ಕೇಂದ್ರ ಬಜೆಟ್‌ : ಕ್ಯಾನ್ಸರ್‌ ಔಷಧಿಗಳು ಮತ್ತಷ್ಟು ಅಗ್ಗ - 36 ಔಷಧಗಳ ಮೇಲಿನ ಆಮದು ಸುಂಕ ರದ್ದು

| N/A | Published : Feb 02 2025, 10:01 AM IST

Fake medicines

ಸಾರಾಂಶ

ಕ್ಯಾನ್ಸರ್‌ನಿಂದ ರೋಗಿಗಳ ಜೀವ ಉಳಿಸುವ 36 ಔಷಧಿಗಳ ಮೇಲಿನ ಆಮದು ಸುಂಕವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಇದರಿಂದ ಕ್ಯಾನ್ಸರ್‌ ರೋಗಿಗಳ ಜೀವ ಉಳಿಸುವ ಕಾರ್ಯ ಮತ್ತಷ್ಟು ಸುಗಮವಾದಂತಾಗಿದೆ.

 ನವದೆಹಲಿ  :   ಕ್ಯಾನ್ಸರ್‌ನಿಂದ ರೋಗಿಗಳ ಜೀವ ಉಳಿಸುವ 36 ಔಷಧಿಗಳ ಮೇಲಿನ ಆಮದು ಸುಂಕವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಇದರಿಂದ ಕ್ಯಾನ್ಸರ್‌ ರೋಗಿಗಳ ಜೀವ ಉಳಿಸುವ ಕಾರ್ಯ ಮತ್ತಷ್ಟು ಸುಗಮವಾದಂತಾಗಿದೆ.

ಅಪರೂಪದ ಕಾಯಿಲೆಗಳು ಮತ್ತು ತೀವ್ರ, ದೀರ್ಘ ಸಮಯ ಕಾಡುವ ರೋಗಗಳ ಔಷಧಿಗಳಿಗೆ ಮೂಲ ಆಮದು ಸುಂಕ (ಬಿಸಿಡಿ) ರದ್ದುಪಡಿಸಲಾಗಿದೆ. ಈ ಮೊದಲು ಕೇಂದ್ರ ಸರ್ಕಾರ ಟ್ರಸ್ಟುಝುಮಾಬ್‌ ಡೆರುಕ್ಸ್‌ಕೆಕ್ಯಾನ್‌, ಒಸಿಮೆರ್ಟಿನಿಬ್‌ ಮತ್ತು ಡುರ್ವಲಮಬ್‌ ಔಷಧಿಗಳಿಗೆ ವಿಧಿಸಲಾಗುತ್ತಿದ್ದ ಶೇ.10 ಆಮದು ಸುಂಕವನ್ನು ಸಂಪೂರ್ಣವಾಗಿ ತೆರವು ಮಾಡಿತ್ತು. ಈಗ ಮತ್ತೆ 36 ಔಷಧಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇಷ್ಟೇ ಅಲ್ಲದೆ 6 ಜೀವ ಉಳಿಸುವ ಔಷಧಿಗಳ ಮೇಲಿನ ತೆರಿಗೆಯನ್ನು ಶೇ.5 ರಷ್ಟು ಕಡಿತ ಮಾಡಲಾಗಿದೆ. ಇಷ್ಟೇ ಅಲ್ಲದೆ ಈ ಔಷಧಿಗಳನ್ನು ತಯಾರಿಸುವ ಸಗಟು ಉತ್ಪಾದಕರಿಗೆ ತೆರಿಗೆ ವಿನಾಯಿತಿ ಅನ್ವಯ ಆಗಲಿದೆ.

ಹಳೆ ತೆರಿಗೆ ಪದ್ಧತಿ ರದ್ದಾಗುತ್ತಾ? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಮಂಡಿಸಿದ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳುವ ಮಧ್ಯಮ ಆದಾಯ ವರ್ಗದ ಜನರಿಗೆ ಭರ್ಜರಿ ರಿಯಾಯ್ತಿ ಪ್ರಕಟಿಸಿರುವುದು, ಸರ್ಕಾರ ಹಳೆಯ ತೆರಿಗೆ ಪದ್ಧತಿಯನ್ನು ತೆಗೆದು ಹಾಕುವುದರ ಸುಳಿವಿರಬಹುದು ಎಂದು ವಿಶ್ಲೇಷಣೆ ಕೇಳಿಬಂದಿದೆ.

ಹಳೆ ತೆರಿಗೆ ಪದ್ಧತಿ ತೆಗೆದು ಹಾಕುವ ಬಗ್ಗೆ ಬಜೆಟ್‌ನಲ್ಲೂ ನಿರ್ಮಲಾ ಯಾವುದೇ ಪ್ರಸ್ತಾಪ ಮಾಡಲಿಲ್ಲ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯೂ ಅಂಥದ್ದೇನಾದರೂ ಪ್ರಸ್ತಾಪ ಇದ್ದರೆ ನಾನೇ ಹೇಳಿರುತ್ತಿದ್ದೆ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ.

ಆದರೆ ಬಜೆಟ್‌ನಲ್ಲಿ ಘೋಷಿಸಿರುವ ರಿಯಾಯ್ತಿಗಳೆಲ್ಲವೂ ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಮಾತ್ರವೇ ಎಂದು ಸ್ಪಷ್ಟಪಡಿಸಿದೆ. ಇನ್ನೊಂದೆಡೆ ಈಗಾಗಲೇ ಶೇ.75ರಷ್ಟು ತೆರಿಗೆ ಪಾವತಿದಾರರು ಹೊಸ ಪದ್ಧತಿ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಸರ್ಕಾರ ಹಳೆ ತೆರಿಗೆ ಪದ್ಧತಿ ರದ್ದು ಮಾಡಬೇಕಾದ ಪ್ರಮೇಯ ಉದ್ಭವಿಸುವುದು ಕಡಿಮೆ. ಜನ ಹೆಚ್ಚಿನ ರಿಯಾಯ್ತಿಗೆ ಮೊರೆ ಹೋದಂತೆ ಹಳೆ ತೆರಿಗೆ ಪದ್ಧತಿ ತಂತಾನೇ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂಬ ನಿಲುವಿನಲ್ಲಿ ಸರ್ಕಾರ ಇದೆ ಎನ್ನಲಾಗಿದೆ.

ಹಳೆ ತೆರಿಗೆ ಪದ್ಧತಿ ಹೇಗಿತ್ತು?

ಇದು ಮನೆ ಬಾಡಿಗೆ ಭತ್ಯೆ, ಜೀವ ವಿಮಾ ಪ್ರೀಮಿಯಂ, ಪಿಪಿಎಫ್‌ನಲ್ಲಿ ಹೂಡಿಕೆ, ವೈದ್ಯಕೀಯ ವಿಮಾ ಪಾಲಿಸಿ ಮೊದಲಾದವುಗಳ ಮೇಲಿನ ವೆಚ್ಚವನ್ನು ತೋರಿಸಿ ಅಷ್ಟು ಹಣವನ್ನು ತಮ್ಮ ತೆರಿಗೆ ಪಾವತಿಯಲ್ಲಿ ರಿಯಾಯ್ತಿ ಪಡೆಯಲು ತೆರಿಗೆ ಪಾವತಿದಾರರಿಗೆ ಅವಕಾಶ ಕಲ್ಪಿಸುತ್ತಿತ್ತು. ಈ ಪದ್ಧತಿ ಆಯ್ಕೆ ಮಾಡಿಕೊಂಡವರ ತೆರಿಗೆ ಆದಾಯವನ್ನು ಅವರ ವೆಚ್ಚವನ್ನು ಕಡಿತ ಮಾಡಿದ ಬಳಿಕ ನಿರ್ಧರಿಸಲಾಗುತ್ತಿತ್ತು.

ಹೀಗೆ ಸಿಗುವ ತೆರಿಗೆ ಆದಾಯಕ್ಕೆ ತೆರಿಗೆ ನಿಗದಿಗೆ ಹಲವು ಸ್ತರಗಳಿದ್ದವು. 2.5 ಲಕ್ಷ ರು.ವರೆಗೆ ಶೂನ್ಯ ತೆರಿಗೆ; 2.5 -3 ಲಕ್ಷ ರು.ಗೆ ಶೇ.5; 3-5 ಲಕ್ಷ ರು.ಗೆ ಶೇ.10; 5-10 ಲಕ್ಷ ರು.ಗೆ ಶೇ.20; 10 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿತ್ತು.

ಹೊಸ ತೆರಿಗೆ ಪದ್ಧತಿ ಹೇಗಿದೆ?

2020-21ರಲ್ಲಿ ಮೋದಿ ಸರ್ಕಾರ ಹೊಸ ತೆರಿಗೆ ಪದ್ಧತಿ ಜಾರಿಗೆ ತಂದಿತ್ತು. ಇದರಲ್ಲಿ ಎಲ್ಲಾ ರೀತಿಯ ರಿಯಾಯ್ತಿ ತೆಗೆದು ಹಾಕಲಾಗಿತ್ತು. ಆದರೆ ಇಂಥ ನೀತಿ ಜಾರಿಗೆ ತಂದ ನಂತರದ ವರ್ಷಗಳಲ್ಲೂ ಬಹುತೇಕ ತೆರಿಗೆದಾರರ ಹಳೆಯ ತೆರಿಗೆ ಪದ್ಧತಿಯಲ್ಲೇ ಮುಂದುವರೆದಿದ್ದರು. ಆದರೆ ಇದೀಗ ಸರ್ಕಾರ ಹೊಸ ಪದ್ಧತಿಯನ್ನು ಮೊದಲ ಆಯ್ಕೆಯನ್ನಾಗಿ ಇರಿಸಿದೆ. ಒಂದು ವೇಳೆ ಗ್ರಾಹಕರು ಬಯಸಿದರೆ, ಅವರು ನಿರ್ದಿಷ್ಟವಾಗಿ ಹಳೆಯ ಪದ್ಧತಿ ಆಯ್ಕೆ ಮಾಡಿಕೊಳ್ಳಬೇಕು.

2023-24ರಲ್ಲಿ ತೆರಿಗೆ ಪಾವತಿ ಮಾಡಿದವರ ಪೈಕಿ ಶೇ.72ರಷ್ಟು ಜನರು ಹೊಸ ಪದ್ಧತಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರ ಹೇಳಿತ್ತು. ಹೀಗಾಗಿ ಈ ಪದ್ಧತಿಯವರಿಗೆ ಇದೀಗ ಇನ್ನಷ್ಟು ಬಂಪರ್‌ ಕೊಡುಗೆ ಮೂಲಕ ಉಳಿದವರನ್ನೂ ಹೊಸ ಪದ್ಧತಿಗೆ ಆಹ್ವಾನಿಸುವ ಕೆಲಸವನ್ನು ಸರ್ಕಾರ ಮಾಡಿದೆ ಎನ್ನಲಾಗಿದೆ.

ಹೊಸ ಪದ್ಧತಿಯಲ್ಲಿ 4 ಲಕ್ಷದವರೆಗಿನ ಆದಾಯಕ್ಕೆ ಶೂನ್ಯ ತೆರಿಗೆ; 4-8 ಲಕ್ಷಕ್ಕೆ ಶೇ.5; 8-12 ಲಕ್ಷಕ್ಕೆ ಶೇ.10; 12-16 ಲಕ್ಷ ಶೇ.15; 16- 20 ಲಕ್ಷಕ್ಕೆ ಶೇ.20; 24 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ

ಕೃಷಿ ವಲಯಕ್ಕೆ 6 ಹೊಸ ಯೋಜನೆ

ಸಾಲ ಸೌಲಭ್ಯ ಹೆಚ್ಚಳ । ಗ್ರಾಮಗಳಲ್ಲೇ ಹೆಚ್ಚು ಉದ್ಯೋಗ ಸೃಷ್ಟಿಗೆ ಯೋಜನೆ

100 ಕೃಷಿ ಜಿಲ್ಲೆ ಅಭಿವೃದ್ಧಿ । ಹೊಸ ರಸಗೊಬ್ಬರ ಕಾರ್ಖಾನೆ ಆರಂಭ । ಮೀನುಗಾರಿಕೆ ಉತ್ಪಾದನೆ ಹೆಚ್ಚಳಕ್ಕೆ ಸ್ಕೀಂ

ತೊಗರಿ, ಉದ್ದು, ಮಸೂರ್‌ ದಾಲ್‌ ಬೆಳೆ ಹೆಚ್ಚಿಸಲು ಕ್ರಮ । ಹೆಚ್ಚಿನ ಉತ್ಪಾದಕತೆ ನೆರವಾಗುವ 100 ಬೀಜ ಅಭಿವೃದ್ಧಿ

ಗ್ರಾಮೀಣ ಮಹಿಳೆಯರು, ಯುವ ರೈತರು, ಗ್ರಾಮೀಣ ಯುವಕರು, ಬಡ, ಸಣ್ಣ ರೈತರು, ಭೂರಹಿತ ಕುಟುಂಬಕ್ಕೆ ನೆರವು

(ಇಂಟ್ರೋ)ಅಭಿವೃದ್ಧಿಯಲ್ಲಿ ಕೃಷಿಯನ್ನು ಮೊದಲ ಎಂಜಿನ್‌ ಎಂದು ಬಣ್ಣಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಕೃಷಿ ವಲಯಕ್ಕೆ 6 ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ ಮತ್ತು ರಿಯಾಯ್ತಿ ದರದ ಸಾಲದ ಮಿತಿಯನ್ನು 5 ಲಕ್ಷ ರು.ಗೆ ಏರಿಸಿದ್ದಾರೆ. ಜೊತೆಗೆ ಗ್ರಾಮೀಣ ಆರ್ಥಿಕತೆಗೆ ಚೇತರಿಕೆ ನೀಡುವ ಹಲವು ಕ್ರಮಗಳನ್ನು ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ. ಇದು ಒಟ್ಟಾರೆ ರೈತರ ಆರ್ಥಿಕಾಭಿವೃದ್ಧಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ವೃದ್ಧಿಸುವ ಗುರಿಯನ್ನು ಹೊಂದಿದೆ.

ರಿಯಾಯ್ತಿ ಬಡ್ಡಿ ಸಾಲದ ಮಿತಿ 5 ಲಕ್ಷ ರು. ಹೆಚ್ಚಳ

ರೈತಾಪಿ ಸಮುದಾಯಕ್ಕೆ ಕೃಷಿ ಹಂಗಾಮಿನಲ್ಲಿ ಅಗತ್ಯವಾಗಿರುವ ಸಾಲದ ಸೌಲಭ್ಯವನ್ನು ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೃಷಿ ಕಿಸಾನ್‌ ಕಾರ್ಡ್‌ ಹೊಂದಿರುವ ರೈತರು ಇದುವರೆಗೂ ವಾರ್ಷಿಕ ಶೇ.7ರಷ್ಟು ಬಡ್ಡಿ ದರದಲ್ಲಿ 3 ಲಕ್ಷ ರು.ವರೆಗೆ ಅಲ್ಪಾವಧಿ ಸಾಲ ಸೌಲಭ್ಯ ಪಡೆಯಬಹುದಾಗಿತ್ತು. ಈ ಪೈಕಿ ಶೇ.4ರಷ್ಟು ಬಡ್ಡಿ ರಿಯಾಯ್ತಿ ಸಿಗುತ್ತಿತ್ತು. ಅಂದರೆ ರೈತರು ಕೇವಲ ಶೇ.3ರಷ್ಟು ಬಡ್ಡಿ ಪಾವತಿ ಮಾಡಿದರೆ ಸಾಕಿತ್ತು. ಈ ಹಣ ಕೃಷಿ ಹಂಗಾಮಿನಲ್ಲಿ ರೈತರಿಗೆ ಅಗತ್ಯವಾಗಿದ್ದ ಹಣಕಾಸಿನ ಬೇಡಿಕೆಯನ್ನು ಪೂರೈಸುತ್ತಿತ್ತು. ಇದೀಗ ಆ ಯೋಜನೆಯಡಿ ಲಭ್ಯವಿದ್ದ ಸಾಲದ ಮಿತಿಯನ್ನು 3 ಲಕ್ಷ ರು.ನಿಂದ 5 ಲಕ್ಷ ರು.ಗೆ ಹೆಚ್ಚಿಸಲಾಗಿದೆ. ಇದು ರೈತರಿಗೆ ಅಗತ್ಯವಾಗಿದ್ದ ಹೆಚ್ಚಿನ ಹಣಕಾಸಿನ ಅಗತ್ಯವನ್ನು ಪೂರೈಸಲು ನೆರವಾಗಲಿದೆ. ಜೊತೆಗೆ ರೈತರು ಹೆಚ್ಚಿನ ಹಣಕ್ಕಾಗಿ ದುಬಾರಿ ಬಡ್ಡಿದ ಸಾಲಕ್ಕೆ ಮೊರೆ ಹೋಗುವುದು ನಿಲ್ಲಲಿದೆ.

ಧನ ಧಾನ್ಯ ಕೃಷಿ ಯೋಜನೆಯಡಿ100 ಕೃಷಿ ಜಿಲ್ಲೆಗಳ ಅಭಿವೃದ್ಧಿ

- ಉತ್ಪಾದಕತೆ ಹೆಚ್ಚಳ, ವೈವಿಧ್ಯಮಯ ಕೃಷಿ, ಸಾಲದ ಲಭ್ಯತೆ ಹೆಚ್ಚಳದ ಗುರಿ

- 100 ಜಿಲ್ಲೆಗಳ ಒಟ್ಟು 1.7 ಕೋಟಿ ರೈತರಿಗೆ ಯೋಜನೆಯಿಂದ ಲಾಭದ ನಿರೀಕ್ಷೆ

‘ಮಹತ್ವಾಕಾಂಕ್ಷೆ ಜಿಲ್ಲೆ’ ಯೋಜನೆಗೆ ಸಿಕ್ಕ ಯಶಸ್ಸಿನ ಬೆನ್ನಲ್ಲೇ ದೇಶವ್ಯಾಪಿ 100 ಕೃಷಿ ಜಿಲ್ಲೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೈಗೊಳ್ಳುವ ಈ ಯೋಜನೆಗೆ ‘ಪ್ರಧಾನಿಗಳ ಧನ- ಧಾನ್ಯ ಕೃಷಿ ಯೋಜನೆ’ ಎಂದು ಹೆಸರಿಡಲಾಗುವುದು.

ಉತ್ಪಾದಕತೆ ಕಡಿಮೆ ಇರುವ, ಬೆಳೆ ಸಾಂದ್ರತೆ ಕಡಿಮೆ ಮತ್ತು ಕೃಷಿ ಸಾಲ ವಿತರಣೆ ಕಡಿಮೆ ಇರುವ ದೇಶದ 100 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು. ಹಾಲಿ ಇರುವ ಕೆಲವು ಕೃಷಿ ಯೋಜನೆಗಳನ್ನು ಒಗ್ಗೂಡಿಸಿ ಅದಕ್ಕೆ ಇನ್ನೊಂದಿಷ್ಟು ವಿಶೇಷ ಅಂಶಗಳನ್ನು ಸೇರಿಸಿ ಹೊಸ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಯೋಜನೆ ಒಟ್ಟು 1.7 ಕೋಟಿ ರೈತರಿಗೆ ಲಾಭ ತರಲಿದೆ ಎಂದು ಸರ್ಕಾರ ಅಂದಾಜಿಸಿದೆ.

ಈ ಯೋಜನೆಯ ಉದ್ದೇಶ

1. ಕೃಷಿ ಉತ್ಪಾದಕತೆ ಹೆಚ್ಚಿಸುವುದು.

2. ವೈವಿಧ್ಯಮಯ ಕೃಷಿ ಬೆಳೆಯುವುದು ಮತ್ತು ಸುಸ್ಥಿರ ಕೃಷಿ ಚಟುವಟಿಕೆ ಅಳವಡಿಕೆ

3. ಪಂಚಾಯತ್‌ ಮತ್ತು ವಲಯ ಮಟ್ಟದಲ್ಲೇ ಕುಯ್ಲೋತ್ತರ ಸಂಗ್ರಹ ವ್ಯವಸ್ಥೆ

4. ನೀರಾವರಿ ಸೌಕರ್ಯ ಹೆಚ್ಚಿಸುವುದು

5. ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲ ಲಭ್ಯತೆ ಹೆಚ್ಚಿಸುವುದು.

ಗ್ರಾಮೀಣ ಜನರಿಗೆ ಗ್ರಾಮಗಳಲ್ಲೇ ಉದ್ಯೋಗ ಒದಗಿಸಲು ಹೊಸ ಸ್ಕೀಂ

- ಕೌಶಲ್ಯ ವೃದ್ಧಿ, ಬಂಡವಾಳ ಹೂಡಿಕೆ, ತಂತ್ರಜ್ಞಾನ ಬಳಸಿ ಉದ್ಯೋಗ ಸೃಷ್ಟಿ

- ಗ್ರಾಮಗಳಲ್ಲೇ ಉದ್ಯೋಗ ಸೃಷ್ಟಿಸಿ ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ

- ಮಹಿಳೆಯರು, ಯುವ, ಸಣ್ಣ ರೈತರು, ಭೂರಹಿತ ಕಾರ್ಮಿಕರಿಗೆ ಯೋಜನೆ

ಗ್ರಾಮಗಳ ಸಂಪತ್ತು ವೃದ್ಧಿ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ಸರ್ಕಾರ ನಿರ್ಧರಿಸಿದೆ. ಈ ಯೋಜನೆಯಡಿ ಗ್ರಾಮೀಣ ಭಾಗದ ಜನರ ಕೌಶಲ್ಯ ವೃದ್ಧಿ, ಬಂಡವಾಳ ಹೂಡಿಕೆ, ತಂತ್ರಜ್ಞಾನ ಬಳಕೆ ಉದ್ಯೋಗ ಲಭ್ಯತೆ ಹೆಚ್ಚಿಸುವ ಮತ್ತು ಗ್ರಾಮೀಣ ಆರ್ಥಿಕತೆಗೆ ಚೈತನ್ಯ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಈ ವಿಶೇಷ ಯೋಜನೆಯ ಮೂಲಕ ಗ್ರಾಮಗಳ ಮಟ್ಟದಲ್ಲಿ ವಿಪುಲ ಉದ್ಯೋಗದ ಅವಕಾಶ ಕಲ್ಪಿಸುವುದು ಮತ್ತು ವಲಸೆ ಎನ್ನುವುದು ಒಂದು ಆಯ್ಕೆಯೇ ಹೊರತೂ ಅನಿವಾರ್ಯವಲ್ಲ ಎಂಬುದನ್ನು ಖಚಿತಪಡಿಸುವುದಾಗಿ ಎಂದು ಸರ್ಕಾರ ಹೇಳಿದೆ.

ಯಾರಿಗೆ ಲಾಭ?:

ಗ್ರಾಮೀಣ ಭಾಗದ ಮಹಿಳೆಯರು, ಯುವ ರೈತರು, ಗ್ರಾಮೀಣ ಯುವಕರು, ಬಡ ಮತ್ತು ಸಣ್ಣ ರೈತರು ಮತ್ತು ಭೂರಹಿತ ಕುಟುಂಬಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆ ರೂಪಿಸಿದೆ.

ಉದ್ಯೋಗ ಸೃಷ್ಟಿಯ ಕ್ರಮಗಳ ಭಾಗವಾಗಿ ಜಾಗತಿಕವಾಗಿ ಮತ್ತು ಸ್ಥಳೀಯವಾಗಿ ಲಭ್ಯವಿರುವ ಆಚರಣೆಗಳು ಗ್ರಾಮಗಳಿಗೆ ತಲುಪುವಂತೆ ಮಾಡಲಾಗುವುದು, ಇದಕ್ಕೆ ಅಗತ್ಯ ತಂತ್ರಜ್ಞಾನ ಮತ್ತು ಬಂಡವಾಳದ ಲಭ್ಯತೆಯನ್ನು ಬಹುಸ್ತರದ ಬ್ಯಾಂಕ್‌ಗಳಿಂದ ಲಭ್ಯವಾಗುವಂತೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ 100 ಕೃಷಿ ಜಿಲ್ಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸರ್ಕಾರ ಹೇಳಿದೆ.

ದ್ವಿದಳ ಧಾನ್ಯದಲ್ಲಿ ಆತ್ಮನಿರ್ಭರತೆಗೆ ಯೋಜನೆ

- ತೊಗರೆ, ಉದ್ದು, ಮಸೂರ್‌ ದಾಲ್‌ ಬೆಳೆಗಳಿಗೆ ಆದ್ಯತೆ

- ಬೆಳೆದಷ್ಟೂ ದ್ವಿದಳ ಧಾನ್ಯಗಳ ಖರೀದಿಯ ಭರವಸೆ

ದೇಶೀಯ ದ್ವಿದಳ ಧಾನ ಅವಶ್ಯತೆಯನ್ನು ಪೂರ್ಣ ಪ್ರಮಾಣದಲ್ಲಿ ಸ್ಥಳೀಯವಾಗಿಯೇ ಪೂರೈಸುವ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜೊತೆಗೆ ಖಾದ್ಯ ತೈಲ ಎಣ್ಣೆ ಬೀಜಗಳ ಉತ್ಪಾದನೆಯಲ್ಲಿ ಆತ್ಮನಿರ್ಭರತೆಯ ಬೃಹತ್‌ ಗುರಿಯನ್ನು ಸರ್ಕಾರ ರೂಪಿಸಿದೆ.

ಮುಂದಿನ 6 ವರ್ಷಗಳಲ್ಲಿ ದ್ವಿದಳ ವಲಯದಲ್ಲಿ ಪೂರ್ಣ ಆತ್ಮನಿರ್ಭರತೆ ಸಾಧಿಸಲು ‘ದ್ವಿದಳ ಧಾನ್ಯ ಆತ್ಮನಿರ್ಭರತೆ ಯೋಜನೆ’ ಜಾರಿಗೆ ಸರ್ಕಾರ ಮುಂದಾಗಿದೆ. ಇದರಲ್ಲಿ ತೊಗರಿ, ಉದ್ದಿನ ಬೇಳೆ ಮತ್ತು ಮಸೂರ್‌ ದಾಲ್‌ ಬೆಳೆಗಳಿಗೆ ವಿಶೇಷ ಆಧ್ಯತೆ ನೀಡಲಾಗುವುದು.

ರೈತರು ಎಷ್ಟೇ ಪ್ರಮಾಣದಲ್ಲಿ ಈ ಬೆಳೆಗಳನ್ನು ಬೆಳೆದರೂ ಅದನ್ನು ಕೇಂದ್ರೀಯ ಆಹಾರ ಖರೀದಿ ಸಂಸ್ಥೆಗಳಾದ ನಾಫೆಡ್‌, ಎನ್‌ಸಿಸಿಎಫ್‌ ಮೂಲಕ ಖರೀದಿಯ ಭರವಸೆಯನ್ನು ಸರ್ಕಾರ ನೀಡಲಿದೆ. ಆದರೆ ಇದಕ್ಕಾಗಿ ಈ ಸಂಸ್ಥೆಗಳ ಜೊತೆಗೆ ರೈತರು ಮೊದಲೇ ನೋಂದಣಿ ಮಾಡಿಕೊಂಡು ಖರೀದಿ ಒಪ್ಪಂದ ಮಾಡಿಕೊಳ್ಳಬೇಕು ಎಂದು ಸರ್ಕಾರ ಹೇಳಿದೆ.

ಕೃಷಿ ಮತ್ತು ಹಣ್ಣುಗಳಿಗೆ ಸಮಗ್ರ ಯೋಜನೆ

ಜನರ ಖರೀದಿ ಶಕ್ತಿ ಹೆಚ್ಚಳ, ಆರೋಗ್ಯದ ಕುರಿತ ಕಾಳಜಿ ಹೆಚ್ಚಳದಿಂದಾಗಿ ತರಕಾರಿ ಮತ್ತು ಹಣ್ಣುಗಳ ಬಳಕೆ ಹೆಚ್ಚಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇವುಗಳ ಲಭ್ಯತೆ ಖಚಿತಪಡಿಸುವ ನಿಟ್ಟಿನಲ್ಲಿ ಉತ್ಪಾದನೆ ಹೆಚ್ಚಳ, ಸುಗಮ ಪೂರೈಕೆ, ಸಂಸ್ಕೃರಣೆ, ಬೆಂಬಲ ಬೆಲೆ ಮತ್ತಿತರೆ ವಿಷಯಗಳಿಗೆ ಸಂಬಂಧಿಸಿದಂತೆ ಸಮಗ್ರ ಯೋಜನೆ ಜಾರಿಗೆ ಸರ್ಕಾರ ನಿರ್ಧರಿಸಿದೆ.

ಈ ಯೋಜನೆ ಜಾರಿಯಲ್ಲಿ ರಾಜ್ಯ ಸರ್ಕಾರಗಳು, ಕೃಷಿ ಉತ್ಪಾದಕ ಸಂಘಟನೆಗಳು, ಸಹಕಾರ ಸಂಘಗಳ ನೆರವು ಪಡೆಯಲಾಗುವುದು ಎಂದು ಸರ್ಕಾರ ಹೇಳಿದೆ.

ಬಿಹಾರದಲ್ಲಿ ಮಖ್ನಾ ಮಂಡಳಿ ರಚನೆ

- ಸೂಪರ್‌ಫುಡ್‌ಗೆ ಮತ್ತಷ್ಟು ಮನ್ನಣೆಗೆ ನಿರ್ಧಾರ

ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿರುವ, ಭಾರೀ ಪೌಷ್ಠಿಕಾಂಶ ಒಳಗೊಂಡಿದೆ ಎಂದೇ ಹೇಳಲಾಗುವ ಮಖ್ನಾ (ತಾವರೆ ಬೀಜ) ಬಳಕೆಯನ್ನು ಇನ್ನಷ್ಟು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಇದಕ್ಕಾಗಿ ಅತಿ ಹೆಚ್ಚಿನ ಮಖ್ನಾ ಉತ್ಪಾದಿಸುವ ಬಿಹಾರದಲ್ಲಿ ಮಖ್ನಾ ಮಂಡಳಿ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮಂಡಳಿ ಮೂಲಕ ಮಖ್ನಾ ಉತ್ಪಾದನೆ ಹೆಚ್ಚಿಸುವ, ಸಂಸ್ಕರಣಾ ಪ್ರಕ್ರಿಯೆ ವಿಸ್ತರಣೆ, ಮಾರುಕಟ್ಟೆ ವಿಸ್ತರಣೆ, ಮಖ್ನಾದ ಮೌಲ್ಯವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.

ಈ ಮಂಡಳಿ ಮೂಲಕ ಮಖ್ನಾ ಬೆಳೆಯುವವರಿಗೆ ಅಗತ್ಯ ತರಬೇತಿ ನೀಡಲಾಗುವುದು ಮತ್ತು ಸರ್ಕಾರದ ಎಲ್ಲಾ ಸೌಲಭ್ಯಗಳು ಈ ರೈತರಿಗೆ ಸಿಗುವಂತೆ ನೋಡಿಕೊಳ್ಳಲಾಗುವುದು.

ಅಧಿಕ ಉತ್ಪಾದನೆಯ ಕೃಷಿ ಬೀಜಗಳ ಅಭಿವೃದ್ಧಿ

ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚಿನ ಉತ್ಪಾದನೆಗೆ ಅನುವು ಮಾಡಿಕೊಡುವ ಕೃಷಿ ಬೀಜಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆ ಮೂಲಕ ಸಂಶೋಧನಾ ವ್ಯವಸ್ಥೆ ಬಲಪಡಿಸುವುದು, ಹೆಚ್ಚಿನ ಇಳುವರಿ ನೀಡುವ, ಕೀಟಗಳ ಕಾಟದಿಂದ ರಕ್ಷಣೆ ನೀಡುವ, ಹವಾಮಾನ ವೈಪರೀತ್ಯ ತಡೆಯುವ 100 ಕೃಷಿ ಬೀಜಗಳ ಅಭಿವೃದ್ಧಿಯ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.

ಮೀನುಗಾರಿಕೆ ವಲಯಕ್ಕೆ ಮತ್ತಷ್ಟು ನೆರವು

ಅಂಡಮಾನ್‌, ನಿಕೋಬಾರ್‌, ಲಕ್ಷದ್ವೀಪಕ್ಕೆ ಆದ್ಯತೆ

ಮೀನು ಉತ್ಪಾದನೆ ಮತ್ತು ಜಲಚರ ಸಾಕಣೆಯಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಭಾರತದ ಸಮುದ್ರ ಉತ್ಪನ್ನಗಳ ರಪ್ತು ಪ್ರಮಾಣ ವಾರ್ಷಿಕ 60000 ಕೋಟಿ ರು.ನಷ್ಟಿದೆ. ಸಮುದ್ರ ವಲಯದಲ್ಲಿ ಇನ್ನೂ ಲಭ್ಯವಿರುವ ಉದ್ಯಮ ಮತ್ತು ರಫ್ತು ಅವಕಾಶಗಳ ಬಾಗಿಲು ತೆರೆಯುವ ನಿಟ್ಟಿನಲ್ಲಿ, ವಿಶೇಷ ಆರ್ಥಿಕ ವಲಯ ಮತ್ತು ಆಳ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕಾ ಚಟುವಟಿಕೆ ನಡೆಸಲು ಅನುವಾಗುವಂತೆ ಹೊಸ ನೀತಿ ರೂಪಿಸಲಾಗುವುದು. ಈ ವಿಷಯದಲ್ಲಿ ಅಂಡಮಾನ್‌ ಮತ್ತು ನಿಕೋಬಾರ್‌, ಲಕ್ಷದ್ವೀಪಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು.

ಹತ್ತಿ ಉತ್ಪಾದನೆ ಹೆಚ್ಚಳಕ್ಕೆ 5 ವರ್ಷಗಳ ವಿಶೇಷ ಯೋಜನೆ

- ರೈತರಿಗೆ ಅಗತ್ಯ ವೈಜ್ಞಾನಿಕ, ತಾಂತ್ರಿಕ ನೆರವು

- ಗುಣಮಟ್ಟದ ಹತ್ತಿ ಲಭ್ಯತೆ ಖಚಿತಪಡಿಸುವುದು, ರೈತರ ಆದಾಯ ಹೆಚ್ಚಳದ ಗುರಿ

ದೇಶದ ಲಕ್ಷಾಂತರ ಹತ್ತಿ ಬೆಳೆಗಾರರ ಆದಾಯ ಹೆಚ್ಚಳದ ನಿಟ್ಟಿನಲ್ಲಿ 5 ವರ್ಷಗಳ ವಿಶೇಷ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಯೋಜನೆಯಡಿ ಮುಂದಿನ 5 ವರ್ಷಗಳ ಕಾಲ ಹತ್ತಿ ಉತ್ಪಾದನೆ ಹೆಚ್ಚಳಕ್ಕೆ ರೈತರಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ನೆರವು ನೀಡಲಾಗುವುದು. ಉತ್ಪಾದನೆ ಹೆಚ್ಚಳದಿಂದ ರೈತರ ಆದಾಯ ವೃದ್ಧಿಯಾಗುವುದರ ಜೊತೆಗೆ ಉದ್ಯಮಕ್ಕೆ ಅಗತ್ಯವಾದ ಗುಣಮಟ್ಟದ ಹತ್ತಿ ಲಭ್ಯತೆಯೂ ಖಚಿತವಾಗಲಿದೆ ಎಂದು ಸರ್ಕಾರ ಹೇಳಿದೆ.

ಅಸ್ಸಾಂನಲ್ಲಿ ಯೂರಿಯಾ ಗೊಬ್ಬರ ಉತ್ಪಾದನಾ ಘಟಕ

- ಆತ್ಮನಿರ್ಭರತೆಯಲ್ಲಿ ಮತ್ತೊಂದು ಹೆಜ್ಜೆ ಮುಂದು

ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಯೂರಿಯಾ ರಸಗೊಬ್ಬರ ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಸಾಧಿಸಲು ಇನ್ನೊಂದು ಹೆಜ್ಜೆ ಮುಂದಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿ ಈ ಸಂಬಂಧ ಮೂರು ಉತ್ಪಾದನಾ ಘಟಕಗಳನ್ನು ಆರಂಭಿಸಿದ್ದ ಕೇಂದ್ರ ಸರ್ಕಾರ ಇದೀಗ ಅಸ್ಸಾಂನಲ್ಲಿ ಮತ್ತೊಂದು ಘಟಕ ಆರಂಭಿಸಲು ನಿರ್ಧರಿಸಿದೆ. ನಮ್ರುಪ್‌ನಲ್ಲಿ ಆರಂಭಿಸಲು ಉದ್ದೇಶಿಸಿರುವ ಈ ಘಟಕ ವಾರ್ಷಿಕ 12.7 ಲಕ್ಷ ಮೆಟ್ರಿಕ್‌ ಟನ್‌ಗಳಷ್ಟು ಯೂರಿಯಾ ಉತ್ಪಾದನೆ ಸಾಮರ್ಥ್ಯ ಹೊಂದಿರಲಿದೆ.

ಜನಸಾಮಾನ್ಯರ ಅಭಿವೃದ್ಧಿಯ ಆಯವ್ಯಯ

ಅಮೆರಿಕದ ಸುಂಕ ಬೆದರಿಕೆಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ಉತ್ತೇಜಿಸಲ್ಪಟ್ಟ ಜಾಗತಿಕ ಅನಿಶ್ಚಿತತೆಗಳು ಹೊಸ ಸವಾಲುಗಳನ್ನು ಎದುರಿಸಲು ಮತ್ತು ಭಾರತದ ಆರ್ಥಿಕ ಬೆಳವಣಿಗೆ ಹಣಕಾಸಿನ ವರ್ಷ 2024-25 ರಲ್ಲಿ 6.4% ಇಳಿಕೆಯಾಗಿದ್ದು, ಬೆಳವಣಿಗೆಯ ಗತಿಯನ್ನು ಹೆಚ್ಚಿಸಲು ಹಾಗೂ ಜಾಗತಿಕ ಅನಿಶ್ಚಿತತೆಯನ್ನು ಸರಿಯಾಗಿ ಎದುರಿಸಲು ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಕೇಂದ್ರ ಆಯವ್ಯಯ 2025- 26, ಹಣಕಾಸಿನ ಬಲವರ್ಧನೆ, ಮೂಲಸೌಕರ್ಯದಲ್ಲಿ ಹೂಡಿಕೆ ಮತ್ತು ಸಾಮಾಜಿಕ ಕಲ್ಯಾಣ ವರ್ಗಗಳ ಮೇಲೆ ಕೇಂದ್ರೀಕರಿಸಿ ಭಾರತದ ಆರ್ಥಿಕ ಬಲವರ್ಧನೆಗೆ ಮಾರ್ಗಸೂಚಿಯನ್ನು ಕೊಟ್ಟಿದೆ.

₹50.65 ಟ್ರಿಲಿಯನ್‌ ಆಯವ್ಯಯ:

2025-26ರ ಕೇಂದ್ರ ಬಜೆಟನ್ನು ₹50.65 ಲಕ್ಷ ಕೋಟಿಗೆ ಮಂಡಿಸಲಾಗಿದೆ, ಇದು 24-24   -ಪರಿಷ್ಕೃತ ಅಂದಾಜಿನ ₹47.16 ಲಕ್ಷ ಕೋಟಿಗಿಂತ ಹೆಚ್ಚಾಗಿದೆ. ಹಣಕಾಸಿನ ಕೊರತೆಯು ಹಿಂದಿನ ವರ್ಷದ ೪.೮% ರಿಂದ ಜಿಡಿಪಿಯ 4.4% ಕ್ಕೆ ಇಳಿಯುವ ನಿರೀಕ್ಷೆಯಿದೆ, ಇದು ಹಣಕಾಸಿನ ಬಲವರ್ಧನೆಗೆ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಮೂಲಸೌಕರ್ಯ ಅಭಿವೃದ್ಧಿಗೆ ನಿರ್ಣಾಯಕವಾದ ಬಂಡವಾಳ ವೆಚ್ಚವನ್ನು (ಕ್ಯಾಪೆಕ್ಸ್) 2025-26ಕ್ಕೆ ₹11.21ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ, ಇದು 2024 - 25 ರ ಪರಿಷ್ಕೃತ ಅಂದಾಜಿನ ₹10.18 ಲಕ್ಷ ಕೋಟಿಯಿಂದ 3 . 7 % ಹೆಚ್ಚಳವಾಗಿದೆ. ಇದು 2024 -25ರ  ₹11 ಲಕ್ಷ ಕೋಟಿಗಿಂತ ಹೆಚ್ಚಿನ ಮೂಲ ಅಂದಾಜಿನಿಂದ ಸ್ವಲ್ಪ ಕಡಿಮೆಯಾಗಿದೆ.

ಮಧ್ಯಮ ವರ್ಗದ ಖರೀದಿ ಸಾಮರ್ಥ್ಯದಲ್ಲಿ ಹೆಚ್ಚಳ:₹10.4 ಕೋಟಿ ಆದಾಯ ತೆರಿಗೆ ಪಾವತಿದಾರರಲ್ಲಿ ಖರ್ಚು ಮಾಡ ಬಹುದಾದ ಆದಾಯವನ್ನು ಹೆಚ್ಚಿಸುವ ಸಲುವಾಗಿ ಸರ್ಕಾರವು ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ದರಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಮಧ್ಯಮ ವರ್ಗದ ಬಳಕೆಯನ್ನು ಹೆಚ್ಚಿಸಲು ಬಜೆಟ್‌ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಗಮನಾರ್ಹ ಕಡಿತಗಳನ್ನುನೀಡಿದೆ.2025-26ರ ಬಜೆಟ್‌ ಪ್ರಕಾರ, ವರ್ಷಕ್ಕೆ ₹12 ಲಕ್ಷದವರೆಗೆ ಗಳಿಸುವ ವ್ಯಕ್ತಿಗಳು ಯಾವುದೇ ಆದಾಯ ತೆರಿಗೆಯನ್ನು ಪಾವತಿಸುವುದಿಲ್ಲ, ಆದರೆ ಸಂಬಳ ಪಡೆಯುವವರು ₹12.75 ಲಕ್ಷದವರೆಗೆ ಯಾವುದೇ ತೆರಿಗೆಯನ್ನು ಪಾವತಿಸುವುದಿಲ್ಲ, ಇದು ಮಧ್ಯಮ ವರ್ಗದವರ ಖರೀದಿ ಶಕ್ತಿಯಲ್ಲಿ ಗಮನಾರ್ಹ ಹೆಚ್ಚಳವನ್ನು ಒದಗಿಸುತ್ತದೆ.

ಸರ್ಕಾರವು 6ರ ಬದಲಿಗೆ 7 ತೆರಿಗೆ ಸ್ಲ್ಯಾಬ್‌ಗಳನ್ನು ಘೋಷಿಸಿದೆ, ಇದು ಮಧ್ಯಮ ವರ್ಗಕ್ಕೆ ₹1 ಲಕ್ಷ ಕೋಟಿ ನೇರ ತೆರಿಗೆ ಆದಾಯದ ಪ್ರಯೋಜನವನ್ನು ನೀಡುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹಾಗೂ ವೈಯಕ್ತಿಕವಾಗಿ ಹೇಳುವುದಾದರೆ, ₹12 ಲಕ್ಷ ಗಳಿಸುತ್ತಿದ್ದರೆ ₹80,000 ಮತ್ತು ₹15 ಲಕ್ಷ ಗಳಿಸುತ್ತಿದ್ದರೆ ₹1 ಲಕ್ಷ ಉಳಿಸುತ್ತದೆ.

ಕೃಷಿ ಅಭಿವೃದ್ಧಿ:

ಆಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಯಶಸ್ಸಿನಿಂದ ಪ್ರೇರಿತರಾಗಿ, ಸರ್ಕಾರವು ರಾಜ್ಯಗಳ ಸಹಭಾಗಿತ್ವದಲ್ಲಿ ''ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ''ಯನ್ನು ಕೈಗೊಳ್ಳಲಿದೆ. ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ವಿಶೇಷ ಕ್ರಮಗಳ ಒಮ್ಮುಖದ ಮೂಲಕ, ಈ ಕಾರ್ಯಕ್ರಮವು ಕಡಿಮೆ ಉತ್ಪಾದಕತೆ, ಮಧ್ಯಮ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳುತ್ತದೆ. ಇದು (1) ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, (2) ಬೆಳೆ ವೈವಿಧ್ಯೀಕರಣ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು, (3) ಪಂಚಾಯತ್‌ ಮತ್ತು ಬ್ಲಾಕ್‌ ಮಟ್ಟದಲ್ಲಿ ಕೊಯ್ಲು ನಂತರದ ಸಂಗ್ರಹಣೆಯನ್ನು ಹೆಚ್ಚಿಸುವುದು, (4) ನೀರಾವರಿ ಸೌಲಭ್ಯಗಳನ್ನು ಸುಧಾರಿಸುವುದು ಮತ್ತು (5) ದೀರ್ಘಾವಧಿಯ ಮತ್ತು ಅಲ್ಪಾವಧಿಯ ಸಾಲದ ಲಭ್ಯತೆಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು 1.7 ಕೋಟಿ ರೈತರಿಗೆ ಸಹಾಯ ಮಾಡುವ ಸಾಧ್ಯತೆಯಿದೆ.

ರಾಜ್ಯಗಳ ಸಹಭಾಗಿತ್ವದಲ್ಲಿ ಸಮಗ್ರ ಬಹು-ವಲಯ ‘ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿ ಸ್ಥಾಪಕತ್ವ’ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಇದು ಕೌಶಲ್ಯ, ಹೂಡಿಕೆ, ತಂತ್ರಜ್ಞಾನ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ಮೂಲಕ ಕೃಷಿಯಲ್ಲಿನ ಕಡಿಮೆ ಉದ್ಯೋಗವನ್ನು ಪರಿಹರಿಸುತ್ತದೆ. ವಲಸೆ ಒಂದು ಆಯ್ಕೆಯಾಗಿದೆ, ಆದರೆ ಅವಶ್ಯಕತೆಯಲ್ಲದ ರೀತಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುವುದು ಗುರಿಯಾಗಿದೆ. ಈ ಕಾರ್ಯಕ್ರಮವು ಗ್ರಾಮೀಣ ಮಹಿಳೆಯರು, ಯುವ ರೈತರು, ಗ್ರಾಮೀಣ ಯುವಕರು, ಅಲ್ಪ ಮತ್ತು ಸಣ್ಣ ರೈತರು ಮತ್ತು ಭೂಹೀನ ಕುಟುಂಬಗಳ ಮೇಲೆ ಕೇಂದ್ರೀಕರಿಸುತ್ತದೆ.

ಎಂಎಸ್‌ಎಂಇಗಳಿಗೆ ಉತ್ತೇಜನ:

ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ಹಾಗೂ ಕೈಗಾರಿಕಾ ವಲಯ ಹಾಗಾಗಿ ಕ್ರಮಗಳನ್ನು ಹಾಗೂ ರಫ್ತನ್ನು ಹೆಚ್ಚಿಸಲು ಎಂಎಸ್ಎಮ್ಇಗಳಿಗೆ ಆದ್ಯತೆಯನ್ನು ನೀಡಲಾಗಿದೆ. ಹಾಗಾಗಿ 5.7 ಕೋಟಿ ಎಂಎಸ್ಎಮ್ಇಗಳಿಗೆ ಉತ್ತೇಜನ ನೀಡುವ ಸಲುವಾಗಿ ಕ್ರಮಗಳನ್ನು ಈ ಆಯವ್ಯಯ ಘೋಷಿಸಿದೆ.

ಎಂಎಸ್‌ಎಂಇಗಳು ಹೆಚ್ಚಿನ ಪ್ರಮಾಣದ ದಕ್ಷತೆ, ತಾಂತ್ರಿಕ ನವೀಕರಣ ಮತ್ತು ಬಂಡವಾಳಕ್ಕೆ ಉತ್ತಮ ಪ್ರವೇಶವನ್ನು ಸಾಧಿಸಲು ಸಹಾಯ ಮಾಡಲು, ಹೂಡಿಕೆ ಮಿತಿಗಳನ್ನು 2.5 ಪಟ್ಟು ಹೆಚ್ಚಿಸಲಾಗಿದೆ ಮತ್ತು ಎಲ್ಲಾ ಎಂಎಸ್ಎಂಇ ಗಳಿಗೆ ವಹಿವಾಟು ಮಿತಿಗಳನ್ನು 2 ಪಟ್ಟು ಹೆಚ್ಚಿಸಲಾಗುತ್ತದೆ. ಇದು ಎಂಎಸ್‌ಎಂಇ ಬೆಳೆಯಲು ಮತ್ತು ಉದ್ಯೋಗವನ್ನು ಸೃಷ್ಟಿಸಲು ವಿಶ್ವಾಸವನ್ನು ನೀಡುತ್ತದೆ.

ಸಾಲದ ಪ್ರವೇಶವನ್ನು ಸುಧಾರಿಸಲು, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಕ್ರೆಡಿಟ್‌ ಗ್ಯಾರಂಟಿ ವ್ಯಾಪ್ತಿಯನ್ನು ₹5 ಕೋಟಿಯಿಂದ ₹10 ಕೋಟಿಗೆ ಹೆಚ್ಚಿಸಲಾಗುವುದು, ಇದು ಮುಂದಿನ 5 ವರ್ಷಗಳಲ್ಲಿ ₹1.5 ಲಕ್ಷ ಕೋಟಿ ಹೆಚ್ಚುವರಿ ಸಾಲಕ್ಕೆ ಕಾರಣವಾಗುತ್ತದೆ. ಸಾಲದ ಪ್ರವೇಶವನ್ನು ಸುಧಾರಿಸಲು, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಕ್ರೆಡಿಟ್‌ ಗ್ಯಾರಂಟಿ ವ್ಯಾಪ್ತಿಯನ್ನು ₹5 ಕೋಟಿಯಿಂದ ₹10 ಕೋಟಿಗೆ ಹೆಚ್ಚಿಸಲಾಗುವುದು, ಇದು ಮುಂದಿನ 5 ವರ್ಷಗಳಲ್ಲಿ ₹1.5 ಲಕ್ಷ ಕೋಟಿ ಹೆಚ್ಚುವರಿ ಸಾಲಕ್ಕೆ ಕಾರಣವಾಗುತ್ತದೆ.

ಸ್ಟಾರ್ಟ್‌ ಅಪ್‌ಗಳಿಗೆ ಕ್ರೆಡಿಟ್ಅನ್ನು ₹10 ಕೋಟಿಯಿಂದ ₹20 ಕೋಟಿಗೆ ಹೆಚ್ಚಿಸಲಾಗಿದೆ, ಆತ್ಮನಿರ್ಭರ ಭಾರತಕ್ಕೆ ಪ್ರಮುಖವಾದ 27 ಕೇಂದ್ರೀಕೃತ ವಲಯಗಳಲ್ಲಿನ ಸಾಲಗಳಿಗೆ ಗ್ಯಾರಂಟಿ ಶುಲ್ಕವನ್ನು 1% ಕ್ಕೆಇಳಿಸಲಾಗಿದೆ ಮತ್ತು ಉತ್ತಮವಾಗಿ ನಡೆಸುವ ರಫ್ತುದಾರ ಎಂಎಸ್‌ಎಂಇಗಳಿಗೆ, ಅವಧಿ ಸಾಲಗಳಿಗೆ ₹20 ಕೋಟಿಗೆ ಹೆಚ್ಚಿಸಲಾಗಿದೆ.

ಜನರ ಕಲ್ಯಾಣದಲ್ಲಿ ಹೂಡಿಕೆ:

ಜನ ಜೀವನ ಮಟ್ಟವನ್ನು ಹೆಚ್ಚಿಸಲು ಅವರ ಆರೋಗ್ಯವನ್ನು ಸುಧಾರಿಸಲು ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಘೋಷಿಸಿದೆ. ಅವುಗಳಲ್ಲಿ ಮುಖವಾಗಿ

ದೇಶಾದ್ಯಂತ ₹8 ಕೋಟಿಗೂ ಹೆಚ್ಚು ಮಕ್ಕಳು, 1 ಕೋಟಿ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕತವಾದ ಆಹಾರವನ್ನು ನೀಡಲು ಸಾಕ್ಷಮ್‌ ಅಂಗನವಾಡಿ ಮತ್ತು ಪೋಷಣ್ 2.0 ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಇದಲ್ಲದೆ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಈಶಾನ್ಯ ಪ್ರದೇಶದ ಸುಮಾರು 20 ಲಕ್ಷ ಹದಿಹರೆಯದ ಹುಡುಗಿಯರಿಗೆ ಪೌಷ್ಠಿಕ ಬೆಂಬಲವನ್ನು ಒದಗಿಸುತ್ತದೆ.

ವೈಜ್ಞಾನಿಕ ಮನೋಭಾವ ಮನೋಭಾವದ ಜೊತೆಗೆ ಕುತೂಹಲ ಮತ್ತು ನಾವೀನ್ಯತೆಯ ಮನೋಭಾವವನ್ನು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಬಳಸಲು ಐವತ್ತು ಸಾವಿರ ಅಟಲಿ ಲಿಂಕ್‌ ರಿಂಗ್‌ ಲ್ಯಾಬ್‌ಗಳನ್ನು ಸ್ಥಾಪಿಸಲು ಆಯೋಜಿಸಲಾಗಿದೆ ಹಾಗೂ ಭಾರತ ನಟ್‌ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಎಲ್ಲಾ ಸರ್ಕಾರಿ ಮಾಧ್ಯಮಿಕ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್‌ ಬ್ಯಾಂಡ್‌ ಸಂಪರ್ಕವನ್ನು ಒದಗಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಗುರಿಯನ್ನು ಶಾಲೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಡಿಜಿಟಲ್‌ ರೂಪದಲ್ಲಿ ಭಾರತೀಯ ಭಾಷಾ ಪುಸ್ತಕಗಳನ್ನು ಒದಗಿಸಲು ಭಾರತೀಯ ಭಾಷಾ ಪುಸ್ತಕ ಯೋಜನೆಯನ್ನು ಘೋಷಿಸಿದೆ.

ಸಮಯಕ್ಕೆ ಸರಿಯಾಗಿ ಅನುಷ್ಠಾನಗೊಳಿಸುವುದು ಮುಖ್ಯ:

ಸರ್ಕಾರವು 2025-26ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ, ಬೆಳವಣಿಗೆಯು ಹೆಚ್ಚಾಗುವುದಲ್ಲದೆ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯೂ ಆಗುತ್ತದೆ.

-ಡಾ। ಎಸ್.ಆರ್.ಕೇಶವ, ಅರ್ಥಶಾಸ್ತ್ರ ಪ್ರಾಧ್ಯಾಪಕ, ಬೆಂಗಳೂರು ವಿಶ್ವವಿದ್ಯಾಲಯ.