ಸಾರಾಂಶ
ಭಾರತದಲ್ಲಿನ ಚೀತಾಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದ್ದು ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಚೀತಾದಿಂದ ಮೊದಲ ಬಾರಿಗೆ ಸಂತಾನೋತ್ಪತ್ತಿಯಾಗಿದೆ.
ಕುನೋ(ಮ.ಪ್ರ): ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆಯಾದ ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ‘ಗಾಮಿನಿ’ ಹೆಸರಿನ ಚೀತಾ ಕುನೋ ರಕ್ಷಿತಾರಣ್ಯದಲ್ಲಿ 5 ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ. ಇದರೊಂದಿಗೆ ಭಾರತದಲ್ಲಿ ಚೀತಾಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ‘ಗಾಮಿನಿ ಎಂಬ ಚೀತಾ ಐದು ಮರಿಗಳಿಗೆ ಜನ್ಮ ನೀಡುವುದರೊಂದಿಗೆ ಭಾರತದಲ್ಲಿಯೇ ಹುಟ್ಟಿದ ಚೀತಾಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಅಲ್ಲದೆ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಚೀತಾಗಳ ಪೈಕಿ ಮೊದಲ ನಡೆದ ಸಂತಾನೋತ್ಪತ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಚೀತಾಗೆ ತಮ್ಮ ಗರ್ಭಧಾರಣಾ ಸಮಯದಲ್ಲಿ ಯಾವುದೇ ಅಡಚಣೆ ಮತ್ತು ಒತ್ತಡವಾಗದಂತೆ ನೋಡಿಕೊಂಡ ಎಲ್ಲ ಅರಣ್ಯ ಸಿಬ್ಬಂದಿಗೆ ಅಭಿನಂದಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಈ ಹಿಂದೆ ಕುನೋದಲ್ಲಿ ಮರಿಗಳಿಗೆ ಜನ್ಮ ನೀಡಿದ್ದ ಚೀತಾಗಳು ನಮೀಬಿಯಾದಿಂದ ಬಂದಿದ್ದವು.ಸಂಖ್ಯೆಯ ಏರಿಳಿತ:ಪ್ರಾಜೆಕ್ಟ್ ಚೀತಾದಡಿಯಲ್ಲಿ 2022ರಲ್ಲಿ 8 ಚೀತಾಗಳನ್ನು ನಮಿಬಿಯಾದಿಂದಲೂ, 2023ರಲ್ಲಿ 12 ಚೀತಾಗಳನ್ನು ದ.ಆಫ್ರಿಕಾದಿಂದಲೂ ತರಲಾಗಿತ್ತು. ಈ ನಡುವೆ ಜ್ವಾಲಾ ಎಂಬ ಚೀತಾ 4 ಮರಿಗಳಿಗೆ ಜನ್ಮ ನೀಡಿತ್ತು. ಇದರಲ್ಲಿ 3 ಮರಿಗಳು ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಸಾವನ್ನಪ್ಪಿದರೆ, 6 ದೊಡ್ಡ ಚೀತಾಗಳೂ ವಿವಿಧ ಕಾರಣಗಳಿಗೆ ಸಾವನ್ನಪ್ಪಿದ್ದವು. ನಂತರ ಜ.3, 2024ರಂದು ಆಶಾ ಚಿರತೆ 3 ಮರಿಗಳಿಗೆ ಜನ್ಮ ನೀಡಿತ್ತು. ಮಂಗಳವಾರ ಶೌರ್ಯ ಚೀತಾ ಸಾವನ್ನಪ್ಪಿದ್ದರಿಂದ ಈವರೆಗೆ ಭಾರತದಲ್ಲಿ ಒಟ್ಟು 10 ಚೀತಾಗಳು ಸಾವನ್ನಪ್ಪಿದಂತಾಗಿದೆ. ಚೀತಾಗಳ ಸಂಖ್ಯೆ 18ಕ್ಕೆ ಕುಸಿದಿತ್ತು. ಬಳಿಕ ಜ.20ರಂದು ಜ್ವಾಲಾ ಎಂಬ ಚೀತಾ 3 ಮರಿಗಳಿಗೆ ಜನ್ಮ ನೀಡಿದಾಗ 21ಕ್ಕೇರಿತ್ತು. ಇಂದು ಗಾಮಿನಿ 5 ಮರಿಗಳಿಗೆ ಜನ್ಮ ನೀಡುವುದರೊಂದಿಗೆ ಒಟ್ಟು ಚೀತಾಗಳ ಸಂಖ್ಯೆ 26ಕ್ಕೇರಿಕೆಯಾಗಿದೆ.