ಇದೇ ಮೊದಲ ಬಾರಿಗೆ 13 ಭಾಷೆಯಲ್ಲಿ ಕೇಂದ್ರ ಸರ್ಕಾರದ ನೇಮಕಾತಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಮಾ.7ರವರೆಗೆ ಪರೀಕ್ಷೆ ನಡೆಯಲಿದ್ದು 48 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದಾರೆ.

ಪಿಟಿಐ ನವದೆಹಲಿ

ಸಿಆರ್‌ಪಿಎಫ್‌, ಬಿಎಸ್‌ಎಫ್‌, ಸಿಐಎಸ್‌ಎಫ್‌ ಒಳಗೊಂಡ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ ಕಾನ್ಸ್‌ಟೇಬಲ್‌ಗಳ ನೇಮಕಾತಿಗಾಗಿ ಇದೇ ಮೊದಲ ಬಾರಿಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಆಯೋಜಿಸಲಾಗಿದೆ. 

ಇಂಗ್ಲಿಷ್‌ ಮತ್ತು ಹಿಂದಿ ಹೊರತಾಗಿ ಈ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಫೆ.10ರಿಂದಲೇ ಪರೀಕ್ಷೆ ಆರಂಭವಾಗಿವೆ. ಮಾ.7ರವರೆಗೆ ದೇಶವ್ಯಾಪಿ 128 ನಗರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, 48 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. 

ಪ್ರಾದೇಶಿಕ ಭಾಷೆಗಳಲ್ಲೂ ನೇಮಕಾತಿ ಪರೀಕ್ಷೆ ನಡೆಸುವ ಸಂಬಂಧ 2023ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಆ ನಿರ್ಧಾರ ಈಗ ಜಾರಿಗೆ ಬಂದಿದೆ.

ಭಾನುವಾರ ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವಾಲಯ, ‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಗೃಹ ಸಚಿವ ಅಮಿತ್‌ ಶಾ ಅವರ ಮಾರ್ಗದರ್ಶನದಲ್ಲಿ ಕೇಂದ್ರೀಯ ಸಶಸ್ತ್ರ ಪಡೆಗಳ ಕಾನ್ಸ್‌ಟೇಬಲ್‌ ಹುದ್ದೆಗೆ ಈ ಬಾರಿ ಇಂಗ್ಲಿಷ್‌ ಮತ್ತು ಹಿಂದಿ ಹೊರತಾಗಿ 13 ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ನಡೆಸಲಾಗುತ್ತಿದೆ. 

ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸುವ ಮತ್ತು ಕೇಂದ್ರೀಯ ಸಶಸ್ತ್ರ ಪಡೆಗಳಲ್ಲಿ ಸ್ಥಳೀಯರ ನೇಮಕಾತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ನಿರ್ಧಾರ’ ಎಂದು ಹೇಳಿದೆ.

ಈ ಬಾರಿ ಕನ್ನಡದ ಜೊತೆಗೆ ಅಸ್ಸಾಮಿ, ಬಂಗಾಳಿ, ಗುಜರಾತಿ, ಮರಾಠಿ, ಮಲಯಾಳಂ, ತಮಿಳು, ತೆಲುಗು, ಒಡಿಯಾ, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. 

ಇದಕ್ಕಾಗಿ ಕೇಂದ್ರ ಗೃಹ ಸಚಿವಾಲಯವು ಸ್ಟಾಫ್‌ ಸೆಲೆಕ್ಷನ್‌ ಕಮಿಟಿ ಜೊತೆ ಒಪ್ಪಂದ ಮಾಡಿಕೊಂಡಿದೆ.