ಸಾರಾಂಶ
ನವದೆಹಲಿ: ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಯಶವಂತ್ ವರ್ಮಾ ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ‘ಪ್ರಕರಣದ ಆಂತರಿಕ ತನಿಖೆ ಮುಗಿಯುವವರೆಗೆ, ಆ ಕುರಿತ ವರದಿ ಬಿಡುಗಡೆಯಾಗುವವರೆಗೆ ನೀವು ಯಾಕೆ ಕಾಯ್ತಾ ಕೂತಿದ್ರಿ? ನಿಮ್ಮ ಪರ ವರದಿ ಬರಬಹುದೆಂಬ ನಿರೀಕ್ಷೆಯಲ್ಲಿದ್ದಿರಾ?’ ಎಂದು ಖಾರವಾಗಿ ಪ್ರಶ್ನಿಸಿದೆ.
ತಮ್ಮ ವಿರುದ್ಧದ ಆಂತರಿಕ ತನಿಖಾ ವರದಿ ರದ್ದುಮಾಡುವಂತೆ ಕೋರಿ ನ್ಯಾ.ವರ್ಮಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ದಿಪಾಂಕರ್ ದತ್ತಾ ಮತ್ತು ಎ.ಜಿ.ಮಸಿಹ್ ಅವರಿದ್ದ ಪೀಠ, ‘ಹಾಗಿದ್ದರೆ ನೀವು ತನಿಖಾ ಸಮಿತಿ ಮುಂದೆ ವಿಚಾರಣೆಗೆ ಏಕೆ ಹಾಜರಾದ್ರಿ? ವೆಬ್‌ಸೈಟ್‌ನಲ್ಲಿ ಹಾಕಲಾಗಿರುವ ವಿಡಿಯೋ ತೆಗೆದುಹಾಕುವಂತೆ ಕೇಳಲು ಬಂದಿದ್ದೀರಾ?’ ಎಂದೂ ಕೇಳಿತು.
ಜತೆಗೆ ಅರ್ಜಿಯಲ್ಲಿ ಸಲ್ಲಿಸಿದ್ದ ಪಕ್ಷಗಾರರ ಪಟ್ಟಿಯ ಜತೆಗೆ ಆಂತರಿಕ ತನಿಖಾ ವರದಿಯನ್ನೂ ಉಲ್ಲೇಖಿಸಬೇಕಿತ್ತು ಎಂದು ಹೇಳಿತು.
ಆಗ ವರ್ಮಾ ಪರ ವಕೀಲ ಕಪಿಲ್ ಸಿಬಲ್, ನ್ಯಾಯಾಧೀಶರು ಸಾರ್ವಜನಿಕ ಚರ್ಚೆಯ ವಸ್ತು ಆಗುವಂತಿಲ್ಲ. ಸುಪ್ರೀಂ ಕೋರ್ಟ್ ವೆಬ್‌ಸೈಟಲ್ಲಿ ವಿಡಿಯೋ ಬಿಡುಗಡೆ ಮಾಡುವುದು, ಮಾಧ್ಯಮದ ಆರೋಪಗಳನ್ನು ಸಂವಿಧಾನದ ಪರಿಚ್ಛೇದ 124ರ ಪ್ರಕಾರ ನಿರ್ಬಂಧಿಸಲಾಗಿದೆ ಎಂದರು. ಬಳಿಕ ಪೀಠವು, ಪಕ್ಷಗಾರರ ಕುರಿತು ಟಿಪ್ಪಣಿ ಸರಿಪಡಿಸಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
XXX ಎಂದು ಬರೆದು ತಮ್ಮ ಗುರುತು ಮರೆಮಾಡಿದ ನ್ಯಾ। ವರ್ಮಾ
ನವದೆಹಲಿ: ತಮ್ಮ ದಿಲ್ಲಿ ಅಧಿಕೃತ ನಿವಾಸದಲ್ಲಿ ಪತ್ತೆಯಾದ ನಗದು ಪ್ರಕರಣ ರದ್ದು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ನ್ಯಾ। ಯಶವಂತ ವರ್ಮಾ, ತಮ್ಮ ಗುರುತನ್ನು ಮರೆಮಾಚಲು ಅರ್ಜಿಯ ತಮ್ಮ ಹೆಸರಿನ ಜಾಗದಲ್ಲಿ XXX ಎಂದು ಬರೆದುಕೊಂಡಿದ್ದಾರೆ.
ಲೈಂಗಿಕ ಕಿರುಕುಳ ಅಥವಾ ಹಲ್ಲೆಗೊಳಗಾದ ಅರ್ಜಿದಾರರ ಮಹಿಳೆಯರ ಗುರುತನ್ನು ಮರೆಮಾಡಲು ಕೋರ್ಟ್ ದಾಖಲೆಗಳಲ್ಲಿ ಇಂತಹ ಮರೆಮಾಚುವಿಕೆ ಬಳಸಲಾಗುತ್ತದೆ. ವೈವಾಹಿಕ ಕಸ್ಟಡಿ ಹೋರಾಟಗಳಲ್ಲಿ ಬಾಲಾಪರಾಧಿಗಳು ಮತ್ತು ಅಪ್ರಾಪ್ತ ವಯಸ್ಕರ ಗುರುತನ್ನು ಬಹಿರಂಗಪಡಿಸುವುದನ್ನು ತಡೆಯಲು ಸಹ ಇದನ್ನು ಬಳಸಲಾಗುತ್ತದೆ.