ಸಾರಾಂಶ
ದಂತೇವಾಡ: ಶುಕ್ರವಾರ ಛತ್ತೀಸ್‌ಗಢದ ಬಸ್ತರ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿ ವೇಳೆ ಮೃತ ಇನ್ನೂ ಮೂವರು ನಕ್ಸಲರ ಶವ ಶನಿವಾರ ಪತ್ತೆಯಾಗಿದೆ. ಇದರೊಂದಿಗೆ ಮೃತ ನಕ್ಸಲರ ಸಂಖ್ಯೆ 31ಕ್ಕೆ ಏರಿದೆ. ಈ ನಡುವೆ ಶುಕ್ರವಾರದ ಬೃಹತ್ ಕಾರ್ಯಾಚರಣೆಯಲ್ಲಿ 1500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಎನ್‌ಕೌಂಟರ್ ನಡೆದ ಸ್ಥಳ ಅತ್ಯಂತ ದುರ್ಗಮ ಪ್ರದೇಶವಾಗಿತ್ತು. ಅಲ್ಲಿಗೆ ತೆರಳಲು ಭದ್ರತಾ ಸಿಬ್ಬಂದಿ ಮೊದಲು 10 ಕಿ.ಮೀ ದೂರದ ಮಣ್ಣು, ಕೆಸರು ತುಂಬಿದ ಜಾಗದಲ್ಲಿ ಬೈಕ್ ಮೂಲಕ ಸಾಗಬೇಕು. ಬಳಿಕ 12 ಕಿ.ಮೀ ನಷ್ಟು ಗುಡ್ಡ ಹತ್ತಬೇಕು. ಈ ದೂರ ಕ್ರಮಿಸಲು 48 ಗಂಟೆ ಸಮಯಬೇಕು.
ನಾರಾಯಣಪುರ ಮತ್ತು ದಂತೇವಾಡ ಗಡಿಯಲ್ಲಿ ಬರುವ ಅರಣ್ಯದಲ್ಲಿ ಕನಿಷ್ಠ 50 ನಕ್ಸಲರು ಇದ್ದಾರೆ ಎಂಬ ಖಚಿತ ಸುಳಿವಿನ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿತ್ತು. ಅದರಂತೆ ಅ.3ರಂದು ಆರಂಭಿಸಲಾದ ಕಾರ್ಯಾಚರಣೆ ಅ.5ರಂದು ಮಧ್ಯಾಹ್ನ 1 ಗಂಟೆಗೆ ನಕ್ಸಲರೊಂದಿಗೆ ಮುಖಾಮುಖಿಯೊಂದಿಗೆ ಮಹತ್ವದ ಘಟ್ಟ ತಲುಪಿತ್ತು. ಈ ವೇಳೆ ನಡೆದ ಸತತ ಗುಂಡಿನ ಚಕಮಕಿಯಲ್ಲಿ 31 ನಕ್ಸಲರು ಸಾವನ್ನಪ್ಪುವುದರೊಂದಿಗೆ ದಾಳಿ ತಾರ್ಕಿಕ ಅಂತ್ಯ ಕಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ನಕ್ಸಲರ ತಲೆಗಿತ್ತು ₹1.3 ಕೋಟಿ ಬಹುಮಾನ
ದಂತೇವಾಡ: ಶುಕ್ರವಾರ ನಕ್ಸಲರ ಮೇಲೆ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತರಾದ 31 ನಕ್ಸಲರಲ್ಲಿ 16 ಜನರ ಗುರುತು ಪತ್ತೆಯಾಗಿದ್ದು, ಇವರ ಪತ್ತೆಗಾಗಿ ಭದ್ರತಾ ಪಡೆಗಳು 1.3 ಕೋಟಿ ರು. ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ನಿತಿ ಅಲಿಯಾಸ್ ಊರ್ಮಿಳಾ ಮೇಲೆ 25 ಲಕ್ಷ ರು. ಬಹುಮಾನವಿತ್ತು. ಮಿಕ್ಕಂತೆ ಸುರೇಶ್ ಸಲಾಂ ಅಮತ್ತು ಮೀನಾ ಮಡ್ಕಂ ಪತ್ತೆಗೆ 8 ಲಕ್ಷ ರು. ಬಹುಮಾನ ನಿಗದಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.