಿಸ್ತಾನಿ ಪ್ರತ್ಯೇಕತಾವಾದಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ ಸಂಬಂಧ ಮೂವರು ಭಾರತೀಯರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ತನಿಖೆ ಇನ್ನೂ ಮುಗಿದಿಲ್ಲ, ನಿಜ್ಜರ್ ಹತ್ಯೆಯಲ್ಲಿ ಪಾತ್ರ ವಹಿಸಿದ ‘ಇನ್ನಷ್ಟು’ ಮಂದಿಯನ್ನು ಬಂಧಿಸಲಾಗುತ್ತದೆ. ಪ್ರತಿಯೊಬ್ಬರನ್ನೂ ಸೆರೆ ಹಿಡಿಯಲಾಗುತ್ತದೆ ಎಂದು ಹೇಳಿದ್ದಾರೆ.
ನಿಜ್ಜರ್ ಹತ್ಯೆ ಸಂಬಂಧ ಒಬ್ಬನ ಬಂಧನವಾಗಿದೆ ಎಂದು ಶುಕ್ರವಾರ ವರದಿಗಳು ಬಂದಿದ್ದವು. ಇದೀಗ ಒಬ್ಬ ಅಲ್ಲ, ಮೂವರನ್ನು ಬಂಧಿಸಿರುವ ವಿಷಯವನ್ನು ಕೆನಡಾ ತಿಳಿಸಿದೆ. ಕರಣ್ ಬ್ರಾರ್ (22), ಕಮಲ್‌ಪ್ರೀತ್ ಸಿಂಗ್ (22), ಕರಣ್‌ಪ್ರೀತ್ ಸಿಂಗ್ (28) ಬಂಧಿತರು.
ಈ ಎಲ್ಲರೂ ನಾಲ್ಕೈದು ವರ್ಷಗಳ ಹಿಂದೆ ವಿದ್ಯಾರ್ಥಿಗಳಾಗಿ ಕೆನಡಾಕ್ಕೆ ಬಂದಿದ್ದರು. ಭಾರತ ಸರ್ಕಾರದ ಅಣತಿಯಂತೆ ಕೆಲಸ ಮಾಡುತ್ತಿದ್ದರು. ನಿಜ್ಜರ್ ಹತ್ಯೆಗೆ ಭಾರತ ಸರ್ಕಾರದಿಂದ ನಿಯೋಜಿಸಲ್ಪಟ್ಟ ಹಿಟ್ ಸ್ಕ್ವಾಡ್‌ನಲ್ಲಿ ಈ ಮೂವರೂ ಇದ್ದರು ಎಂದು ಕೆನಡಾದ ಮಾಧ್ಯಮಗಳು ವರದಿ ಮಾಡಿವೆ. ಆದರೆ, ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2023ರ ಜೂ.18ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ನಿಜ್ಜರ್ (45) ಹತ್ಯೆಯಾಗಿತ್ತು. ಗುರುದ್ವಾರದ ಹೊರಗೆ ಆತನನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ನಿಜ್ಜರ್ ಹತ್ಯೆಯ ಹಿಂದೆ ಭಾರತೀಯ ಏಜೆಂಟ್‌ಗಳ ಪಾತ್ರವಿದೆ ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆಪಾದಿಸಿದ್ದರು. ಅದನ್ನು ಭಾರತ ಅಲ್ಲಗಳೆದಿತ್ತು. ಆನಂತರ ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧ ಹಾಳಾಗಿತ್ತು.