ಚೀನಾ ಕಿರಿಕ್‌: ಅರುಣಾಚಲದ 30 ಊರುಗಳಿಗೆ ಚೀನಿ ಹೆಸರು

| Published : Apr 02 2024, 01:02 AM IST / Updated: Apr 02 2024, 06:43 AM IST

ಸಾರಾಂಶ

ಅರುಣಾಚಲ ಪ್ರದೇಶ ತನ್ನದು ಎಂಬ ತಂಟೆ ಮುಂದುವರಿಸಿರುವ ಚೀನಾ, ರಾಜ್ಯದ ವಿವಿಧ ಸ್ಥಳಗಳ 30 ಹೊಸ ಚೀನೀ ಹೆಸರುಗಳ 4ನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ.

ಬೀಜಿಂಗ್‌: ಅರುಣಾಚಲ ಪ್ರದೇಶ ತನ್ನದು ಎಂಬ ತಂಟೆ ಮುಂದುವರಿಸಿರುವ ಚೀನಾ, ರಾಜ್ಯದ ವಿವಿಧ ಸ್ಥಳಗಳ 30 ಹೊಸ ಚೀನೀ ಹೆಸರುಗಳ 4ನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. 

ಅರುಣಾಚಲ ಚೀನಾದ್ದಲ್ಲ ಎಂದು ಭಾರತ ಪದೇ ಪದೇ ಹೇಳುತ್ತ ಆ ದೇಶದ ಹಕ್ಕು ಮಂಡನೆಯನ್ನು ತಿರಸ್ಕರಿಸುತ್ತಿದೆ. ಆದರೂ ಚೀನಾ ಮಾತ್ರ, ಅರುಣಾಚಲ ತನ್ನ ಅವಿಭಾಜ್ಯ ಅಂಗ ಎಂದು ಹೇಳುತ್ತಲೇ ಇದೆ. ಈ ನಿಮಿತ್ತ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಅರುಣಾಚಲ ಪ್ರದೇಶಕ್ಕೆ ‘ಜಂಗ್ನಾನ್‌’ ಎಂದು ಹೆಸರಿಟ್ಟು, ರಾಜ್ಯದ 30 ಊರುಗಳ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ದಕ್ಷಿಣ ಟಿಬೆಟ್‌ನ ಭಾಗ ಎಂಬುದು ಚೀನಾ ಪ್ರತಿಪಾದನೆಯಾಗಿದೆ.

ಈ ಹಿಂದೆ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಜಂಗ್ನಾನ್‌ನ (ಆರುಣಾಚಲ) 6 ಸ್ಥಳಗಳ ಪ್ರಮಾಣಿತ ಹೆಸರುಗಳ ಮೊದಲ ಪಟ್ಟಿಯನ್ನು 2017 ರಲ್ಲಿ ಬಿಡುಗಡೆ ಮಾಡಿತ್ತು. 15 ಸ್ಥಳಗಳ ಎರಡನೇ ಪಟ್ಟಿಯನ್ನು 2021ರಲ್ಲಿ ಹಾಗೂ 11 ಸ್ಥಳಗಳ 3ನೇ ಪಟ್ಟಿಯನ್ನು 2023ರಲ್ಲಿ ಬಿಡುಗಡೆ ಮಾಡಿತ್ತು. ಈಗಿನ 30 ಹೆಸರಿನೊಂದಿಗೆ ಚೀನಾ ಮರುನಾಮಕರಣ ಮಾಡಿದ ಊರುಗಳ ಸಂಖ್ಯೆ 62ಕ್ಕೇರಿದೆ.