ಸಾರಾಂಶ
ನವದೆಹಲಿ: ನ್ಯಾ। ಯಶವಂತ್ ವರ್ಮಾ ಅವರ ದೆಹಲಿ ನಿವಾಸದಲ್ಲಿ ಅಪಾರ ಪ್ರಮಾಣದ ಹಣ ಪತ್ತೆ ಪ್ರಕರಣ ಸಂಬಂಧ ಸುಪ್ರೀಂ ರಚಿಸಿದ್ದ ತ್ರಿಸದಸ್ಯ ಸಮಿತಿ ತನಿಖಾ ವರದಿ ಬಹಿರಂಗಕ್ಕೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ಆಡಳಿತ ವಿಭಾಗ ತಿರಸ್ಕರಿಸಿದೆ.
ಸುಪ್ರೀಂಕೋರ್ಟ್ ಗೌಪ್ಯತೆಯನ್ನು ಉಲ್ಲೇಖಿಸಿ, ಸಂಸದೀಯ ಹಕ್ಕುಗಳ ಉಲ್ಲಂಘನೆಯಾಗಬಹುದು ಎಂಬ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಲಾಗಿದೆ. ನ್ಯಾ। ವರ್ಮಾ ನಿವಾಸದಲ್ಲಿ ನಗದು ಪತ್ತೆ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಸಮಿತಿ ರಚಿಸಿತ್ತು. ಆ ಸಮಿತಿ ಮೇ 3 ರಂದು ತನಿಖಾ ವರದಿಯನ್ನು ಅಂದಿನ ಸಿಜೆಐ ನ್ಯಾ। ಸಂಜೀವ್ ಖನ್ನಾ ಅವರಿಗೆ ನೀಡಿತ್ತು.
ಕಲೆ, ವಾಣಿಜ್ಯ ಓದಿದವರೂ ಇನ್ನು ಪೈಲಟ್ ಆಗಲು ಸಾಧ್ಯ: ಡಿಜಿಸಿಎ ಪ್ರಸ್ತಾಪ
ನವದೆಹಲಿ: ನಾಗರಿಕ ವಿಮಾನಗಳ ಪೈಲಟ್ ತರಬೇತಿ ಅವಕಾಶವನ್ನು ಇನ್ನು ಕಲಾ ಮತ್ತು ವಾಣಿಜ್ಯ ವಿಷಯದಲ್ಲಿ ಉತ್ತೀರ್ಣರಾದವರಿಗೂ ನೀಡುವ ಪ್ರಸ್ತಾವವನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಕೇಂದ್ರ ಸರ್ಕಾರದ ಮುಂದಿಟ್ಟಿದೆ. ಹೊಸ ಪ್ರಸ್ತಾವದ ಅನ್ವಯ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪಿಯುಸಿ/12ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳೂ ಸಹ ಪೈಲಟ್ ತರಬೇತಿ ಪಡೆಯಬಹುದಾಗಿದೆ. ಹಾಲಿ ಪೈಲಟ್ ಪರವಾನಗಿ ಪಡೆಯಲು (ಸಿಪಿಎಲ್) ಕೇವಲ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ.
ಪಾಕ್ ಪರ ಬೇಹುಗಾರಿಕೆ: ಸಿಆರ್‌ಪಿಎಫ್ ಸಿಬ್ಬಂದಿ ಮೋತಿರಾಮ್ ಬಂಧನ
ನವದೆಹಲಿ: ಪಾಕಿಸ್ತಾನ ಪರ ಗೂಢಚರ್ಯೆ ನಡೆಸಿದ ಆರೋಪದಲ್ಲಿ ಸಿಆರ್‌ಪಿಎಫ್‌ನಲ್ಲಿ ಸಹಾಯಕ ಸಬ್ ಇನ್ಸ್‌ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮೋತಿ ರಾಮ್ ಜಾಟ್ ಎಂಬಾತನನ್ನು ಎನ್ಐಎ ಬಂಧಿಸಿದೆ. ಈತ 2023ರಿಂದಲೂ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಪಾಕ್ ಗುಪ್ತಚರ ಅಧಿಕಾರಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ. ಅದಕ್ಕಾಗಿ ಆತ ಹಣವನ್ನು ಪಡೆದಿದ್ದ ಎನ್ನುವ ಸಂಗತಿ ಬಯಲಾಗಿದೆ. ಮೋತಿರಾಮ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಜೂನ್ 6ರ ತನಕ ಪೊಲೀಸ್ ವಶಕ್ಕೆ ಕೋರ್ಟ್ ನೀಡಿದೆ. ಬಂಧನದ ಬೆನ್ನಲ್ಲೇ ಆತನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಕೋಟಾದಲ್ಲಿ ನೀಟ್ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 15ನೇ ಕೇಸ್
ಜೈಪುರ: ವೃತ್ತಿಪರ ಪರೀಕ್ಷೆಗಳ ತರಬೇತಿಗೆ ಖ್ಯಾತಿ ಹೊಂದಿರುವ ರಾಜಸ್ಥಾನದ ಕೋಟಾದಲ್ಲಿ ಜಮ್ಮು-ಕಾಶ್ಮೀರದ ಜೀಶಾನ್ ಎಂಬ ಯುವತಿ ತನ್ನ ಹಾಸ್ಟೆಲ್‌ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜೀಶಾನ್ ತನ್ನ ಸಾವಿಗೂ ಮುನ್ನ ಭಾನುವಾರ ಸಂಜೆ ತನ್ನ ಸಂಬಂಧಿಗೆ ಕರೆ ಮಾಡಿ, ಆತ್ಮಹತ್ಯೆ ಬಗ್ಗೆ ಹೇಳಿದ್ದಾಳೆ. ಕೂಡಲೇ ಆಕೆಯ ಸಂಬಂಧಿಕರು ಹಾಸ್ಟೆಲ್‌ಗೆ ಕರೆ ಮಾಹಿತಿ ನೀಡಿದರಾದರೂ, ಅವರು ತೆರಳುವ ವೇಳೆ ಆಕೆಯ ದೇಹ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೋಟಾದಲ್ಲಿ ಇದು ಈ ವರ್ಷದ ವಿದ್ಯಾರ್ಥಿಗಳ ಆತ್ಮಹತ್ಯೆಯ 15ನೇ ಪ್ರಕರಣವಾಗಿದೆ.
ಕೇರಳ ಬಳಿ ಮುಳುಗಿದ ಹಡಗಿಂದ ತೈಲ ಸೋರಿಕೆ ಪತ್ತೆ: ದಡದತ್ತ ಕಂಟೇನರ್
ಕೊಲ್ಲಂ: ಭಾನುವಾರ ಕೇರಳ ಕರಾವಳಿಯಲ್ಲಿ ಮುಳುಗಿದ ಲೈಬೀರಿಯಾದ ಹಡಗಿನ ಬಳಿ ತೈಲ ಸೋರಿಕೆ ಪತ್ತೆಯಾಗಿದೆ. ಹೀಗಾಗಿ ಮತ್ಸ್ಯ ಪರಿಸರದ ಮೇಲೆ ಗಂಭೀರ ಪರಿಣಾಮದ ಆತಂಕ ಉಂಟಾಗಿದೆ. ಇನ್ನೊಂದೆಡೆ ಸಮುದ್ರದಲ್ಲಿ ಮುಳುಗಿದ್ದ ಹಡಗಿನ ಕಂಟೇನರ್‌ಗಳು ದಡಕ್ಕೆ ಬರಲು ಪ್ರಾರಂಭಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. 640 ಕಂಟೈನರ್‌ಗಳನ್ನು ಹೊಂದಿದ್ದ ಹಡಗು ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ಅಪಾಯಕಾರಿ ವಸ್ತುಗಳನ್ನು ಹೊತ್ತೊಯ್ಯುತ್ತಿತ್ತು. ಭಾರತೀಯ ಕರಾವಳಿ ಕಾವಲು ಪಡೆಯ (ಐಸಿಜಿ) ಪ್ರಕಾರ, ಹಡಗಿನಲ್ಲಿ 84.44 ಮೆಟ್ರಿಕ್ ಟನ್ ಡೀಸೆಲ್ ಮತ್ತು 367.1 ಮೆಟ್ರಿಕ್ ಟನ್ ಫರ್ನೇಸ್ ಆಯಿಲ್ ಇತ್ತು. ಇವು ಪರಿಸರ ಸೂಕ್ಷ್ಮ ಕೇರಳ ಕರಾವಳಿಯ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಸಾರ್ವಜನಿಕರು ಕಂಟೇನರ್‌ಗಳಿಂದ ದೂರವಿರುವಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))