ಸಾರಾಂಶ
ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ‘ಜಾರ್ಖಂಡ್ ಹುಲಿ’ ಎಂದೇ ಖ್ಯಾತರಾದ ರಾಜ್ಯ ಸಾರಿಗೆ ಸಚಿವ ಚಂಪೈ ಸೊರೇನ್ ಅವರನ್ನು ಹೊಸ ಸಿಎಂ ಆಗಿ ಆಯ್ಕೆ ಮಾಡಲಾಗಿದೆ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಹೇಮಂತ್ ಅವರು ಬುಧವಾರ ಇ.ಡಿ. ಅಧಿಕಾರಿಗಳ ಜೊತೆಗೆ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದರು.
ಈ ಬಳಿಕ ರಾಜ್ಯಪಾಲರನ್ನು ಭೇಟಿಯಾದ ಜೆಎಂಎಂ, ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಶಾಸಕರು ಚಂಪೈ ಅವರನ್ನು ತಮ್ಮ ಶಾಸಕಾಂಗ ನಾಯಕರಾಗಿ ಆಯ್ಕೆ ಮಾಡಿರುವುದಾಗಿ ತಿಳಿಸಿದರು.
81 ಶಾಸಕ ಬಲದ ವಿಧಾನಸಭೆಯಲ್ಲಿ ತಮಗೆ 47 ಶಾಸಕರ ಬೆಂಬಲ ಇದೆ ಎಂದು ಚಂಪೈ ಹೇಳಿದ್ದಾರೆ.
1991ರಿಂದ ಶಾಸಕರಾಗಿರುವ ಚಂಪೈ ಸೊರೇನ್ ಅವರು ಜೆಎಂಎಂ ಸಂಸ್ಥಾಪಕ ಶಿಬು ಸೊರೇನ್ ಅವರ ಆಪ್ತರಾದರೂ ಅವರು ಶಿಬು ಅವರ ಬಂಧುವಲ್ಲ. ಚಂಪೈ ಜಾರ್ಖಂಡ್ ಪ್ರತ್ಯೇಕ ರಾಜ್ಯ ರಚನೆಯ ಪ್ರಮುಖ ಹೋರಾಟಗಾರ.
ಹೇಮಂತ್ ಪತ್ನಿಗೆ ಏಕೆ ಇಲ್ಲ ಸಿಎಂ ಪಟ್ಟ?
ಈ ಮೊದಲು ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ ಸೊರೇನ್ ಅವರಿಗೆ ಮುಖ್ಯಮಂತ್ರಿ ಪಟ್ಟ ನೀಡಲಾಗುತ್ತದೆ ಎಂಬ ವದಂತಿಗಳಿದ್ದವು.
ಆದರೆ ಅವರು ಆದಿವಾಸಿ ಸಮುದಾಯಕ್ಕೆ ಸೇರಿದವರಲ್ಲ ಮತ್ತು ಮೀಸಲು ಕ್ಷೇತ್ರದಿಂದ ಅವರಿಗೆ ಸ್ಪರ್ಧೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಆಯ್ಕೆ ಮಾಡಲಿಲ್ಲ ಎನ್ನಲಾಗಿದೆ.
ಅಲ್ಲದೆ, ಹೇಮಂತ್ ಬಂಧು, ಶಾಸಕಿ ಸೀತಾ ಸೊರೇನ್ ಅವರು ಕಲ್ಪನಾಗೆ ಪಟ್ಟ ಕಟ್ಟಲು ಆಕ್ಷೇಪ ವ್ಯಕ್ತಪಡಿಸಿದ್ದೂ ಕಲ್ಪನಾಗೆ ಮುಳುವಾಯಿತೆಂದು ಮೂಲಗಳು ಹೇಳಿವೆ.