ದರ ವ್ಯತ್ಯಾಸ : ಆಟೋ/ಟ್ಯಾಕ್ಸಿ ಸೇವೆ ಒದಗಿಸುವ ಓಲಾ ಮತ್ತು ಉಬರ್‌ಗೆ ಕೇಂದ್ರ ನೋಟಿಸ್‌

| Published : Jan 24 2025, 12:45 AM IST / Updated: Jan 24 2025, 04:47 AM IST

ಸಾರಾಂಶ

ಆಟೋ/ಟ್ಯಾಕ್ಸಿ ಸೇವೆ ಒದಗಿಸುವ ಓಲಾ ಮತ್ತು ಉಬರ್ ಆ್ಯಪ್‌ಗಳಲ್ಲಿ ಸ್ಮಾರ್ಟ್‌ಫೋನ್ ಆಧರಿಸಿ ಪ್ರಯಾಣದರದಲ್ಲಿ ವ್ಯತ್ಯಾಸ ಕಂಡುಬರುತ್ತಿರುವ ಕುರಿತು ಕೇಂದ್ರ ಸರ್ಕಾರವು ಎರಡೂ ಕಂಪನಿಗಳಿಂದ ಸ್ಪಷ್ಟನೆ ಬಯಸಿ ನೋಟಿಸ್ ಜಾರಿ ಮಾಡಿದೆ

ನವದೆಹಲಿ: ಆಟೋ/ಟ್ಯಾಕ್ಸಿ ಸೇವೆ ಒದಗಿಸುವ ಓಲಾ ಮತ್ತು ಉಬರ್ ಆ್ಯಪ್‌ಗಳಲ್ಲಿ ಸ್ಮಾರ್ಟ್‌ಫೋನ್ ಆಧರಿಸಿ ಪ್ರಯಾಣದರದಲ್ಲಿ ವ್ಯತ್ಯಾಸ ಕಂಡುಬರುತ್ತಿರುವ ಕುರಿತು ಕೇಂದ್ರ ಸರ್ಕಾರವು ಎರಡೂ ಕಂಪನಿಗಳಿಂದ ಸ್ಪಷ್ಟನೆ ಬಯಸಿ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ರೈಡ್ ಬುಕ್ ಮಾಡುವಾಗ ಐಫೋನ್ ಮತ್ತು ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ದರ ವ್ಯತ್ಯಾಸವು ಗಮನಕ್ಕೆ ಬಂದಿದೆ. ಈ ಕುರಿತು ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ)ವು ಓಲಾ ಮತ್ತು ಊಬರ್ ಕ್ಯಾಬ್ ಅಗ್ರಿಗೇಟ್‌ಗಳಿಗೆ ನೋಟಿಸ್ ಜಾರಿ ಮಾಡಿದೆ’ ಎಂದು ತಿಳಿಸಿದ್ದಾರೆ.

ಈ ಹಿಂದೆ ದೆಹಲಿ ಮೂಲದ ಉದ್ಯಮಿಯೊಬ್ಬರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, 2 ವಿಧದ ಫೋನ್‌ಗಳಲ್ಲಿ ರೈಡ್ ಬುಕ್ ಮಾಡಿ ದರದಲ್ಲಿ ವ್ಯತ್ಯಾಸ ಕಂಡುಬರುತ್ತಿರುವ ಕುರಿತು ದೂರಿದ್ದರು.+

ಇದೇ ವೇಳೆ ಐಫೋನ್‌ ಆಪರೇಟಿಂಗ್ ಸಿಸ್ಟಂನಲ್ಲಿ ವ್ಯತ್ಯಾಸ ಕಂಡುಬರುತ್ತಿರುವ ದೂರು ಹಿನ್ನೆಲೆಯಲ್ಲಿ ಅದಕ್ಕೂ ಪ್ರತ್ಯೇಕ ನೋಟಿಸ್‌ ನೀಡಲಾಗಿದೆ.

ದರ ವ್ಯತ್ಯಾಸ ಏಕೆ?

ಓಲಾ/ಉಬರ್ ಅಥವಾ ಯಾವುದೇ ಆ್ಯಪ್‌ ಇರಲಿ ಆ್ಯಂಡ್ರಾಯ್ಡ್‌ಗಿಂತ ಐಫೋನ್‌ನವರು ಅವುಗಳ ನೋಂದಣಿಗೆ ಹೆಚ್ಚು ಶುಲ್ಕ ವಿಧಿಸುತ್ತಾರೆ ಎನ್ನಲಾಗಿದೆ. ಹೀಗಾಗಿ ತಾವು ತೆತ್ತ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡಲು ಓಲಾ/ಉಬರ್‌ಗಳು ಹೆಚ್ಚು ಪ್ರಯಾಣ ದರ ವಿಧಿಸುತ್ತವೆ ಎನ್ನಲಾಗಿದೆ.