ಜಾರ್ಖಂಡ್‌ ಮುಕ್ತಿ ಮೋರ್ಚಾ , ಶಾಸಕ ಸ್ಥಾನಕ್ಕೆ ಚಂಪೈ ರಾಜೀನಾಮೆ : 30ಕ್ಕೆ ಬಿಜೆಪಿ ಸೇರುವ ಸಾಧ್ಯತೆ

| Published : Aug 29 2024, 12:51 AM IST / Updated: Aug 29 2024, 04:57 AM IST

ಸಾರಾಂಶ

ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.

ರಾಂಚಿ: ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ‘ಪಕ್ಷದ ಈಗಿನ ಕಾರ್ಯವೈಖರಿ ಮತ್ತು ನೀತಿಗಳಿಂದ ನೊಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಆದರೆ ಬುಡಕಟ್ಟು ಜನಾಂಗ, ದಲಿತರು, ಹಿಂದುಳಿದವರು ಹಾಗೂ ರಾಜ್ಯದ ಸಾಮಾನ್ಯ ಜನರಿಗಾಗಿ ನನ್ನ ಹೋರಾಟವನ್ನು ಮುಂದುವೆರೆಸುತ್ತೇನೆ’ ಎಂದು ಚಂಪೈ ಹೇಳಿದ್ದಾರೆ. ಚಂಪೈ ಆ.30ರಂದು ಇವರು ಬಿಜೆಪಿ ಸೇರುವ ಸಾಧ್ಯತೆ ಇದೆ.

==

17000 ಕೇಂದ್ರ ಸರ್ಕಾರಿ ಹುದ್ದೆಗೆ 36 ಲಕ್ಷ ಜನರಿಂದ ಅರ್ಜಿ: 7 ವರ್ಷದ ದಾಖಲೆ

ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 17,000 ಹುದ್ದೆಗಳಿಗೆ ಬರೋಬ್ಬರಿ 36 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಇದು 7 ವರ್ಷದ ದಾಖಲೆಯಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯೊಂದಕ್ಕೆ ಸರ್ಕಾರ ಉತ್ತರ ನೀಡಿದೆ. ಸಿಬಿಐ, ಜ್ಯೂನಿಯರ್‌ ಅಕೌಂಟೆಂಟ್‌, ಅಬಕಾರಿ ಇಲಾಖೆ, ಸಬ್‌ ಇನ್ಸ್‌ಪೆಕ್ಟರ್‌, ಆದಾಯ ತೆರಿಗೆ ಇನ್ಸ್‌ಪೆಕ್ಟರ್‌, ಆಡಿಟರ್‌ ಸೇರಿದಂತೆ ಖಾಲಿ ಇರುವ 17,000 ಹುದ್ದೆಗಳಿಗೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ 36 ಲಕ್ಷ ಮಂದಿ ಅರ್ಜಿ ಹಾಕಿದ್ದಾರೆ. 2016ರಲ್ಲಿ 38 ಲಕ್ಷ ಅರ್ಜಿ ಸಲ್ಲಿಸಿದ್ದರು ಇದು ಸಾರ್ವಕಾಲಿಕ ದಾಖಲೆಯಾಗಿತ್ತು.

==

ಉಗ್ರ ಸಂಘಟನೆ ಜಮಾತ್‌ ಇಸ್ಲಾಮಿ ಮೇಲೆ ಹಸೀನಾ ಹೇರಿದ್ದ ನಿಷೇಧ ತೆರವು

ಢಾಕಾ: ಉಗ್ರಸಂಘಟನೆ ಎಂಬ ಪಟ್ಟಕಟ್ಟಿ ಹಸೀನಾ ಸರ್ಕಾರದಿಂದ ನಿಷೇಧಕ್ಕೊಳಗಾಗಿದ್ದ ಜಮಾತ್‌ ಎ ಇಸ್ಲಾಮಿ ಸಂಘಟನೆ ಮೇಲಿನ ನಿಷೇಧವನ್ನು ಬಾಂಗ್ಲಾದೇಶದ ಮುಹಮ್ಮದ್‌ ಯೂನಸ್‌ ಅವರ ಮಧ್ಯಂತರ ತೆರವುಗೊಳಿಸಿದೆ. ಮಾತ್‌ ಮೇಲಿದ್ದ ಭಯೋತ್ಪಾನೆ ಕೃತ್ಯ ಆರೋಪಗಳಿಗೆ ಯಾವುದೇ ಸಾಕ್ಷಿಗಳು ಇಲ್ಲದ ಕಾರಣ ತೆರವು ಮಾಡಲಾಗಿದೆ ಎಂದು ಬಾಂಗ್ಲಾದೇಶದ ಗೃಹ ಇಲಾಖೆ ಹೇಳಿದೆ. ಆ.1ರಂದು ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಪಕ್ಷ ಭಯೋತ್ಪಾದನೆ ಮತ್ತು ಉಗ್ರವಾದ ಆರೋಪ ಹೊರಿಸಿ ಜಮಾತ್‌ ಸಂಘಟನೆಯನ್ನು ನಿಷೇಧಗೊಳಿಸಿತ್ತು.

==

ಅಮೆಜಾನ್‌ನ ಸುಧಾರಿತ ಅಲೆಕ್ಸಾ ಸೇವೆಗಳಿಗೆ ಇನ್ನು ಮಾಸಿಕ ಶುಲ್ಕ!

ನವದೆಹಲಿ: ಅಮೆಜಾನ್‌ನ ಜನಪ್ರಿಯ ಉಪಕರಣವಾದ ಅಲೆಕ್ಸಾ ಸೇವೆಗೆ ಶುಲ್ಕ ವಿಧಿಸಲು ಕಂಪನಿ ನಿರ್ಧರಿಸಿದೆ. ಆದರೆ ಹಾಲಿ ಇರುವ ಕ್ಲಾಸಿಕ್‌ ಅಲೆಕ್ಸಾ ಸೇವೆಗಳು ಈಗಿನಂತೆಯೂ ಉಚಿತವಾಗಿ ಮುಂದುವರೆಯಲಿದೆ. ಬದಲಿಗೆ ಅಕ್ಟೋಬರ್‌ನಲ್ಲಿ ಕಂಪನಿ ಹೊಸ ಆವೃತ್ತಿಯ ಸುಧಾರಿತ ಅಲೆಕ್ಸಾ ಪರಿಚಯಿಸಲಿದ್ದು ಅದಕ್ಕೆ ಮಾಸಿಕ 10 ಡಾಲರ್‌ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ನವೀಕೃತ ಅಲೆಕ್ಸಾ ಹೊಸ ಪಾಕ ವಿಧಾನ ಹುಡುಕಲು, ಶಾಪಿಂಗ್‌ಗೆ ಅನುಕೂಲವಾಗುವ ಕೆಲ ಟೂಲ್‌ಗಳನ್ನು ಒಳಗೊಂಡಿರಲಿದೆ. ಅಲ್ಲದೇ ಗ್ರಾಹಕ ಪ್ರಶ್ನೆಗಳಿಗೆ ಉತ್ತರಿಸಲು, ಮಕ್ಕಳನ್ನು ಆಕರ್ಷಿಸಲು ಕೂಡ ಅಲೆಕ್ಸಾ ಸಜ್ಜಾಗಿದೆ ಎನ್ನಲಾಗಿದೆ.

==

ಕಣಿವೆಗೆ ಉರುಳಿದ ಸೇನಾ ಟ್ರಕ್: ಮೂವರು ಯೋಧರು ಹುತಾತ್ಮ, ಹಲವರಿಗೆ ಗಾಯ

ಇಟಾನಗರ: ಸೈನಿಕರು ಪ್ರಯಾಣಿಸುತ್ತಿದ್ದ ಟ್ರಕ್‌ ಕಣಿವೆಗೆ ಉರುಳಿದ ಪರಿಣಾಮ ಅದರಲ್ಲಿದ್ದ ಮೂವರು ಯೋಧರು ಹುತಾತ್ಮರಾಗಿದ್ದು, ಹಲವರಿಗೆ ಗಾಯಗಳಾವ ಘಟನೆ ಅರುಣಾಚಲ ಪ್ರದೇಶದ ಸುಬಾನ್ಸಿರಿ ಜಿಲ್ಲೆಯಲ್ಲಿ ನಡೆದಿದೆ. ಮಂಗಳವಾರ ಮುಂಜಾನೆ 6 ಗಂಟೆಗೆ ಯೋಧರನ್ನು ದಾಪೊರಿಜೋದಿಂದ ಲೆಪಾರಾಡಾ ಜಿಲ್ಲೆಯ ಬಸಾರ್‌ಗೆ ಸಾಗಿಸುತ್ತಿದ್ದ ವೇಳೆ ತಾಪಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಕೂಡಲೇ ಘಟಾನಾಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಗಾಯಾಳುಗಳನ್ನು ರಕ್ಷಿಸಿ, ಮೃತದೇಹ ಹೊರತೆಗೆಯುವಲ್ಲಿ ಸಹಾಯ ಮಾಡಿದ್ದಾರೆ. ಮೃತರು ಹವಾಲ್ದಾರ್‌ ನಖತ್‌ ಸಿಂಗ್, ನಾಯಕ್ ಮುಖೇಶ್ ಕುಮಾರ್ ಮತ್ತು ಗ್ರೆನೇಡಿಯರ್ ಆಶಿಶ್‌ ಕುಮಾರ್‌ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.