ಕೇಂದ್ರದಿಂದ ತುಂಬಾ ವಿಳಂಬ ಆಗಿರುವ ಜನಗಣತಿ ಸೆಪ್ಟೆಂಬರ್‌ನಲ್ಲಿ ಆರಂಭಿಸುವ ಯೋಚನೆ - ಜತೆಗೇ ಜಾತಿಗಣತಿ?

| Published : Aug 23 2024, 01:01 AM IST / Updated: Aug 23 2024, 05:04 AM IST

ಸಾರಾಂಶ

ಕೇಂದ್ರ ಸರ್ಕಾರವು ತುಂಬಾ ವಿಳಂಬ ಆಗಿರುವ ಜನಗಣತಿಯನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸುವ ಯೋಚನೆ ಮಾಡುತ್ತಿದೆ ಹಾಗೂ ಅದರಲ್ಲೂ ವಿಶೇಷವಾಗಿ ಜನಗಣತಿ ವೇಳೆಯೇ ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿ ಎಲ್ಲ ಜಾತಿಗಳ ದತ್ತಾಂಶ ಸಂಗ್ರಹಿಸಲು ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

ನವದೆಹಲಿ: ಕೇಂದ್ರ ಸರ್ಕಾರವು ತುಂಬಾ ವಿಳಂಬ ಆಗಿರುವ ಜನಗಣತಿಯನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸುವ ಯೋಚನೆ ಮಾಡುತ್ತಿದೆ ಹಾಗೂ ಅದರಲ್ಲೂ ವಿಶೇಷವಾಗಿ ಜನಗಣತಿ ವೇಳೆಯೇ ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿ ಎಲ್ಲ ಜಾತಿಗಳ ದತ್ತಾಂಶ ಸಂಗ್ರಹಿಸಲು ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

ಒಮ್ಮೆ ಗಣತಿ ಆರಂಭಿಸಿದರೆ 18 ತಿಂಗಳು ತೆಗೆದುಕೊಳ್ಳಬಹುದು. ಅರ್ಥಾತ್‌, 2026ರ ಏಪ್ರಿಲ್‌ನಲ್ಲಿ ಗಣತಿ ಮುಗಿಯಬಹುದು ಎಂದು ಗೊತ್ತಾಗಿದೆ.

2021ರಲ್ಲೇ ಜನಗಣತಿ ನಡೆಸಬೇಕಿತ್ತಾದರೂ ಕೊರೋನಾ ಕಾರಣ ವಿಳಂಬ ಆಗಿತ್ತು. ಆದರೆ ಇದರ ನಡುವೆ ಜಾತಿ ಗಣತಿ ನಡೆಸಬೇಕು ಎಂಬ ಕೂಗನ್ನು ಕಾಂಗ್ರೆಸ್‌ ಆದಿಯಾಗಿ ಹಲವು ಪ್ರತಿಪಕ್ಷಗಳು ಹಾಗೂ ದಲಿತ/ಒಬಿಸಿ ಸಂಘಟನೆಗಳು ಕೂಗು ಎಬ್ಬಿಸಿವೆ. ಹೀಗಾಗಿ ಜನಗಣತಿಯ ಜತೆಗೇ ಜಾತಿ ಗಣತಿಯನ್ನೂ ನಡೆಸಬೇಕೇ ಎಂಬ ಚಿಂತನೆಯಲ್ಲಿ ಕೇಂದ್ರ ಸರ್ಕಾರ ತೊಡಗಿದೆ. ಇದು ಒಟ್ಟಾರೆ ಗಣತಿ ಕಾರ್ಯವನ್ನು ವಿಳಂಬ ಮಾಡಿದೆ ಎಂದು ತಿಳಿದುಬಂದಿದೆ.

‘ಹೀಗಾಗಿಯೇ ಬರುವ ಜನಗಣತಿ ಸಮಯದಲ್ಲಿ ಜನರ ಜಾತಿಯನ್ನು ದಾಖಲಿಸಲು ಪ್ರತ್ಯೇಕ ಕಾಲಂ ಸೇರಿಸಲು ಚರ್ಚೆಗಳು ನಡೆಯುತ್ತಿವೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಮೂಲಗಳು ತಿಳಿಸಿವೆ.ಈವರೆಗೂ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳನ್ನು (ಎಸ್ಟಿ) ಹೊರತುಪಡಿಸಿ, ಮಿಕ್ಕ ಜಾತಿಗಳನ್ನು ಸ್ವತಂತ್ರ ಭಾರತದಲ್ಲಿ ಜನಗಣತಿ ವೇಳೆ ಪರಿಗಣಿಸಿಲ್ಲ. 

2011ರಲ್ಲಿ ಅಂದಿನ ಯುಪಿಎ ಸರ್ಕಾರ ಮೊತ್ತ ಮೊದಲ ಬಾರಿ ಜನಗಣತಿಗೆ ಹೊರತಾದ ‘ಜಾತಿ ಎಣಿಕೆ’ ಮಾಡಿತ್ತು. ಆದರೆ ಅದರ ವರದಿಯನ್ನು ಬಹಿರಂಗ ಮಾಡಿರಲಿಲ್ಲ.ಇದರ ನಡುವೆ 2021ರಲ್ಲಿ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರವು, ‘ಸ್ವಾತಂತ್ರ್ಯಕ್ಕೂ ಮುನ್ನ 1931ರಲ್ಲಿನ ಗಣತಿ ವೇಳೆ ದೇಶದಲ್ಲಿ 4147 ಜಾತಿಗಳಿವೆ ಎಂದು ದಾಖಲಿಸಲಾಗಿತ್ತು. 

ಇನ್ನು 2011ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಜನಗಣತಿಯಲ್ಲಿ 46 ಲಕ್ಷ ಜಾತಿ/ಉಪಜಾತಿ ಹಾಗೂ ಅವುಗಳ ಹೆಸರು ದಾಖಲಿಸಲಾಗಿದೆ. ಆದರೆ, ಇಲ್ಲಿ ಕಂಡುಬಂದ ಜಾತಿಯ ದತ್ತಾಂಶವು ತಪ್ಪುಗಳಿಂದ ಕೂಡಿದೆ’ ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿತ್ತು. 2011ರ ಜನಗಣತಿ ಪ್ರಕಾರ ದೇಶದಲ್ಲಿ 121 ಕೋಟಿ ಜನಸಂಖ್ಯೆ ಇತ್ತು. ಇದು ಈಗ ಸುಮಾರು 142 ಕೋಟಿಗೆ ಏರಿದೆ.