ಸಾರಾಂಶ
ಕರ್ನಾಟಕದ ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳು ಮಲಯಾಳಂ ಭಾಷಿಕ ಶಿಕ್ಷಕರ ನೇಮಕದಿಂದ ಕಂಗೆಟ್ಟಿರುವಂತೆಯೇ ಈಗ ಅಂಗನವಾಡಿ ಹಂತದಲ್ಲೇ ಮಲಯಾಳಂ ಭಾಷೆ ಮಾತ್ರ ಗೊತ್ತಿರುವ ಶಿಕ್ಷಕಿಯ ನೇಮಕ ವಿವಾದಕ್ಕೆ ಕಾರಣವಾಗಿದೆ.
ಆತ್ಮಭೂಷಣ್
ಮಂಗಳೂರು : ಕರ್ನಾಟಕದ ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳು ಮಲಯಾಳಂ ಭಾಷಿಕ ಶಿಕ್ಷಕರ ನೇಮಕದಿಂದ ಕಂಗೆಟ್ಟಿರುವಂತೆಯೇ ಈಗ ಅಂಗನವಾಡಿ ಹಂತದಲ್ಲೇ ಮಲಯಾಳಂ ಭಾಷೆ ಮಾತ್ರ ಗೊತ್ತಿರುವ ಶಿಕ್ಷಕಿಯ ನೇಮಕ ವಿವಾದಕ್ಕೆ ಕಾರಣವಾಗಿದೆ.
ಗಡಿಭಾಗದ ಅಂಗನವಾಡಿ ಶಾಲೆಗಳಲ್ಲಿ ದ್ವಿಭಾಷೆ (ಎರಡು ಭಾಷೆ) ಬಲ್ಲ ಶಿಕ್ಷಕಿಯ ನೇಮಕ ಮಾಡುವುದು ಕ್ರಮ. ಆದರೆ, ಜಿಲ್ಲೆಯ ಅಡೂರಿನ ಕೋರಿಕಂಡ ಅಂಗನವಾಡಿಯಲ್ಲಿ ಕೇವಲ ಮಲಯಾಳಂ ಭಾಷಿಗ ಶಿಕ್ಷಕಿಯ ನೇಮಕ ಮಾಡಲಾಗಿದ್ದು, ಇದರಿಂದಾಗಿ ಕನ್ನಡ, ತುಳು, ಮರಾಠಿ ಭಾಷಿಗ ಪುಟಾಣಿಗಳು ಮಲಯಾಳಂ ಭಾಷೆ ಅರ್ಥವಾಗದೆ ಪಿಳಿಪಿಳಿ ನೋಡುವಂತಾಗಿದೆ.
ಈ ಬಗ್ಗೆ ಕಾಸರಗೋಡು ಜಿಲ್ಲಾ ಕಲೆಕ್ಟರ್, ಐಸಿಡಿಎಸ್ ಪ್ರೋಗ್ರಾಮ್ ಆಫೀಸರ್‌ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬುದು ಪೋಷಕರ ಅಳಲು. ಕರ್ನಾಟಕದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೂ ದೂರು ನೀಡಲಾಗಿದೆ.
ಮಲಯಾಳಂ ಶಿಕ್ಷಕಿ ನೇಮಕ:
ಕನ್ನಡ ಭಾಷಿಕರೇ ಅಧಿಕ ಸಂಖ್ಯೆಯಲ್ಲಿರುವ ದೇಲಂಪಾಡಿ ಪಂಚಾಯ್ತಿ ವ್ಯಾಪ್ತಿಯ ಅಡೂರಿನ ಕೋರಿಕಂಡ ಅಂಗನವಾಡಿಯಲ್ಲಿ ಒಟ್ಟು 16 ಪುಟಾಣಿಗಳಿದ್ದಾರೆ. ಅವರಲ್ಲಿ 14 ಮಂದಿ ಕನ್ನಡ ಭಾಷಿಕರು. ಈ ಅಂಗನವಾಡಿಯ ಶಿಕ್ಷಕಿ ರಜೆ ಮೇಲೆ ಇದ್ದು, ಕಾರಡ್ಕ ಶಿಶು ವಿಕಸನ ಕಚೇರಿಯಿಂದ ಆರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಮಲಯಾಳಂ ಭಾಷೆ ಮಾತ್ರ ಗೊತ್ತಿರುವ ಶಿಕ್ಷಕಿಯ ನೇಮಕ ಮಾಡಲಾಗಿದೆ. ರಜೆ ಮೇಲೆ ತೆರಳಿರುವ ಶಿಕ್ಷಕಿ ಕೆಲಸಕ್ಕೆ ರಾಜೀನಾಮೆ ನೀಡಿದರೆ, ಇದೇ ಮಲಯಾಳಂ ಭಾಷಿಕ ಶಿಕ್ಷಕಿಯನ್ನೇ ಕಾಯಂ ಆಗಿ ಮುಂದುವರಿಸುವುದು ಕ್ರಮ. ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಈ ಹಿಂದೆ ಅಂಗನವಾಡಿ ಕಮಿಟಿ ಮೂಲಕ ಶಿಕ್ಷಕಿಯರ ನೇಮಕ ನಡೆಯುತ್ತಿತ್ತು. ಆಗ ನೇಮಕಾತಿ ಪಟ್ಟಿಯ ಹಿರಿತನದ ಆಧಾರದಲ್ಲಿ ನೇಮಕ ಮಾಡಲಾಗುತ್ತಿತ್ತು. ಅದರಲ್ಲೂ ದ್ವಿಭಾಷೆ ಗೊತ್ತಿರುವವರನ್ನೇ ನೇಮಿಸುತ್ತಿದ್ದರು. ಈಗ ಶಿಶು ವಿಕಸನ ಕಚೇರಿಯಿಂದ ನೇಮಕ ನಡೆದಿದ್ದು, ಕೇವಲ ಮಲಯಾಳಂ ಭಾಷಿಕ ಶಿಕ್ಷಕಿಗೆ ಮಣೆ ಹಾಕಿದ್ದಾರೆ. ಇದರಿಂದ ಅಂಗನವಾಡಿ ಹಂತದಿಂದಲೇ ಕನ್ನಡ ಕಲಿಯಬೇಕಾದ ಪುಟಾಣಿಗಳು ಏನು ಮಾಡಬೇಕು ಎನ್ನುವುದು ಪೋಷಕರ ಪ್ರಶ್ನೆ.
ಕನ್ನಡ ಗೇಟ್‌ಪಾಸ್‌ಗೆ ಹುನ್ನಾರ?:
ಅಂಗನವಾಡಿ ಹಂತದಿಂದಲೇ ಮಲಯಾಳಂ ಭಾಷಿಕ ಶಿಕ್ಷಕಿಯನ್ನು ನೇಮಿಸುವ ಮೂಲಕ ಪ್ರಾಥಮಿಕ ಹಂತದಿಂದಲೇ ಕನ್ನಡ ಮಾಧ್ಯಮಕ್ಕೆ ಕೊಳ್ಳಿ ಇಡುವ ಕೇರಳ ಸರ್ಕಾರದ ಸಂಚು ಇದು ಎನ್ನುವುದು ಪೋಷಕರ ಆರೋಪ. ಅಂಗನವಾಡಿಯಲ್ಲೇ ಕನ್ನಡ ಕಲಿಯದಿದ್ದರೆ, ಪ್ರಾಥಮಿಕ ತರಗತಿಗೆ ಸೇರುವಾಗ ಮಲಯಾಳಂ ಭಾಷೆ ಮಾತ್ರ ಆಯ್ಕೆಗೆ ಅವಕಾಶ ಇರುತ್ತದೆ ಎಂಬುದು ಸರ್ಕಾರದ ದುರುದ್ದೇಶ. ಇದು ಗಡಿಭಾಗದ ಭಾಷಾ ಅಲ್ಪಸಂಖ್ಯಾತರ ರಕ್ಷಣೆಯಿಂದ ಸರ್ಕಾರವೇ ದೂರ ಸರಿಯುತ್ತಿರುವುದರ ಸಂಕೇತ ಎನ್ನುವುದು ಪೋಷಕರ ಅಳಲು.
ಕನ್ನಡ ಭಾಷೆ ಬಲ್ಲ ಶಿಕ್ಷಕಿಯನ್ನು ನೇಮಕಗೊಳಿಸಬೇಕು ಎಂಬ ನಿಯಮ ಇದೆ. ಆದರೆ, ಕೋರಿಕಂಡ ಅಂಗನವಾಡಿಯಲ್ಲಿ ಮಲಯಾಳಂ ಮಾತ್ರ ಗೊತ್ತಿರುವ ಶಿಕ್ಷಕಿಯ ನೇಮಕ ಮಾಡಲಾಗಿದೆ. ಇದು ಮುಂದೆ 1ನೇ ತರಗತಿಗೆ ಕನ್ನಡ ಭಾಷಿಕ ಮಕ್ಕಳ ಸೇರ್ಪಡೆಗೆ ತೊಂದರೆಯಾಗಲಿದೆ. ಇದು ಪ್ರಾಥಮಿಕ ಹಂತದಿಂದಲೇ ಮಲಯಾಳಂ ಭಾಷೆಗೆ ಉತ್ತೇಜನ ನೀಡಲು ಸರ್ಕಾರ ಮಾಡುತ್ತಿರುವ ಹುನ್ನಾರ.
- ನಯನ ಜೆ., ಪೋಷಕರು, ಕೋರಿಕಂಡ ಅಂಗನವಾಡಿ.
ಅಂಗನವಾಡಿಗಳಲ್ಲಿ ಮಲಯಾಳಂ ಭಾಷಿಕ ಶಿಕ್ಷಕಿಯ ನೇಮಕ ವಿಚಾರ ಪ್ರಾಧಿಕಾರದ ಗಮನಕ್ಕೆ ಬಂದಿದೆ. ಗಡಿನಾಡಿನಲ್ಲಿ ಕನ್ನಡ ಭಾಷೆಗೆ ವ್ಯವಸ್ಥಿತವಾಗಿ ಸಂಚಕಾರ ತರುವ ಸರ್ಕಾರದ ಷಡ್ಯಂತ್ರ ಇದು. ಈ ಬಗ್ಗೆ ಸಾಂಗ್ಲಿಯಲ್ಲಿ ಪ್ರಾಧಿಕಾರದ ಕಾರ್ಯಕ್ರಮದ ಬಳಿಕ ಕೇರಳ ಸರ್ಕಾರದ ಗಮನಕ್ಕೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ತರುವ ಪ್ರಯತ್ನ ಮಾಡಲಿದ್ದಾರೆ.
- ಸುಬ್ಬಯ್ಯ ಕಟ್ಟೆ, ಸದಸ್ಯರು, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ.