ನಾಯ್ಡು ದೇಶದ ನಂ.1 ಶ್ರೀಮಂತ ಸಿಎಂ, ಸಿದ್ದು ನಂ.3! ಬಡ ಸಿಎಂ ಯಾರು ?

| N/A | Published : Aug 24 2025, 02:00 AM IST / Updated: Aug 24 2025, 06:56 AM IST

Siddaramaiah

ಸಾರಾಂಶ

ನವದೆಹಲಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ದೇಶದಲ್ಲೇ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದರೆ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರು ಅತ್ಯಂತ ಬಡ ಸಿಎಂ! ಇನ್ನು ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ  ಸಿದ್ದರಾಮಯ್ಯ ಅವರು ಮೂರನೇ ಸ್ಥಾನದಲ್ಲಿದ್ದಾರೆ.

 ನವದೆಹಲಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ದೇಶದಲ್ಲೇ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದರೆ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರು ಅತ್ಯಂತ ಬಡ ಸಿಎಂ! ಇನ್ನು ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರನೇ ಸ್ಥಾನದಲ್ಲಿದ್ದಾರೆ.

ಚುನಾವಣೆ ವೇಳೆ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್‌ ಆಧರಿಸಿ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌(ಎಡಿಆರ್‌) ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಸಂಸ್ಥೆಯು ಭಾರತದ ಶ್ರೀಮಂತ ಮುಖ್ಯಮಂತ್ರಿಗಳ ಕುರಿತ ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಮಾಹಿತಿ ಇದೆ. ಜೊತೆಗೆ ದೇಶದ 30 ಮುಖ್ಯಮಂತ್ರಿಗಳು (ಮಣಿಪುರವನ್ನು ರಾಷ್ಟ್ರಪತಿ ಆಳ್ವಿಕೆ ಇದ್ದ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ) ಒಟ್ಟಾರೆ 1,600 ಕೋಟಿ ರು. ಆಸ್ತಿ ಹೊಂದಿದ್ದಾರೆ. ಸರಾಸರಿ ನೋಡಿದರೆ ಪ್ರತಿ ಸಿಎಂಗಳ ಆಸ್ತಿ 54.42 ಕೋಟಿ ರು.ನಷ್ಟಾಗುತ್ತದೆ. ವಿಶೇಷವೆಂದರೆ 30 ಮುಖ್ಯಮಂತ್ರಿಗಳ ಒಟ್ಟಾರೆ ಆಸ್ತಿಯಲ್ಲಿ ಅರ್ಧಕ್ಕೂ ಹೆಚ್ಚು ಆಂಧ್ರ ಮುಖ್ಯಮಂತ್ರಿ ಅವರ ಕೈಯಲ್ಲೇ ಇದೆ. ಅಲ್ಲದೆ, 30 ಸಿಎಂಗಳಲ್ಲಿ ಇಬ್ಬರು ಮುಖ್ಯಮಂತ್ರಿಗಳಷ್ಟೇ ಶತಕೋಟ್ಯಧಿಪತಿಗಳಿದ್ದಾರೆ.

ನಾಯ್ಡು ನಂ.1:

ತೆಲುಗು ದೇಶಂ ಪಕ್ಷದ ಮುಖ್ಯಸ್ಥರೂ ಆಗಿರುವ ಚಂದ್ರಬಾಬು ನಾಯ್ಡು ಅವರು ಒಟ್ಟಾರೆ 931 ಕೋಟಿ ರು. ಆಸ್ತಿ ಹೊಂದಿದ್ದು, ಇದರಲ್ಲಿ 810 ಕೋಟಿ ರು. ಚರ ಮತ್ತು 121 ಕೋಟಿ ರು. ಸ್ಥಿರ ಆಸ್ತಿ ಆಗಿದೆ. ಇನ್ನು ಅರುಣಾಚಲ ಪ್ರದೇಶದ ಬಿಜೆಪಿ ಸಿಎಂ ಪೇಮ ಖಂಡು ಅವರು ಎರಡನೇ ಸ್ಥಾನದಲ್ಲಿದ್ದಾರೆ. ಇವರ ಒಟ್ಟಾರೆ ಆಸ್ತಿ 332 ಕೋಟಿ ರುಪಾಯಿ. ಖಂಡು ಅವರು 165 ಕೋಟಿ ರು. ಚರ ಹಾಗೂ 167 ಕೋಟಿ ರು.ಸ್ಥಿರ ಆಸ್ತಿ ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದು, ಇವರ ಒಟ್ಟು ಆಸ್ತಿ 51 ಕೋಟಿ ರು. ಆಗಿದೆ. ಇದರಲ್ಲಿ 21 ಕೋಟಿ ರು. ಚರ ಆಸ್ತಿಯಾದರೆ, 30 ಕೋಟಿ ಸ್ಥಿರ ಆಸ್ತಿ.

ಬಡ ಸಿಎಂ ಮಮತಾ:

ತೃಣಮೂಲ ಕಾಂಗ್ರೆಸ್‌ ಅಧ್ಯಕ್ಷೆಯೂ ಆಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇಶದ ಅತ್ಯಂತ ಬಡ ಸಿಎಂ. ಅವರ ಅವರ ಒಟ್ಟು ಘೋಷಿತ ಆಸ್ತಿ 15.38 ಲಕ್ಷ. ವಿಶೇಷವೆಂದರೆ ಅವರು ಯಾವುದೇ ಸ್ಥಿರ ಆಸ್ತಿ ಹೊಂದಿಲ್ಲ.

ಇನ್ನು ಅತ್ಯಂತ ಕಡಿಮೆ ಆಸ್ತಿ ಹೊಂದಿರುವವರ ಪಟ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರೂ ಇದ್ದಾರೆ. ಅವರು ಒಟ್ಟಾರೆ 55.24 ಲಕ್ಷ ಚರ ಆಸ್ತಿ ಹೊಂದಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು 1.18 ಕೋಟಿ ರು. ಆಸ್ತಿ ಹೊಂದಿದ್ದಾರೆ.

ಹೆಚ್ಚಿನ ಸಾಲ ಹೊಂದಿದ ಸಿಎಂ:

11 ಮುಖ್ಯಮಂತ್ರಿಗಳು 1 ಕೋಟಿಗೂ ಹೆಚ್ಚು ಸಾಲ ಘೋಷಿಸಿದ್ದಾರೆ. ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಹೆಸರಿನಲ್ಲಿ 180 ಕೋಟಿ ರು. ಸಾಲ ಇದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 23 ಕೋಟಿ ಸಾಲ ಮಾಡಿದ್ದರೆ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು 10 ಕೋಟಿಗೂ ಹೆಚ್ಚು ಸಾಲ ಘೋಷಿಸಿದ್ದಾರೆ.

Read more Articles on