ಸಾರಾಂಶ
ಜಾರ್ಖಂಡ್ ಮುಖ್ಯಮಂತ್ರಿಯಾಗಿ ಚಂಪೈ ಸೋರೆನ್ ಪ್ರಮಾಣವಚನ ಸ್ವೀಕರಿಸಿದ್ದು, ನಾಡಿದ್ದು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. ಜೆಎಂಎಂ ಮೈತ್ರಿ ಸರ್ಕಾರದ ಎಲ್ಲ ಶಾಸಕರೂ ಹೈದರಾಬಾದ್‌ಗೆ ಶಿಫ್ಟ್ ಆಗಿದ್ದಾರೆ.
ರಾಂಚಿ: ಭಾರೀ ರಾಜಕೀಯ ಹೈಡ್ರಾಮಾ ಬಳಿಕ ಅಂತಿಮವಾಗಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ನಾಯಕ ಚಂಪೈ ಸೊರೇನ್ (67) ಜಾರ್ಖಂಡ್ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.
ಚಂಪೈ ಅವರೊಂದಿಗೆ ಹಿರಿಯ ಕಾಂಗ್ರೆಸ್ ನಾಯಕ ಅಲಂಗೀರ್ ಆಲಂ ಮತ್ತು ಆರ್‌ಜೆಡಿ ನಾಯಕ ಸತ್ಯಾನಂದ್ ಭೋಕ್ತಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಎಲ್ಲರಿಗೂ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಪ್ರಮಾಣವಚನ ಬೋಧಿಸಿದರು.ಈ ಮೂಲಕ ರಾಜ್ಯ ಬುಡಕಟ್ಟು ನಾಯಕ ಹಾಗೂ ರಾಜ್ಯದಲ್ಲಿ ‘ಜಾರ್ಖಂಡ್ ಹುಲಿ’ ಎಂದೇ ಖ್ಯಾತರಾಗಿರುವ ಚಂಪೈ ಜಾರ್ಖಂಡ್‌ನ 12ನೇ ಮುಖ್ಯಮಂತ್ರಿ ಎಂಬ ಕೀರ್ತಿಗೆ ಭಾಜನರಾದರು. ಇನ್ನು ಫೆ.5ರ ಸೋಮವಾರದಂದು ಚಂಪೈ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ)ದ ಬಂಧನಕ್ಕೊಳಗಾಗಿರುವ ನಿರ್ಗಮಿತ ಮುಖ್ಯಮಂತ್ರಿ ಹೇಮಂತ್ ಸೊರೇನ್ ರಾಜೀನಾಮೆಯಿಂದ ಸಿಎಂ ಹುದ್ದೆ ತೆರವಾಗಿತ್ತು.ಆಡಳಿತ ಕೂಟದ ಶಾಸಕರು ಹೈದರಾಬಾದ್‌ಗೆ ಶಿಫ್ಟ್ರಾಜ್ಯ ರಾಜಕೀಯ ಅಸ್ಥಿರತೆಯ ಲಾಭ ಪಡೆಯಲು ಬಿಜೆಪಿ ಮುಂದಾಗಿದ್ದು, ಕುದುರೆ ವ್ಯಾಪಾರಕ್ಕೆ ಯತ್ನಿಸುತ್ತಿದೆ ಎಂಬ ಅನುಮಾನದ ಮೇರಗೆ ಜೆಎಂಎಂ-ಕಾಂಗ್ರೆಸ್ ಶಾಸಕರನ್ನು ಹೈದರಾಬಾದ್‌ನ ರೆಸಾರ್ಟ್ ಒಂದಕ್ಕೆ ಶುಕ್ರವಾರ ಸ್ಥಳಾಂತರಿಸಲಾಗಿದೆ. ಇವರೆಲ್ಲ ಸೋಮವಾರ ವಿಶ್ವಾಸಮತ ಯಾಚನೆ ವೇಳೆ ರಾಜ್ಯಕ್ಕೆ ಮರಳಲಿದ್ದಾರೆ. ವಿಧಾನಸಭೆಯ 81 ಶಾಸಕರ ಪೈಕಿ ಜೆಎಂಎಂ ಮೈತ್ರಿ 43 ಶಾಸಕರನ್ನು ಹೊಂದಿದೆ. ಬಹುಮತ ಸಾಬೀತಿಗೆ 41 ಶಾಸಕರು ಸಾಕು.