ಸಾರಾಂಶ
ಚೆನ್ನೈನಲ್ಲಿ ನಡೆದ ಭಾರತೀಯ ವಾಯುಪಡೆಯ 92ನೇ ಸ್ಥಾಪನಾ ದಿನಾಚರಣೆಯ ಏರ್ ಶೋ ವೇಳೆ ನೂಕುನುಗ್ಗಲು ಮತ್ತು ಬಿಸಿಲಿನ ಹೊಡೆತಕ್ಕೆ 4 ಜನರು ಸಾವನ್ನಪ್ಪಿದ್ದಾರೆ ಮತ್ತು 230 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ.
ಚೆನ್ನೈ: ಭಾರತೀಯ ವಾಯುಪಡೆಯ 92ನೇ ಸ್ಥಾಪನಾ ದಿನದ ಅಂಗವಾಗಿ ಇಲ್ಲಿನ ಮರೀನಾ ಬೀಚ್‌ನಲ್ಲಿ ನಡೆದ ವೈಮಾನಿಕ ಪ್ರದರ್ಶನ (ಏರ್ ಶೋ) ವೇಳೆ ಭಾರಿ ನೂಕುನುಗ್ಗಲು ಉಂಟಾಗಿದ್ದು, ನೂಕುನುಗ್ಗಲು ಹಾಗೂ ಬಿಸಿಲಾಘಾತಕ್ಕೆ 4 ಜನ ಬಲಿಯಾಗಿದ್ದಾರೆ ಹಾಗೂ 230ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.
ವಾಯುಪಡೆ ಸಂಸ್ಥಾಪನಾ ದಿನ ನಿಮಿತ್ತ ಇದು ದಕ್ಷಿಣ ಭಾರತದಲ್ಲಿ ನಡೆದ ಮೊದಲ ಏರ್ ಶೋ ಆಗಿತ್ತು. ಇದನ್ನು ವೀಕ್ಷಿಸಲು 15 ಲಕ್ಷ ಜನ ಆಗಮಿಸಿದ್ದರು. ಮರೀನಾ ಬೀಚ್‌ನಲ್ಲಿ ಇಷ್ಟು ಜನ ಸೇರಲು ಸಾಕಷ್ಟು ಮೂಲಸೌಕರ್ಯ ಒದಗಿಸಿರಲಿಲ್ಲ ಎನ್ನಲಾಗಿದೆ. ಅಲ್ಲದೆ, ಶೋ ನೋಡಲು ಸ್ಥಳೀಯ ರೈಲು ನಿಲ್ದಾಣ ಹಾಗೂ ರಸ್ತೆಗಳಲ್ಲಿ ಭಾರಿ ಜನಸಂದಣಿ ಮತ್ತು ವಾಹನ ಸಂದಣಿ ಏರ್ಪಟ್ಟಿತ್ತು.
ಈ ವೇಳೆ ಶೋ ಸ್ಥಳದಲ್ಲಿ ಬಿಸಿಲಾಘಾತ ಹಾಗೂ ನೂಕುನುಗ್ಗಲಿಗೆ 3 ಜನರು ಬಲಿಯಾಗಿದ್ದಾರೆ. ವೈದ್ಯರು ಒಬ್ಬರ ಸಾವನ್ನು ಬಿಸಿಲಾಘಾತದಿಂದ (ಸನ್ ಸ್ಟ್ರೋಕ್) ಆಗಿದ್ದು ಎಂದು ದೃಢಪಡಿಸಿದ್ದಾರೆ.
ಮೈನವಿರೇಳಿಸಿದ ಏರ್ ಶೋ:
ಏರ್ ಶೋ ವೇಳೆ ಚೆನ್ನೈ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ನಿಯಂತ್ರಕರ ನಿಯಂತ್ರಣದಲ್ಲಿ ರಫೇಲ್, ದೇಶೀಯವಾಗಿ ತಯಾರಿಸಲಾದ ಅತ್ಯಾಧುನಿಕ ಲಘು ಯುದ್ಧ ವಿಮಾನ ತೇಜಸ್, ಲಘು ಯುದ್ಧ ಹೆಲಿಕಾಪ್ಟರ್ ಪ್ರಚಂಡ್, ಡಕೋಟಾ ಸೇರಿದಂತೆ 72 ವಿಮಾನಗಳ ಪ್ರದರ್ಶನ ನಡೆಯಿತು.ಇದನ್ನು ಲಿಮ್ಕಾ ದಾಖಲೆಗೆ ಸೇರಿಸುವ ಉದ್ದೇಶದೊಂದಿಗೆ ಆಯೋಜಿಸಲಾಗಿತ್ತು.