ಸಾರಾಂಶ
ಗಣಿಗಾರಿಕೆ ಉತ್ಪನ್ನಗಳು ಹಾಗೂ ಖನಿಜಗಳ ಮೇಲಿನ ತೆರಿಗೆ ಅಧಿಕಾರ ರಾಜ್ಯಗಳದೇ ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದೆ.
ನವದೆಹಲಿ: ಗಣಿಗಾರಿಕೆ ಉತ್ಪನ್ನಗಳು ಹಾಗೂ ಖನಿಜಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ, ಬದಲಾಗಿ ಅದು ರಾಜ್ಯಗಳಿಗೆ ಇದೆ ಎಂಬ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠದ ಇತ್ತೀಚಿನ ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದೆ.
ಕೇಂದ್ರವು ತನ್ನ ಅರ್ಜಿಯಲ್ಲಿ ಮಧ್ಯಪ್ರದೇಶದ ರಾಜ್ಯ ಸರ್ಕಾರವನ್ನೂ ಸಹ ಅರ್ಜಿದಾರನನ್ನಾಗಿ ಮಾಡಿಕೊಂಡಿದೆ.
ಸಂವಿಧಾನ ಪೀಠದ 8:1 ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಕೇಂದ್ರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಕೋರ್ಟ್ ಹಾಲ್‌ನಲ್ಲಿ ಅಚ್ಚರಿ ವ್ಯಕ್ತಪಡಿಸಿದರು.
‘ಗಣಿಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಿದರೆ ದೇಶದಲ್ಲಿ ಆರ್ಥಿಕ ಅಸಮತೋಲನ ಉಂಟಾಗಲಿದೆ. ಗಣಿಗಾರಿಕೆಗೆ ತೀವ್ರ ಹೊಡೆತ ಬೀಳಲಿದೆ. ಈ ಹಿಂದೆ ಸಂಗ್ರಹಿಸಿದ ತೆರಿಗೆಯನ್ನು ರಾಜ್ಯಗಳಿಗೆ ಮರಳಿಸಬೇಕು ಎಂಬ ಆದೇಶದಿಂದ ಕೇಂದ್ರಕ್ಕೆ ದೊಡ್ಡ ಹೊರೆಯಾಗಲಿದೆ. ಸಂವಿಧಾನ ಪೀಠದ ತೀರ್ಪು ತಪ್ಪು ಕಲ್ಪನೆಯಿಂದ ಕೂಡಿದೆ’ ಎಂದು ಕೇಂದ್ರ ಸರ್ಕಾರ ವಾದಿಸಿದೆ.
ಖನಿಜಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರ ರಾಜ್ಯಗಳಿಗಿದೆ ಎಂದು ಸುಪ್ರೀಂಕೋರ್ಟ್ ಜು.25ರಂದು ತೀರ್ಪು ನೀಡಿತ್ತು. ನಂತರ ಆ.14ರಂದು, ಈ ತೀರ್ಪು 2005ರಿಂದ ಪೂರ್ವಾನ್ವಯವಾಗಲಿದ್ದು, ಮುಂದಿನ 12 ವರ್ಷಗಳಲ್ಲಿ ಈ ಹಿಂದೆ ಸಂಗ್ರಹಿಸಿರುವ ತೆರಿಗೆಯನ್ನು ರಾಜ್ಯಗಳಿಗೆ ಮರಳಿಸಬೇಕು ಎಂದು ಆದೇಶಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಗಣಿ ಕಂಪನಿಗಳು 70,000 ಕೋಟಿ ರು.ಗಳನ್ನು ರಾಜ್ಯಗಳಿಗೆ ನೀಡಬೇಕಾಗುತ್ತದೆ. ಖಾಸಗಿ ಗಣಿ ಕಂಪನಿಗಳೂ ರಾಜ್ಯಗಳಿಗೆ ತೆರಿಗೆ ಪಾವತಿಸಬೇಕು ಅಂತಾದರೆ ಒಟ್ಟು 1.5 ಲಕ್ಷ ಕೋಟಿ ರು. ರಾಜ್ಯಗಳಿಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ.
==
ವೈದ್ಯರ ಜೊತೆ ದೀದಿ ಸಭೆ ವಿಫಲ: ರಾಜೀನಾಗೆ ಸಿದ್ಧ ಎಂದ ಮಮತಾ
ಕೋಲ್ಕತಾ: ವೈದ್ಯೆ ರೇಪ್, ಹತ್ಯೆ ಬಳಿಕ ಕಳೆದ 35 ದಿನಗಳಿಂದ ನಡೆಯುತ್ತಿರುವ ಕಿರಿಯ ವೈದ್ಯರ ಮುಷ್ಕರ ಗುರುವಾರ ನಾಟಕೀಯ ಬೆಳವಣಿಗೆಗೆ ಸಾಕ್ಷಿ ಆಯಿತು.
ಬಿಕ್ಕಟ್ಟು ಇತ್ಯರ್ಥ ಸಂಬಂಧ ಗುರುವಾರ ಸಿಎಂ ಉಪಸ್ಥಿತಿಯಲ್ಲಿ ಸಭೆ ಆಯೋಜನೆಗೊಂಡಿತ್ತು. ಆದರೆ ಸಂಧಾನ ಸಭೆ ಟೀವಿಯಲ್ಲಿ ನೇರಪ್ರಸಾರಕ್ಕೆ ಸರ್ಕಾರ ಒಪ್ಪದ ಹಿನ್ನೆಲೆಯಲ್ಲಿ ವೈದ್ಯರು ಸಭೆ ಬಹಿಷ್ಕರಿಸಿದರು. ಹೀಗಾಗಿ 2 ಗಂಟೆಗಳ ಕಾಲ ಸಭಾ ಸ್ಥಳದಲ್ಲಿ ಏಕಾಂಗಿಯಾಗಿ ಕುಳಿತಿದ್ದ ಮಮತಾ ಬಳಿಕ ಎದ್ದು ಹೊರಟರು. ಇದಕ್ಕೂ ಮುನ್ನ ಮಾತನಾಡಿದ ಮಮತಾ ‘ಕುರ್ಚಿಯ ಬಗ್ಗೆ ಚಿಂತೆಯಿಲ್ಲ. ಅಗತ್ಯವಿದ್ದರೇ ರಾಜ್ಯಕ್ಕಾಗಿ ರಾಜೀನಾಮೆ ನೀಡಲು ಸಿದ್ಧ ’ ಎಂದರು.ಈ ನಡುವೆ ಮಮತಾ ವಿರುದ್ಧದ ಜನಾಕ್ರೋಶದ ಹಿನ್ನೆಲೆಯಲ್ಲಿ ಅವರ ಜೊತೆ ಇನ್ನು ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಬಂಗಾಳ ರಾಜ್ಯಪಾಲ ಆನಂದ್ ಬೋಸ್ ಘೋಷಿಸಿದ್ದಾರೆ.