ಚೀನಾದಲ್ಲಿ ವೃದ್ಧರ ಸಂಖ್ಯೆ ವೃದ್ಧಿ- ಕೆಲಸಗಾರರ ಸಂಖ್ಯೆಯಲ್ಲಿಯೂ ಇಳಿಕೆ ನಿವೃತ್ತಿ ವಯಸ್ಸು ಏರಿಕೆ!

| Published : Sep 14 2024, 01:54 AM IST / Updated: Sep 14 2024, 08:10 AM IST

ಸಾರಾಂಶ

ವೃದ್ಧರ ಸಂಖ್ಯೆ ವೃದ್ಧಿಸುತ್ತಿರುವ ಚೀನಾದಲ್ಲಿ ಜನಸಂಖ್ಯೆ ಕುಸಿಯುತ್ತಿದ್ದು, ಕೆಲಸಗಾರರ ಸಂಖ್ಯೆಯಲ್ಲಿಯೂ ಇಳಿಕೆಯಾಗುತ್ತಿದೆ. ಪರಿಣಾಮವಾಗಿ ನೌಕರರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಲು ಇಲ್ಲಿನ ಸಂಸತ್ತು ಅನುಮೋದನೆ ನೀಡಿದ್ದು, ಇದು ಮುಂದಿನ ವರ್ಷ ಜನವರಿಯಿಂದ ಜಾರಿಗೆ ಬರಲಿದೆ.

ಬೀಜಿಂಗ್‌: ವೃದ್ಧರ ಸಂಖ್ಯೆ ವೃದ್ಧಿಸುತ್ತಿರುವ ಚೀನಾದಲ್ಲಿ ಜನಸಂಖ್ಯೆ ಕುಸಿಯುತ್ತಿದ್ದು, ಕೆಲಸಗಾರರ ಸಂಖ್ಯೆಯಲ್ಲಿಯೂ ಇಳಿಕೆಯಾಗುತ್ತಿದೆ. ಪರಿಣಾಮವಾಗಿ ನೌಕರರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಲು ಇಲ್ಲಿನ ಸಂಸತ್ತು ಅನುಮೋದನೆ ನೀಡಿದ್ದು, ಇದು ಮುಂದಿನ ವರ್ಷ ಜನವರಿಯಿಂದ ಜಾರಿಗೆ ಬರಲಿದೆ.

ಇದರ ಪ್ರಕಾರ ಪುರುಷರ ನಿವೃತ್ತಿ ವಯಸ್ಸನ್ನು 63 ವರ್ಷಕ್ಕೆ ಹಾಗೂ ಮಹಿಳೆಯರ ನಿವೃತ್ತಿಯನ್ನು ಅವರ ವೃತ್ತಿಗನುಗುಣವಾಗಿ 55 ಹಾಗೂ 58ಕ್ಕೆ ಏರಿಸಲಾಗುವುದು. ಪ್ರಸ್ತುತ ಪುರುಷರು 60ನೇ ವಯಸ್ಸಿಗೆ ನಿವೃತ್ತಿ ಆಗುತ್ತಿದ್ದಾರೆ. ಶ್ರಮದ (ಬ್ಲೂ ಕಾಲರ್‌) ಕೆಲಸ ಮಾಡುವ ಮಹಿಳೆಯರು 50 ಮತ್ತು ಕಚೇರಿಗಳಲ್ಲಿ (ವೈಟ್‌ ಕಾಲರ್‌) ಕೆಲಸ ಮಾಡುವ ಮಹಿಳೆಯರು 55 ವಯಸ್ಸಿಗೆ ನಿವೃತ್ತಿ ಹೊಂದುತ್ತಿದ್ದಾರೆ.

‘ಜನಸಂಖ್ಯೆ ಇಳಿಕೆ ಕಾರಣ ಕೆಲಸಗಾರರ ಸಂಖ್ಯೆ ಕುಸಿಯುತ್ತಿದೆ. ನಿವೃತ್ತಿ ವಯಸ್ಸಿಗೆ ಹತ್ತಿರಾಗುತ್ತಿರುವವರ ಸಂಖ್ಯೆ ಅಧಿಕವಾಗಿದ್ದು, ಪಿಂಚಣಿ ನಿಧಿ ನೀಡಲು ಕಷ್ಟವಾಗುತ್ತಿದೆ. ಆದಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಚೀನಾದ ಜನಸಂಖ್ಯೆ ಮತ್ತು ಆರ್ಥಿಕತೆಯ ಮೇಲೆ ಅದು ಬೀರುವ ಪ್ರಭಾವದ ಬಗ್ಗೆ ಸಂಶೋಧನೆ ನಡೆಸಿದ ಆಸ್ಟ್ರೇಲಿಯಾದ ವಿಕ್ಟೋರಿಯಾ ವಿಶ್ವವಿದ್ಯಾಲಯದ ಹಿರಿಯ ಸಂಶೋಧಕ ಕ್ಸಿಯುಜಿಯಾನ್ ಪೆಂಗ್ ಹೇಳಿದ್ದಾರೆ.

ಪ್ರಸ್ತುತ ಭಾರತ 142 ಕೋಟಿ ಜನಸಂಖ್ಯೆ ಹೊಂದಿದ್ದರೆ, 2ನೇ ಸ್ಥಾನಕ್ಕೆ ಕುಸಿದಿರುವ ಚೀನಾದಲ್ಲಿ 141 ಕೋಟಿ ಜನಸಂಖ್ಯೆ ಇದೆ. ಮುಂದಿನ ದಿನಗಳಲ್ಲಿ ಚೀನಾ ಜನಸಂಖ್ಯೆ ಇನ್ನೂ ಕುಸಿಯುವ ಅಂದಾಜಿದೆ.