ಸಾರಾಂಶ
ತಿರುಮಲದಲ್ಲಿ ಲಡ್ಡುವಿನ ಗುಣಮಟ್ಟದ ಬಗ್ಗೆ ಭಕ್ತರು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ತಿರುಪತಿ : ತಿರುಮಲ ಬೆಟ್ಟದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಈಗಿನ ಲಡ್ಡು ಪ್ರಸಾದದ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಶನಿವಾರ ಹೇಳಿದ್ದಾರೆ.
ತಿರುಮಲ ಬೆಟ್ಟದಲ್ಲಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಸ್ಥಾಪಿಸಿರುವ ವಕುಳಮಠದ ಕೇಂದ್ರೀಕೃತ ಅಡುಗೆ ಕೋಣೆಯನ್ನು ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ನಾಯ್ಡು, ‘ಲಡ್ಡು ಪ್ರಸಾದ ತಯಾರಿಸಲು ಬಳಸುವ ಪದಾರ್ಥಗಳ ಗುಣಮಟ್ಟವನ್ನು ಪರೀಕ್ಷಿಸಲು ಲ್ಯಾಬ್‌ಗಳನ್ನು ಸ್ಥಾಪಿಸಲಾಗುತ್ತದೆ. ಇದರ ಜತೆಗೆ ಅಗತ್ಯವಿದ್ದರೆ, ಟಿಟಿಡಿ ಐಐಟಿ ತಜ್ಞರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆದುಕೊಳ್ಳಲಿದೆ’ ಎಂದರು.‘ಹಲವು ಜನರು ಲಡ್ಡು ಗುಣಮಟ್ಟದಿಂದ ತೃಪ್ತಿ ಹೊಂದಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ತಿರುಮಲ ಬೆಟ್ಟದಲ್ಲಿ ಲಡ್ಡುವಿನ ಗುಣಮಟ್ಟದ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ ಹಲವಾರು ಘಟನೆಗಳನ್ನು (ಹಿಂದಿನ ಆಡಳಿತದಲ್ಲಿ) ನಾವು ನೋಡಿದ್ದೇವೆ. ಅದು ಶುಭಸೂಚಕವಲ್ಲ ಎಂದು ಭಕ್ತರು ಹೇಳಿದ್ದರು. ಈ ಹಿಂದೆ ಆ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿತ್ತು. ಇಂದು ನಾವು ಭಕ್ತರಿಂದ ಪ್ರತಿಕ್ರಿಯೆ ಪಡೆಯುತ್ತಿದ್ದೇವೆ’ ಎಂದು ಅವರು ಹೇಳಿದರು.‘ಪ್ರಸ್ತುತ ಆಡಳಿತವು ಯಾವುದೇ ಅಶುದ್ಧತೆಯ ಸಮಸ್ಯೆಗಳನ್ನು ಸಹಿಸುವುದಿಲ್ಲ ಎಂದು ಪ್ರತಿಪಾದಿಸಿದ ಅವರು, ‘ಟಿಟಿಡಿ ಭಗವಾನ್ ಬಾಲಾಜಿಯ ಪವಿತ್ರತೆಯನ್ನು ರಕ್ಷಿಸಲು ಬದ್ಧವಾಗಿದೆ.
ಅದು ನಮ್ಮ ಬದ್ಧತೆ. ಅದು ನಮ್ಮ ಸಮರ್ಪಣೆ. ನಾವು ನಮ್ಮ ಕೈಲಾದಷ್ಟು ಮಾಡುತ್ತೇವೆ. ನೀವು ಸುಧಾರಣೆಗಳನ್ನು ನೋಡುತ್ತಿದ್ದೀರಿ. ಭವಿಷ್ಯದಲ್ಲಿ ವಸ್ತುಗಳ ಪರಿಪೂರ್ಣ ನಿರ್ವಹಣೆಯೊಂದಿಗೆ ನಾವು ಅದನ್ನು ತಾರ್ಕಿಕ ತೀರ್ಮಾನಕ್ಕೆ ಕೊಂಡೊಯ್ಯುತ್ತೇವೆ. ತಿರುಮಲ ಬೆಟ್ಟದಲ್ಲಿ ಗೋವಿಂದ ನಾಮವನ್ನು ಹೊರತುಪಡಿಸಿ ಬೇರೆ ಯಾವುದೇ ಶಬ್ದ ಕೇಳಬಾರದು’ ಎಂದರು.ಇದಕ್ಕೂ ಮುನ್ನ, ಟಿಟಿಡಿಯ ಹಿರಿಯ ಅಧಿಕಾರಿಗಳೊಂದಿಗೆ ನಾಯ್ಡು ಅವರು ಪರಿಶೀಲನಾ ಸಭೆ ನಡೆಸಿದ ಅವರು, ‘ಪ್ರಸಾದ ತಯಾರಿಸಲು ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಮಾತ್ರ ತರಿಸಿಕೊಳ್ಳಬೇಕು. ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ನೂಕುನುಗ್ಗಲು ಉಂಟಾಗದಂತೆ ಕ್ರಮಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.
‘ದೇವಾಲಯದ ಅಲಂಕಾರವು ಸರಳವಾಗಿರಬೇಕು. ಅತಿ ಅದ್ಧೂರಿ ಅಲಂಕಾರ ಮಾಡಿ ಅನಗತ್ಯ ವೆಚ್ಚ ಮಾಡಬಾರದರು. ತಿರುಮಲದಲ್ಲಿ ಅರಣ್ಯ ಪ್ರದೇಶವನ್ನು ಶೇ.72ರಿಂದ 80ಕ್ಕೆ ಹೆಚ್ಚಿಸಬೇಕು’ ಎಂದು ನಾಯ್ಡು ಸೂಚಿಸಿದರು.
ನಾಯ್ಡು ಶುಕ್ರವಾರ ರಾತ್ರಿ ಇಲ್ಲಿ ತಂಗಿದ್ದರು ಮತ್ತು 9 ದಿನಗಳ ಬ್ರಹ್ಮೋತ್ಸವ ನಿಮಿತ್ತ ರೇಷ್ಮೆ ವಸ್ತ್ರ ಅರ್ಪಿಸಿದರು. 2025ರ ತಿರುಮಲ ದೇವಸ್ಥಾನದ ಕ್ಯಾಲೆಂಡರ್ ಮತ್ತು ಡೈರಿಯನ್ನು ಸಹ ಸಿಎಂ ಬಿಡುಗಡೆ ಮಾಡಿದರು.