ಸಾರಾಂಶ
ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ, ತೆಲುಗುದೇಶಂ ನಾಯಕ ನಾರಾ ಚಂದ್ರಬಾಬು ನಾಯ್ಡು ಅವರು ಗುರುವಾರ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ತಿರುಮಲ: ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ, ತೆಲುಗುದೇಶಂ ನಾಯಕ ನಾರಾ ಚಂದ್ರಬಾಬು ನಾಯ್ಡು ಅವರು ಗುರುವಾರ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಇದೇ ವೇಳೆ, ತಿರುಪತಿ-ತಿರುಮಲ ದೇವಾಲಯದ ಆಡಳಿತವನ್ನು ‘ಸ್ವಚ್ಛಗೊಳಿಸುವ’ ಹಾಗೂ ದೇಗುಲ ಪರಿಸರದಲ್ಲಿ ‘ಹಿಂದೂ ಧರ್ಮ ರಕ್ಷಿಸುವ’ ಪ್ರತಿಜ್ಞೆ ಮಾಡಿದರು.
ಈ ಹಿಂದೆ ಜಗನ್ ಮೋಹನ ರೆಡ್ಡಿ ಅವರ ಸರ್ಕಾರದ ಆಡಳಿತದ ವೇಳೆ ಅನ್ಯಧರ್ಮೀಯ ಚಟುವಟಿಕೆಗಳು ತಿರುಮಲ ಪರಿಸರದಲ್ಲಿ ಹಾಗೂ ಟಿಟಿಡಿಯಲ್ಲಿ ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಚಂದ್ರಬಾಬು ಹೇಳಿಕೆ ಮಹತ್ವ ಪಡೆದಿದೆ.ಕುಟುಂಬ ಸಮೇತರಾಗಿ ತಿರುಮಲಕ್ಕೆ ಆಗಮಿಸಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ನಾಯ್ಡು, ‘ಹಿಂದಿನ ಜಗನ್ ಆಡಳಿತದಲ್ಲಿ ವೆಂಕಟೇಶ್ವರ ದೇವಸ್ಥಾನವನ್ನು ನೋಡಿಕೊಳ್ಳುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಲ್ಲಿ ಅಕ್ರಮಗಳು ನಡೆದಿವೆ. ಹೀಗಾಗಿ ತಿರುಮಲದಲ್ಲಿ ಭ್ರಷ್ಟಾಚಾರ ತೊಡೆದುಹಾಕಲು ಮತ್ತು ಹಿಂದೂ ಧರ್ಮ ರಕ್ಷಿಸಲು ನಾನು ಬದ್ಧನಾಗಿದ್ದೇನೆ’ ಎಂದರು.
‘ನಾನು ತಿರುಮಲದಿಂದಲೇ ಆಡಳಿತದ ಶುದ್ಧೀಕರಣ ಪ್ರಾರಂಭಿಸುತ್ತೇನೆ. ತಿರುಮಲ ಅಪವಿತ್ರಗೊಳಿಸುವುದು ಸ್ವೀಕಾರಾರ್ಹವಲ್ಲ. ಗೋವಿಂದನ ನಾಮಸ್ಮರಣೆ ಮಾತ್ರ ತಿರುಮಲ ಉಳಿಯುತ್ತದೆ’ ಎಂದು ಅವರು ಹೇಳಿದರು.ಪತ್ನಿ, ಪುತ್ರ ನಾರಾ ಲೋಕೇಶ್, ಸೊಸೆ ಹಾಗೂ ಇತರ ಸಂಬಂಧಿಕರು ಈ ವೇಳೆ ಉಪಸ್ಥಿತರಿದ್ದರು.