ಸಾರಾಂಶ
ನವದೆಹಲಿ: 2023ರಲ್ಲಿ ನಡೆದ ಪಂಚರಾಜ್ಯ ಚುನಾವಣೆಯ ವೇಳೆ ಚುನಾವಣಾ ಆಯೋಗವು ಮತದಾರರಿಗೆ ಹಂಚಲು ಸಂಗ್ರಹಿಸಲಾಗಿದ್ದ 1760 ಕೋಟಿ ರು. ಮೌಲ್ಯದ ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಕಳೆದ ಬಾರಿಗಿಂತ 7 ಪಟ್ಟು ಹೆಚ್ಚಾಗಿರುವುದಾಗಿ ಘೋಷಿಸಿರುವ ನಡುವೆಯೇ ಭಾರತದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳಲ್ಲಿ ತೆರಿಗೆ ಸಂಸ್ಥೆಯಿಂದ ದಾಳಿ ಮಾಡಿ ವಶಪಡಿಸಿಕೊಳ್ಳಲಾಗುವ ಅಕ್ರಮ ಹಣದ ಪ್ರಮಾಣ ಪ್ರತಿ ಬಾರಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿಯ ಅಧ್ಯಕ್ಷ ನಿತಿನ್ ಗುಪ್ತಾ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡುತ್ತಾ, ‘ತೆರಿಗೆ ಇಲಾಖೆಯ ತಂಡವು ದೇಶದ ನಾನಾಕಡೆ ದಾಖಲೆ ಇಲ್ಲದ ಹಣ ಮತ್ತು ಆಸ್ತಿಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡು ತನಿಖೆ ನಡೆಸುತ್ತದೆ. ಆದರೆ ಪ್ರತಿಬಾರಿ ವಿಧಾನಸಭಾ ಚುನಾವಣೆಗಳಲ್ಲಿ ವಶಪಡಿಸಿಕೊಳ್ಳುವ ಅಕ್ರಮ ಹಣದ ಪ್ರಮಾಣವು ಐದು ವರ್ಷಗಳ ಮುಂಚೆ ಅದೇ ವಿಧಾನಸಭಾ ಚುನಾವಣೆಯಲ್ಲಿ ವಶಪಡಿಸಿಕೊಂಡ ಅಕ್ರಮ ಹಣದ ಮೌಲ್ಯಕ್ಕಿಂತ ಗಣನೀಯ ಪ್ರಮಾಣದಲ್ಲಿ ಏರಿರುತ್ತದೆ. ಇದು ಚಿಂತನಾರ್ಹ ವಿಷಯವಾಗಿದೆ’ ಎಂದು ತಿಳಿಸಿದ್ದಾರೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ದತ್ತಾಂಶದಂತೆ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ವಶಪಡಿಸಿಕೊಂಡ ಅಕ್ರಮ ಹಣದ ಮೌಲ್ಯವು 2018ರಲ್ಲಿ ನಡೆದ ಚುನಾವಣೆಯ ವೇಳೆ ವಶಪಡಿಸಿಕೊಂಡ ಹಣಕ್ಕಿಂತ 2 ಪಟ್ಟು ಹೆಚ್ಚಾಗಿತ್ತು. ಹಾಗೆಯೇ 2022ರಲ್ಲಿ ನಡೆದ ಚುನಾವಣೆಯಲ್ಲಿ ವಶಪಡಿಸಿಕೊಂಡ ಹಣದ ಮೌಲ್ಯವು 2017ರ ಚುನಾವಣೆಯಲ್ಲಿ ವಶಪಡಿಸಿಕೊಂಡ ಅಕ್ರಮ ಹಣದ ಮೌಲ್ಯಕ್ಕಿಂತ 6 ಪಟ್ಟು ಹೆಚ್ಚಾಗಿತ್ತು.