ಒಕ್ಕಲಿಗ ಜಾತಿ ಕುರಿತ ಅಂಕಿ-ಅಂಶಗಳ ಬಗ್ಗೆ ಆಕ್ರೋಶ : ಡಿಕೆಶಿ ನೇತೃತ್ವದಲ್ಲಿಂದು ಶಾಸಕರ ಸಭೆ

| N/A | Published : Apr 15 2025, 12:48 AM IST / Updated: Apr 15 2025, 04:56 AM IST

ಸಾರಾಂಶ

 ಸಮೀಕ್ಷೆ ವರದಿಯಲ್ಲಿನ ಒಕ್ಕಲಿಗ ಜಾತಿ ಕುರಿತ ಅಂಕಿ-ಅಂಶಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ವರದಿ ಬಗ್ಗೆ ಯಾವ ನಿಲುವು ತಾಳಬೇಕು ಎಂಬ ಬಗ್ಗೆ ಚರ್ಚಿಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು   ಪಕ್ಷದ ಒಕ್ಕಲಿಗ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ.

  ಬೆಂಗಳೂರು : ಜಾತಿವಾರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿಯಲ್ಲಿನ ಒಕ್ಕಲಿಗ ಜಾತಿ ಕುರಿತ ಅಂಕಿ-ಅಂಶಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ವರದಿ ಬಗ್ಗೆ ಯಾವ ನಿಲುವು ತಾಳಬೇಕು ಎಂಬ ಬಗ್ಗೆ ಚರ್ಚಿಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮಂಗಳವಾರ ಪಕ್ಷದ ಒಕ್ಕಲಿಗ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ.

ಒಕ್ಕಲಿಗ ಸಮುದಾಯದ ಜನಸಂಖ್ಯೆಯನ್ನು ವರದಿಯಲ್ಲಿ ಕಡಿಮೆ ಮಾಡಿ ತೋರಿಸಲಾಗಿದೆ. ಒಕ್ಕಲಿಗ ಜಾತಿಗಳನ್ನು ವಿಭಜನೆ ಮಾಡಿ ಪ್ರತ್ಯೇಕ ಮಾಡಿ ಒಗ್ಗಟ್ಟು ಒಡೆಯುವ ಪ್ರಯತ್ನ ಮಾಡಲಾಗಿದೆ. ಈ ವರದಿ ಜಾರಿ ಮಾಡಬಾರದು ಎಂದು ಒಕ್ಕಲಿಗ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಇದರ ಬೆನ್ನಲ್ಲೇ ಶಿವಕುಮಾರ್‌ ಅವರು ತಮ್ಮ ಅಧಿಕೃತ ಸರ್ಕಾರಿ ನಿವಾಸದಲ್ಲಿ ಮಂಗಳವಾರ ಸಂಜೆ 6 ಗಂಟೆಗೆ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ.

ಹೈಕಮಾಂಡ್‌ ಸೂಚನೆಯಂತೆ ಜಾತಿ ಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದೆ. ವರದಿ ಬಗ್ಗೆ ಚರ್ಚಿಸಲು ಏ.17 ರಂದು ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದು, ಆ ಸಭೆಯಲ್ಲಿ ಯಾವ ಅಂಶಗಳನ್ನು ಚರ್ಚಿಸಬೇಕು? ವರದಿ ಬಗ್ಗೆ ಯಾವ ನಿಲುವು ತಾಳಬೇಕು ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆಯಿದೆ. ಜತೆಗೆ ವರದಿ ಬಗ್ಗೆ ಯಾವುದಾದರೂ ಆಕ್ಷೇಪಣೆಗಳು ಇದ್ದರೆ ತಿಳಿಸಬಹುದು ಎಂದು ಅಭಿಪ್ರಾಯ ಕೋರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಅಭಿಪ್ರಾಯ ಸಂಗ್ರಹಕ್ಕೆ ಸಭೆ- ಡಿಕೆಶಿ:

ಈ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಜಾತಿ ಗಣತಿ ವಿಚಾರವಾಗಿ ನಾಳೆ (ಮಂಗಳವಾರ) ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಶಾಸಕರ ಜತೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸುತ್ತೇವೆ. ಬಳಿಕ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಸಲಹೆ ನೀಡುತ್ತೇವೆ ಎಂದು ಹೇಳಿದರು.

ಒಕ್ಕಲಿಗ ಸಮುದಾಯದವರಿಂದ ಆಕ್ರೋಶ ವ್ಯಕ್ತವಾಗುತ್ತಿರುವ ಬಗ್ಗೆ ಮಾತನಾಡಿ, ನಾನು ಜಾತಿ ಗಣತಿ ವರದಿಯನ್ನು ಸಂಪೂರ್ಣವಾಗಿ ನೋಡಿಲ್ಲ, ಅದರ ಅಧ್ಯಯನ ಮಾಡಲಾಗುತ್ತಿದೆ. ಮಂಗಳವಾರ ಕಾಂಗ್ರೆಸ್ ಪಕ್ಷದ ನಮ್ಮ ಸಮುದಾಯದ ಶಾಸಕರ ಸಭೆ ಕರೆದಿದ್ದೇನೆ. ಅವರ ಜತೆ ಚರ್ಚೆ ಮಾಡಿ, ಯಾರ ಮನಸ್ಸಿಗೂ ನೋಯಿಸದೇ ಎಲ್ಲರ ಗೌರವ ಕಾಪಾಡಲು ಸಲಹೆ ನೀಡುತ್ತೇವೆ ಎಂದಷ್ಟೇ ತಿಳಿಸಿದರು.

ಗಣತಿ ಅಧ್ಯಯನಕ್ಕಾಗಿ ವೀರಶೈವ ಜಡ್ಜ್‌ ಸಮಿತಿ

ಹಿಂದುಳಿದ ವರ್ಗಗಳ ಆಯೋಗವು ನಡೆಸಿದ್ದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು, ಇದೀಗ ವರದಿಯ ಸಾಧಕ-ಬಾಧಕಗಳನ್ನು ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲು ಮುಂದಾಗಿದೆ.ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಂಖ್ಯೆ ಹೆಚ್ಚಾಗಿದ್ದರೂ ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ್ದ ಸಮೀಕ್ಷೆಯಲ್ಲಿ ಸಮುದಾಯವನ್ನು ಸರಿಯಾಗಿ ‘ಲೆಕ್ಕ’ ಹಾಕಿಲ್ಲ. ವೈಜ್ಞಾನಿಕ ಸಮೀಕ್ಷೆ ನಡೆದಿಲ್ಲ. ಮನೆ-ಮನೆಗೆ ಗಣತಿಕಾರರು ಸರಿಯಾಗಿ ಭೇಟಿ ನೀಡಿಲ್ಲ ಎಂದು ಮಹಾಸಭೆಯು ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿತ್ತು.

ಇದೀಗ ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಯ ವರದಿ ಮಂಡನೆಯಾಗಿದ್ದು, ಜಾತಿವಾರು ಜನಸಂಖ್ಯೆಯ ಅಂಕಿ- ಅಂಶಗಳು ಬಹಿರಂಗವಾಗಿವೆ. ಇದರಲ್ಲಿ ವೀರಶೈವ ಲಿಂಗಾಯತರ ಸಂಖ್ಯೆಯನ್ನು ಬಹಳಷ್ಟು ಕಡಿಮೆ ತೋರಿಸಿರುವ ಹಿನ್ನೆಲೆಯಲ್ಲಿ ಏ. 17ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಮುದಾಯದ ಸಚಿವರು ಯಾವ ಅಂಕಿ-ಅಂಶ ಆಧರಿಸಿ ತಮ್ಮ ವಾದ ಮಂಡಿಸಬೇಕು ಎಂದು ಸದರಿ ಸಚಿವರಿಗೆ ಮಾರ್ಗದರ್ಶನ ಮಾಡಲು ಮಹಾಸಭಾದಿಂದಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.ಸಚಿವರಿಗೆ ದಾಖಲೆ ನೀಡಿಕೆ:

ಈ ಹಿಂದಿನ ಆಯೋಗಗಳು ನೀಡಿದ್ದ ವರದಿಯಲ್ಲಿ ರಾಜ್ಯದಲ್ಲಿದ್ದ ಸಮುದಾಯದ ಜನಸಂಖ್ಯೆ, ಮಹಾಸಭಾದ ಬಳಿಯೂ ಇರುವ ಮಾಹಿತಿ ಮತ್ತಿತರ ದಾಖಲೆಗಳನ್ನು ಸಮಿತಿಗೆ ಮಹಾಸಭೆಯು ಹಸ್ತಾಂತರಿಸಲಿದೆ. ಸಮಿತಿಯು ತಕ್ಷಣ ಸಭೆ ಸೇರಿ ಚರ್ಚಿಸಿ ವರದಿಯೊಂದನ್ನು ಸಿದ್ಧಪಡಿಸಲಿದೆ. ಈ ವರದಿಯನ್ನು ಏ.17 ರಂದು ನಡೆಯುವ ಸಚಿವ ಸಂಪುಟ ಸಭೆಗೂ ಮುನ್ನ ಸಮುದಾಯದ ಸಚಿವರಿಗೆ ನೀಡಿ ಸಂಪುಟ ಸಭೆಯಲ್ಲಿ ಯಾವ ರೀತಿ ‘ಮಾತನಾಡಬೇಕು’ ಎಂದು ಸೂಚಿಸಲು ಮಹಾಸಭಾ ಮುಂದಾಗಿದೆ ಎಂದು ತಿಳಿದುಬಂದಿದೆ. 

ಮಹಾಸಭೆಯಿಂದ  ಪ್ರತ್ಯೇಕ ಗಣತಿ?  ಹಿಂದುಳಿದ ವರ್ಗಗಳ ಆಯೋಗವು ನಡೆಸಿದ್ದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ಅಸಮಾಧಾನ ಹೊಂದಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು, ತನ್ನದೇ ಸಂಪನ್ಮೂಲ ಬಳಸಿಕೊಂಡು ಶೀಘ್ರದಲ್ಲೇ ರಾಜ್ಯಾದ್ಯಂತ ಸಮುದಾಯದ ಸಮೀಕ್ಷೆ ನಡೆಸಲಿದೆ ಎಂದು ತಿಳಿದು ಬಂದಿದೆ.

ಯಾವ್ಯಾವ ತಾಲೂಕಿನಲ್ಲಿ ಸಮುದಾಯದ ಜನಸಂಖ್ಯೆ ಎಷ್ಟಿದೆ ಎಂಬ ಬಗ್ಗೆ ಮಹಾಸಭಾ ಬಳಿ ಮಾಹಿತಿ ಇದೆ. ನಿಖರ ಅಂಕಿ ಅಂಶ ಸಂಗ್ರಹಿಸಲು ಈಗಾಗಲೇ ‘ಸಾಫ್ಟ್‌ವೇರ್‌’ ಸಿದ್ಧಪಡಿಸಿದ್ದು ಶೀಘ್ರದಲ್ಲೇ ಸಮೀಕ್ಷೆಗೆ ಚಾಲನೆಯನ್ನೂ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಇನ್ನೊಮ್ಮೆ ಗಣತಿ ಮಾಡಿ: ಸಚಿವೆ ಲಕ್ಷ್ಮಿ

ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾದ ಜಾತಿ ಗಣತಿ ವರದಿಯಲ್ಲಿನ ಜಾತಿವಾರು ಅಂಕಿ ಅಂಶದ ಬಗ್ಗೆ ವಿಪಕ್ಷ ಬಿಜೆಪಿ-ಜೆಡಿಎಸ್‌ನಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಜಾತಿ ಗಣತಿ ನಡೆಸಬೇಕೆಂದು ಹೇಳುವ ಮೂಲಕ ಜಾತಿ ಗಣತಿ ವರದಿಗೆ ತಕರಾರು ಮಂಡಿಸಿದ ಮೊದಲ ಸಚಿವರಾಗಿದ್ದಾರೆ.

ಜನಗಣತಿಯಲ್ಲಿನ ಜಾತಿವಾರು ಅಂಕಿ-ಅಂಶದ ಬಗ್ಗೆ ಹಲವು ಸಚಿವರಲ್ಲಿ ಆಕ್ಷೇಪವಿದ್ದರೂ ಯಾರೂ ಬಹಿರಂಗವಾಗಿ ಹೇಳಿಕೆ ನೀಡದೆ ಗುರುವಾರ ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸುತ್ತೇವೆ ಎಂದಷ್ಟೇ ಹೇಳಿದ್ದರು. ಆದರೆ ಸಚಿವೆ ಲಕ್ಷ್ಮೀ ಇದಕ್ಕಿಂತ ಭಿನ್ನ ಹೇಳಿಕೆ ನೀಡಿದ್ದಾರೆ,ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಲಕ್ಷ್ಮೀ ಅವರು, ‘ಜಾತಿ ಗಣತಿಗೆ ನಮ್ಮ ವಿರೋಧ ಯಾವತ್ತೂ ಇಲ್ಲ. ಆದರೆ ಈ ಜಾತಿ ಗಣತಿಯಲ್ಲಿ ವೀರಶೈವ- ಲಿಂಗಾಯತರನ್ನು ಪ್ರತ್ಯೇಕ ಮಾಡಿ ಗಣತಿ ಮಾಡಲಾಗಿದೆ. ಹಾಗಾಗಿ ಜಾತಿ ಗಣತಿಯನ್ನು ಇನ್ನೊಮ್ಮೆ ವೀರಶೈವ-ಲಿಂಗಾಯತರನ್ನು ಒಟ್ಟಾಗಿ ಪರಿಗಣಿಸಿ ಮಾಡಬೇಕು’ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

‘ಜಾತಿ ಗಣತಿ ವರದಿಯಲ್ಲಿ ಬೇರೆ ಎಲ್ಲಾ ಜಾತಿಯ ಜನರು ಹೆಚ್ಚಾಗಿ ಕಾಣುತ್ತಿದ್ದಾರೆ. ಆದರೆ ವೀರಶೈವ- ಲಿಂಗಾಯತ ಪ್ರತ್ಯೇಕವಾಗಿ ಪರಿಗಣಿಸಿದ್ದರಿಂದ ಒಡೆದು ಹೋಗಿದ್ದು, ಅಂಕಿ ಅಂಶ ಕಡಿಮೆ ಕಾಣಿಸುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜಾತಿ ಗಣತಿ ವರದಿ ಕಸದ ಬುಟ್ಟಿಗೆಸೆಯಿರಿ : ಬಿವೈವಿ

 ಬೆಂಗಳೂರು : ‘ಜಾತಿ ಜನಗಣತಿ ಕುರಿತ ವರದಿ ಅವೈಜ್ಞಾನಿಕ ಮತ್ತು ಹಳೆಯದಾದದ್ದು. ಅದನ್ನು ಕಸದ ಬುಟ್ಟಿಗೆ ಹಾಕಿ ಮತ್ತೊಮ್ಮೆ ಸಮೀಕ್ಷೆ ಮಾಡಬೇಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವರದಿ ಬಗ್ಗೆ ಆಡಳಿತ ಪಕ್ಷದಲ್ಲೇ ಗೊಂದಲ ಇದೆ. ರಾಜ್ಯ ಸರ್ಕಾರ ಮೊದಲು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.ಮುಖ್ಯಮಂತ್ರಿಗಳು ಒಂದು ಹೇಳಿದರೆ, ಉಪಮುಖ್ಯಮಂತ್ರಿ ಇನ್ನೊಂದು ಹೇಳುತ್ತಾರೆ. ಸಚಿವರಾದ ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್ ಬೇರೆ ಬೇರೆ ರೀತಿಯ ಹೇಳಿಕೆ ಕೊಡುತ್ತಾರೆ. ನಿಜವಾದ ಕಳಕಳಿ ಇದ್ದರೆ ಮುಖ್ಯಮಂತ್ರಿಗಳು ವರದಿಯ ಒಳಿತು- ಕೆಡುಕುಗಳ ಕುರಿತು ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಿ ಎಂದು ಹೇಳಿದರು.

ಸಿದ್ದರಾಮಯ್ಯ ಅವರೇ ಹಿಂದೆ ನಿಮ್ಮ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಮಾಡಿದ ಸಮೀಕ್ಷೆಗೆ ಈಗ ಹತ್ತು ವರ್ಷವಾಯಿತು. ಈಗಲೂ ನಿಮ್ಮದೇ ನೇತೃತ್ವದ ಸರ್ಕಾರವಿದೆ. ವೈಜ್ಞಾನಿಕವಾಗಿ ಮತ್ತೊಮ್ಮೆ ಸಮೀಕ್ಷೆ ಮಾಡಿ. ಎಲ್ಲರ ಸಭೆ ಕರೆದು ಜಾರಿಗೊಳಿಸಿ ಎಂದು ವಿಜಯೇಂದ್ರ ಸಲಹೆ ನೀಡಿದರು. 

ವೈಫಲ್ಯ ಮುಚ್ಚಿಡಲು ಕೇಂದ್ರ ಮೇಲೆ ಕಾಂಗ್ರೆಸ್‌ ಆರೋಪ

ರಾಜ್ಯದ ಕಾಂಗ್ರೆಸ್ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಮತ್ತು ಕೇಂದ್ರದ ವಿರುದ್ಧ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದೆ ಎಂದು ಇದೇ ವೇಳೆ ವಿಜಯೇಂದ್ರ ಹರಿಹಾಯ್ದರು.ಯುಪಿಎ ಸರ್ಕಾರವು 2004ರಿಂದ 2014ರವರೆಗೆ ಅಧಿಕಾರದಲ್ಲಿದ್ದ 10 ವರ್ಷಗಳ ಅವಧಿಯಲ್ಲಿ ಪೆಟ್ರೋಲ್ ದರ ಶೇ.90ರಷ್ಟು ಏರಿಕೆ ಕಂಡಿತ್ತು. ಅದೇ ರೀತಿ ಡೀಸೆಲ್ ಬೆಲೆಯು ಶೇ.96ರಷ್ಟು ಬೆಲೆ ಏರಿಕೆ ಆಗಿತ್ತು. ಆದರೆ, ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರಕಾರದ ಹತ್ತು ವರ್ಷಗಳ ಅವಧಿಯಲ್ಲಿ ಪೆಟ್ರೋಲ್ ದರ 72 ರು.ಗಳಿಂದ 100 ರು.ಗೆ ಏರಿದೆ. ಅಂದರೆ, ಶೇ.38ರಷ್ಟು ಹೆಚ್ಚಳವಾದಂತಾಗಿದೆ. ಅದೇ ರೀತಿ ಡೀಸೆಲ್ ದರ 55 ರು. ಇದ್ದುದು 90 ರು. ಆಗಿದೆ. ಶೇ.63ರಷ್ಟು ಜಾಸ್ತಿ ಆಗಿದೆ ಎಂದು ತಿಳಿಸಿದರು.