ಸಾರಾಂಶ
2020ರಲ್ಲಿ ದೇಶದಲ್ಲಿ ಸಂಚಲನ ಮೂಡಿಸಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಸಿಬಿಐ, ತನಿಖಾ ಮುಕ್ತಾಯ ವರದಿಯನ್ನು ಮುಂಬೈ ಕೋರ್ಟಿಗೆ ಸಲ್ಲಿಸಿದೆ.
ಮುಂಬೈ: 2020ರಲ್ಲಿ ದೇಶದಲ್ಲಿ ಸಂಚಲನ ಮೂಡಿಸಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಸಿಬಿಐ, ತನಿಖಾ ಮುಕ್ತಾಯ ವರದಿಯನ್ನು ಮುಂಬೈ ಕೋರ್ಟಿಗೆ ಸಲ್ಲಿಸಿದೆ. ಅವರ ಸಾವಿನಲ್ಲಿ ಯಾವುದೇ ಅನುಮಾನ ಕಂಡುಬಂದಿಲ್ಲ ಹಾಗೂ ಅದು ದುಷ್ಕೃತ್ಯವಲ್ಲ ಎಂದು ವರದಿಯಲ್ಲಿ ಅದು ಹೇಳಿದೆ ಎಂದು ಮೂಲಗಳು ಹೇಳಿವೆ..ಏಜೆನ್ಸಿ 2 ಪ್ರಕರಣಗಳನ್ನು ಕೈಗೆತ್ತಿಕೊಂಡಿತ್ತು. ಒಂದು ಪ್ರಕರಣವನ್ನು ಸುಶಾಂತ್ ಗೆಳತಿ ರಿಯಾ ವಿರುದ್ಧ ಅವರ ತಂದೆ ದಾಖಲಿಸಿ, ರಿಯಾ ಮತ್ತು ಇತರರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಆರ್ಥಿಕ ವಂಚನೆ ಮತ್ತು ಮಾನಸಿಕ ಕಿರುಕುಳದ ಆರೋಪ ಹೊರಿಸಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ರಿಯಾ ಚಕ್ರವರ್ತಿ ಪ್ರತಿ ದೂರು ದಾಖಲಿಸಿ, ಸುಶಾಂತ್ ಅವರ ಸಹೋದರಿಯರು, ನಟನ ಬಗ್ಗೆ ನಕಲಿ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಪಡೆದು ತಮ್ಮನ್ನು ಸಿಲುಕಿಸಿದ್ದಾರೆ ಎಂದು ದೂರಿದ್ದರು.5 ವರ್ಷದ ತನಿಖೆಯ ನಂತರ, ಸಿಬಿಐ ಈಗ ಎರಡೂ ಪ್ರಕರಣಗಳಲ್ಲಿ ಮುಕ್ತಾಯ ವರದಿಗಳನ್ನು ಸಲ್ಲಿಸಿದೆ. ಇದು ಅವರ ತನಿಖೆಯಲ್ಲಿ ಸುಶಾಂತ್ ಸಾವಿಗೆ ಕಾರಣವಾಗುವಂಥ ಯಾವುದೇ ಕ್ರಿಮಿನಲ್ ಪಿತೂರಿ ನಡೆದಿಲ್ಲ ಅಥವಾ ತಪ್ಪು ಪತ್ತೆಯಾಗಿಲ್ಲ ಎಂದು ಸೂಚಿಸುತ್ತದೆ ಎಂದು ಮೂಲಗಳು ಹೇಳಿವೆ.
ಸುಶಾಂತ್ ಅವರು ಎಂ.ಎಸ್. ಧೋನಿ ಎಂಬ ಸಿನಿಮಾದಲ್ಲಿ ಕ್ರಿಕೆಟಿಗ ಧೋನಿ ಪಾತ್ರದಲ್ಲಿ ನಟಿಸಿ ಪ್ರಸಿದ್ಧಿ ಪಡೆದಿದ್ದರು. 2020ರ ಜೂ.14ರಂದು ಮುಂಬೈ ಫ್ಲಾಟಲ್ಲಿ ಅವರ ಶವ ಪತ್ತೆಯಾಗಿತ್ತು.