ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಗೆ 2024-25ರ ಬಜೆಟ್‌ನಲ್ಲಿ 1,309.46 ಕೋಟಿ ರು

| Published : Jul 24 2024, 12:18 AM IST / Updated: Jul 24 2024, 07:47 AM IST

ಸಾರಾಂಶ

ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಗೆ 2024-25ರ ಬಜೆಟ್‌ನಲ್ಲಿ 1,309.46 ಕೋಟಿ ರು. ಮೀಸಲಿಡಲಾಗಿದೆ. ಇದು 2021-22ನೇ ಸಾಲಿನ 3,768 ಕೋಟಿ ರು.ಗಿಂತ ಕಡಿಮೆಯಿದ್ದು, ಈ ಬಾರಿಯೂ ಜನಗಣತಿ ನಡೆಯುವುದರ ಬಗ್ಗೆ ಸಂಶಯ ಹುಟ್ಟುಹಾಕಿದೆ.

ನವದೆಹಲಿ :  ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಗೆ 2024-25ರ ಬಜೆಟ್‌ನಲ್ಲಿ 1,309.46 ಕೋಟಿ ರು. ಮೀಸಲಿಡಲಾಗಿದೆ. ಇದು 2021-22ನೇ ಸಾಲಿನ 3,768 ಕೋಟಿ ರು.ಗಿಂತ ಕಡಿಮೆಯಿದ್ದು, ಈ ಬಾರಿಯೂ ಜನಗಣತಿ ನಡೆಯುವುದರ ಬಗ್ಗೆ ಸಂಶಯ ಹುಟ್ಟುಹಾಕಿದೆ.

2019ರ ಡಿ.24ರಂದು ಕೇಂದ್ರ ಸಂಪುಟ 2021ರಲ್ಲಿ ಜನಗಣತಿ ನಡೆಸುವುದಾಗಿ ಹೇಳಿದ್ದು, ಅದಕ್ಕಾಗಿ 8,754.23 ಕೋಟಿ ರು. ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ನವೀಕರಣಕ್ಕೆ 3,941.35 ಕೋಟಿ. ರು ಖರ್ಚಾಗುವುದಾಗಿ ಅಂದಾಜಿಸಿತ್ತು. ಕೊರೋನಾ ಕಾರಣದಿಂದ ಇದನ್ನು 2020ರ ಏ.1ರಿಂದ ಸೆ.30ರ ವರೆಗೆ ನಡೆಸುವುದಾಗಿ ನಿಗದಿಪಡಿಸಲಾಗಿತ್ತು. ಈ ವರ್ಷ ಸಾರ್ವತ್ರಿಕ ಚುನಾವನೆ ಇದ್ದ ಕಾರಣ 2024ರಲ್ಲಿಯೂ ಜನಗಣತಿಯನ್ನು ತಡೆಹಿಡಿಯಲಾಗಿದ್ದು, ಸರ್ಕಾರ ಹೊಸ ದಿನಾಂಕವನ್ನು ಇನ್ನೂ ಘೋಷಣೆ ಮಾಡಿಲ್ಲ.

ಮುಂದಿನ ಜನಗಣತಿ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ನಡೆಯಲಿದ್ದು, ಇದಕ್ಕೆ ಒಟ್ಟಾರೆ 12,000 ಕೋಟಿ ರು. ವೆಚ್ಚವಾಗುವುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಜನಗಣತಿಯ ಫಾರ್ಮ್‌ ಅನ್ನು ಖುದ್ದಾಗಿ ಭರ್ತಿಮಾಡಬಯಸುವವರಿಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಕಡ್ಡಾಯಗೊಳಿಸಲಾಗಿದ್ದು, ಇದಕ್ಕಾಗಿ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ಜನರ ಸ್ಥಿತಿಗತಿಯನ್ನು ಅರಿಯುವ ಸಲುವಾಗಿ 31 ಪ್ರಶ್ನೆಗಳನ್ನು ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು ತಯಾರಿಸಿದ್ದಾರೆ. ಇದರಲ್ಲಿ ಟೆಲಿಫೋನ್, ಇಂಟರ್ನೆಟ್, ಮೊಬೈಲ್, ಸೈಕಲ್, ಸ್ಕೂಟರ್, ಕಾರು, ಜೀಪುಗಳನ್ನು ಹೊಂದಿರುವ ಬಗ್ಗೆ ಪ್ರಶ್ನೆಗಳನ್ನು ರೂಪಿಸಲಾಗಿದೆ. ಜೊತೆಗೆ ಸೇವಿಸುವ ಧಾನ್ಯಗಳು, ಕುಡಿಯುವ ನೀರಿನ ಮೂಲ, ಬೆಳಕು, ಶೌಚಾಲಯ, ಸ್ನಾನಗೃಹ, ಅಡುಗೆ ಕೋಣೆಯ ಲಭ್ಯತೆ, ಅಡುಗೆಗೆ ಬಳಕೆಯಾಗುವ ಅನಿಲಗಳ ಬಗ್ಗೆ ಕೇಳಲಾಗುತ್ತದೆ. ಇದರೊಂದಿಗೆ ಮನೆ ನಿರ್ಮಾಣಕ್ಕೆ ಬಳಸಲಾದ ವಸ್ತುಗಳು, ಮನೆಯ ಮುಖ್ಯಸ್ಥರು, ಕೋಣೆಗಳ ಸಂಖ್ಯೆ, ದಂಪತಿಗಳ ಸಂಖ್ಯೆಯ ಬಗ್ಗೆಯೂ ಪ್ರಶ್ನಿಸಲಾಗುತ್ತದೆ.